ಪ್ರತಿ ವರ್ಷದ ಡಿಸೆಂಬರ್ ಹಾಗೆ ಈ ವರ್ಷವೂ ಸಹ ಚಂದನವನದ ಅಂಗಳದಲ್ಲಿ ಸ್ಟಾರ್ ಚಿತ್ರಗಳ ಹವಾ ಜೋರಾಗಿದೆ. ಕೊಲೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿ ಜೈಲಿನಲ್ಲಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ದಿ ಡೆವಿಲ್ ಬಿಡುಗಡೆಯಾದರೆ, ಸುದೀಪ್ ನಟನೆಯ ಮಾರ್ಕ್, ಶಿವಣ್ಣ, ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ನಟನೆಯ ಮಲ್ಟಿಸ್ಟಾರರ್ 45 ಸಹ ಬಿಡುಗಡೆಯಾಗಿದೆ.
ಹೀಗಾಗಿ ಬಾಕ್ಸ್ ಆಫೀಸ್‌ನಲ್ಲಿ ಕನ್ನಡ ಚಿತ್ರರಂಗ ಡಿಸೆಂಬರ್‌ನಲ್ಲಿ ಕ್ರಾಂತಿಯನ್ನೇ ಮಾಡಿದೆ ಎಂದು ಹೇಳಬಹುದು. ವರ್ಷವುದ್ದಕ್ಕೂ ಗೆಲುವಿಗಿಂತ ಸೋಲನ್ನೇ ಹೆಚ್ಚಾಗಿ ಕಂಡಿದ್ದ ಕನ್ನಡ ಚಿತ್ರರಂಗಕ್ಕೆ ಈ ಮೂರು ಚಿತ್ರಗಳು ಮೊದಲ ದಿನದ ಗಳಿಕೆಯಲ್ಲಿ ತುಸು ಸುಧಾರಣೆ ತಂದಿವೆ.
ಇನ್ನು ಈ ಮೂರು ಸ್ಟಾರ್ ಚಿತ್ರಗಳ ಪೈಕಿ ಮೊದಲ ದಿನ ಹೆಚ್ಚು ಗಳಿಕೆ ಮಾಡುವ ಚಿತ್ರ ಯಾವುದು ಎಂಬ ಚರ್ಚೆ ಹಾಗೂ ಪೈಪೋಟಿ ಅಭಿಮಾನಿ ವಲಯದಲ್ಲಿ ಡೆವಿಲ್ ಬಿಡುಗಡೆಯಾದಾಗಿನಿಂದಲೂ ಹುಟ್ಟಿಕೊಂಡಿದ್ದು, ಕೊನೆಗೂ ಮಾರ್ಕ್ ಹಾಗೂ 45 ಚಿತ್ರಗಳ ಬಿಡುಗಡೆ ಬಳಿಕ ಇದಕ್ಕೆ ಉತ್ತರ ಲಭಿಸಿದೆ.
ಅಂದಹಾಗೆ ಡೆವಿಲ್ ನಿರ್ಮಾಪಕರ ಪ್ರಕಾರ ಮೊದಲ ದಿನ ಬಾಕ್ಸ್ ಆಫೀಸ್‌ನಲ್ಲಿ 13.8 ಕೋಟಿ ಗಳಿಕೆ ಮಾಡಿತ್ತು. ಬಳಿಕ ಚಿತ್ರತಂಡ ಕಲೆಕ್ಷನ್ ಲೆಕ್ಕಾಚಾರವನ್ನು ಬಹಿರಂಗಪಡಿಸಲಿಲ್ಲ.
ಆದರೆ ಜನಪ್ರಿಯ ಸ್ಯಾಕ್‌ನಿಲ್ಕ್ ವೆಬ್‌ಸೈಟ್‌ನ ವರದಿಯ ಪ್ರಕಾರ ದಿ ಡೆವಿಲ್ ಮೊದಲ ದಿನ 10 ಕೋಟಿ ರೂ ನೆಟ್ ಕಲೆಕ್ಷನ್ ಮಾಡಿತ್ತು. ಇದೇ ವೆಬ್‌ಸೈಟ್ ಪ್ರಕಾರ ಮಾರ್ಕ್ ಮೊದಲ ದಿನದ ಗಳಿಕೆ 6.28 ಕೋಟಿ ರೂ ನೆಟ್ ಹಾಗೂ 45 ಚಿತ್ರದ ಮೊದಲ ದಿನದ ಗಳಿಕೆ 4.25 ಕೋಟಿ ನೆಟ್.
ಈ ಮೂಲಕ ಡಿಸೆಂಬರ್‌ನಲ್ಲಿ ತೆರೆಕಂಡ ಈ ಮೂರು ಚಿತ್ರಗಳ ಪೈಕಿ ಮೊದಲ ದಿನ ಅತಿಹೆಚ್ಚು ಗಳಿಕೆ ಮಾಡಿದ ಚಿತ್ರ ಎಂದು ಡೆವಿಲ್ ಹೆಸರು ಮಾಡಿದ್ದು, ಮಾರ್ಕ್ ಎರಡನೇ ಸ್ಥಾನದಲ್ಲಿದ್ದರೆ, ಮಲ್ಟಿಸ್ಟಾರರ್ 45 ಮೂರನೇ ಸ್ಥಾನದಲ್ಲಿದೆ.

