HomeIndia8 ತಿಂಗಳಿಂದ ಸಂಬಳವಿಲ್ಲ! ಕಚೇರಿ ಎದುರೇ ಭಿಕ್ಷೆ ಬೇಡಿ ಪ್ರತಿಭಟಿಸಿದ ಮಹಿಳಾ ಸರ್ಕಾರಿ ಅಧಿಕಾರಿ!

8 ತಿಂಗಳಿಂದ ಸಂಬಳವಿಲ್ಲ! ಕಚೇರಿ ಎದುರೇ ಭಿಕ್ಷೆ ಬೇಡಿ ಪ್ರತಿಭಟಿಸಿದ ಮಹಿಳಾ ಸರ್ಕಾರಿ ಅಧಿಕಾರಿ!

ಪಾಟ್ನಾ: ಸರ್ಕಾರಿ ಕೆಲಸ ಸಿಕ್ಕರೆ ಬದುಕು ಭದ್ರವಾಯಿತು, ಪ್ರತಿ ತಿಂಗಳು ಕೈತುಂಬ ಸಂಬಳ ಬರುತ್ತದೆ ಎಂಬ ನಿರೀಕ್ಷೆ ಹಲವರದ್ದು. ಆದರೆ ಸರ್ಕಾರಿ ಹುದ್ದೆಯಲ್ಲಿದ್ದರೂ ತಿಂಗಳುಗಟ್ಟಲೆ ಸಂಬಳವೇ ಸಿಗದಿದ್ದರೆ ಆ ನೌಕರರ ಪರಿಸ್ಥಿತಿ ಹೇಗಿರಬಹುದು? ಮನೆ ಖರ್ಚು, ಕುಟುಂಬದ ಜವಾಬ್ದಾರಿ, ದಿನನಿತ್ಯದ ಅಗತ್ಯಗಳನ್ನು ನಿಭಾಯಿಸುವುದು ಹೇಗೆ? ಇಂತಹದ್ದೇ ಸಂಕಷ್ಟಕ್ಕೆ ಸಿಲುಕಿರುವ ಬಿಹಾರದ ಮಹಿಳಾ ಅಧಿಕಾರಿಯೊಬ್ಬರು ಕೊನೆಗೆ ತಮ್ಮ ನೋವನ್ನು ವಿಭಿನ್ನ ರೀತಿಯಲ್ಲಿ ಹೊರಹಾಕಿದ್ದಾರೆ. ಎಂಟು ತಿಂಗಳಿಂದ ವೇತನ ಸಿಗದ ಹಿನ್ನೆಲೆಯಲ್ಲಿ ಕೈಯಲ್ಲಿ ಭಿಕ್ಷಾಪಾತ್ರೆ ಹಿಡಿದು ತಮ್ಮದೇ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದಾರೆ. ಈ ಘಟನೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.

ಬಿಹಾರದ ಬಕ್ಸರ್ ಜಿಲ್ಲೆಯ ಬ್ರಹ್ಮಪುರ ಬ್ಲಾಕ್ ಕಚೇರಿಯಲ್ಲಿ ಗ್ರಾಮೀಣಾಭಿವೃದ್ಧಿ ಅಧಿಕಾರಿಯಾಗಿ (Rural Development Officer) ಕಾರ್ಯನಿರ್ವಹಿಸುತ್ತಿರುವ ಅಲ್ಪಿತಾ ಸಿಂಗ್ ಅವರೇ ಹೀಗೆ ಪ್ರತಿಭಟನೆ ನಡೆಸಿದವರು. ಎಂಟು ತಿಂಗಳಿನಿಂದ ವೇತನ ಪಾವತಿಯಾಗದಿರುವುದನ್ನು ಖಂಡಿಸಿ ಕಚೇರಿಯ ಹೊರಗೆ ಭಿಕ್ಷಾಪಾತ್ರೆ ಹಿಡಿದು ಕುಳಿತು ತಮ್ಮ ಅಸಹಾಯಕತೆಯನ್ನು ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ.

11 ತಿಂಗಳ ಕೆಲಸಕ್ಕೆ ಸಿಕ್ಕಿದ್ದು ಕೇವಲ 3 ತಿಂಗಳ ಸಂಬಳ!

ಅಲ್ಪಿತಾ ಸಿಂಗ್ ಅವರ ಆರೋಪದ ಪ್ರಕಾರ, ಒಟ್ಟು 11 ತಿಂಗಳ ಸೇವಾವಧಿಯಲ್ಲಿ ಅವರಿಗೆ ಕೇವಲ ಮೂರು ತಿಂಗಳ ವೇತನ ಮಾತ್ರ ಪಾವತಿಯಾಗಿದೆ. ಉಳಿದ ಎಂಟು ತಿಂಗಳಿನಿಂದ ಸಂಬಳ ಬಂದಿಲ್ಲ. ಒಂದೆಡೆ ಸರ್ಕಾರಿ ಕರ್ತವ್ಯಗಳನ್ನು ನಿರಂತರವಾಗಿ ನಿರ್ವಹಿಸಬೇಕು, ಮತ್ತೊಂದೆಡೆ ದುಡಿದ ಹಣವೇ ಕೈ ಸೇರದಿದ್ದರೆ ಜೀವನ ನಡೆಸುವುದಾದರೂ ಹೇಗೆ ಎಂಬುದು ಅವರ ಅಳಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸಂಬಳವಿಲ್ಲದೆ ದಿನನಿತ್ಯದ ಖರ್ಚುಗಳನ್ನು ನಿಭಾಯಿಸುವುದು ಕಷ್ಟವಾಗಿದ್ದು, ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿರುವುದಾಗಿ ಅವರು ತಿಳಿಸಿದ್ದಾರೆ.

ಎರಡು ದಿನಗಳ ಕಾಲ ಭಿಕ್ಷಾಪಾತ್ರೆ ಹಿಡಿದು ಪ್ರತಿಭಟನೆ!

ಬಾಕಿ ವೇತನ ಪಾವತಿಸುವಂತೆ ಆಗ್ರಹಿಸಿ ಅಲ್ಪಿತಾ ಸಿಂಗ್ ಅವರು ಬ್ರಹ್ಮಪುರ ಬ್ಲಾಕ್ ಕಚೇರಿ ಎದುರು ಸತತ ಎರಡು ದಿನಗಳ ಕಾಲ ಭಿಕ್ಷಾಪಾತ್ರೆ ಹಿಡಿದು ಕುಳಿತಿದ್ದಾರೆ. ಸಾಮಾನ್ಯವಾಗಿ ಜನರ ಸಮಸ್ಯೆಗಳನ್ನು ಆಲಿಸಬೇಕಾದ ಸರ್ಕಾರಿ ಕಚೇರಿಯ ಎದುರೇ, ತನ್ನ ಸಂಬಳಕ್ಕಾಗಿ ಮಹಿಳಾ ಅಧಿಕಾರಿಯೊಬ್ಬರು ಭಿಕ್ಷೆ ಬೇಡುವ ಸನ್ನಿವೇಶ ನಿರ್ಮಾಣವಾಗಿರುವುದು ಅನೇಕರ ಗಮನ ಸೆಳೆದಿದೆ.

ಈ ಪ್ರತಿಭಟನೆಯ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆ ಪ್ರಕರಣ ಸಾರ್ವಜನಿಕ ಚರ್ಚೆಗೆ ಬಂದಿದೆ. ಇನ್ನು ಬ್ರಹ್ಮಪುರ ಬ್ಲಾಕ್ ಅಭಿವೃದ್ಧಿ ಅಧಿಕಾರಿ (BDO) ಮತ್ತು ಗ್ರಾಮೀಣಾಭಿವೃದ್ಧಿ ಅಧಿಕಾರಿ ನಡುವಿನ ಭಿನ್ನಾಭಿಪ್ರಾಯವೇ ವೇತನ ವಿಳಂಬಕ್ಕೆ ಕಾರಣವಾಗಿರಬಹುದು ಎಂದು ಮೂಲಗಳು ತಿಳಿಸಿವೆ.

ಫೋಟೋ ವೈರಲ್ ಆಗುತ್ತಿದ್ದಂತೆ ಜಿಲ್ಲಾಡಳಿತ ಅಲರ್ಟ್!

ಮಹಿಳಾ ಅಧಿಕಾರಿ ಭಿಕ್ಷಾಪಾತ್ರೆ ಹಿಡಿದು ಪ್ರತಿಭಟನೆ ನಡೆಸುತ್ತಿರುವ ಫೋಟೋಗಳು ವೈರಲ್ ಆಗುತ್ತಿದ್ದಂತೆ ಬಕ್ಸರ್ ಜಿಲ್ಲಾಡಳಿತ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದೆ. ಬ್ರಹ್ಮಪುರ ಬ್ಲಾಕ್ ಅಭಿವೃದ್ಧಿ ಅಧಿಕಾರಿಯಿಂದ ವಿವರಣೆ ಕೇಳಿದ್ದು, ಸಂಬಂಧಪಟ್ಟ ನೌಕರರ ವೇತನವನ್ನು ಯಾವ ಕಾರಣಕ್ಕಾಗಿ ತಡೆಹಿಡಿಯಲಾಗಿದೆ ಎಂಬುದನ್ನು ಸ್ಪಷ್ಟಪಡಿಸುವಂತೆ ಸೂಚಿಸಿದೆ.

ಯಾವುದೇ ಸರ್ಕಾರಿ ನೌಕರರ ವೇತನವನ್ನು ನಿಗದಿತ ನಿಯಮಗಳನ್ನು ಪಾಲಿಸದೆ ಹಾಗೂ ಸಕ್ಷಮ ಪ್ರಾಧಿಕಾರದ ಅನುಮತಿ ಪಡೆಯದೆ ತಡೆಹಿಡಿಯುವಂತಿಲ್ಲ ಎಂದು ಜಿಲ್ಲಾಡಳಿತ ಸ್ಪಷ್ಟಪಡಿಸಿದೆ. ಈ ಸಂಬಂಧ ಅಗತ್ಯ ಆಡಳಿತಾತ್ಮಕ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular