ನವದೆಹಲಿ: ದಂಪತಿಗಳ ನಡುವಿನ ವೈವಾಹಿಕ ವಿವಾದಗಳು ಹೆಚ್ಚುತ್ತಿರುವ ಇಂದಿನ ದಿನಗಳಲ್ಲಿ, ಪತಿಯನ್ನು ಮಂಡಿಯೂರಿಸಲು ಆತನ ಉದ್ಯೋಗದಾತರಿಗೆ (Employers) ದೂರು ನೀಡುವ ಹೊಸ ಟ್ರೆಂಡ್ ಸೃಷ್ಟಿಯಾಗಿದೆ.
ಆದರೆ, ಪತಿಯ ಉದ್ಯೋಗ ಸಂಸ್ಥೆಗೆ ಪತ್ರ ಬರೆದು ದೂರು ನೀಡುವುದು ಹೆಂಡತಿ ಮಾಡಬಹುದಾದ “ಅತಿ ಕೆಟ್ಟ ಕೆಲಸಗಳಲ್ಲಿ ಒಂದು” ಎಂದು ದೇಶದ ಅತ್ಯುನ್ನತ ನ್ಯಾಯಾಲಯವಾದ ಸುಪ್ರೀಂ ಕೋರ್ಟ್ ಕಠಿಣವಾಗಿ ಎಚ್ಚರಿಸಿದೆ.
ಇಂತಹ ನಡವಳಿಕೆಯು ಪತಿಯ ಜೀವನೋಪಾಯವನ್ನೇ ಕಸಿದುಕೊಳ್ಳಬಹುದು. ಗಂಡ ಉದ್ಯೋಗ ಕಳೆದುಕೊಂಡರೆ, ಅಂತಿಮವಾಗಿ ಹೆಂಡತಿಗೆ ಸಿಗಬೇಕಾದ ಜೀವನಾಂಶ (Maintenance) ಪಡೆಯುವ ಹಕ್ಕು ಮತ್ತು ಆಧಾರವೂ ಇಲ್ಲದಂತಾಗುತ್ತದೆ ಎಂದು ನ್ಯಾಯಪೀಠ ತೀವ್ರ ಕಳವಳ ವ್ಯಕ್ತಪಡಿಸಿದೆ.
ಪ್ರಕರಣದ ಹಿನ್ನೆಲೆ
ನ್ಯಾಯಮೂರ್ತಿ ಬಿ.ವಿ. ನಾಗರತ್ನ ಹಾಗೂ ನ್ಯಾಯಮೂರ್ತಿ ಆರ್. ಮಹಾದೇವನ್ ಅವರನ್ನೊಳಗೊಂಡ ದ್ವಿಪೀಠವು ಅಸ್ಸಾಂನಲ್ಲಿ ಸಲ್ಲಿಕೆಯಾಗಿದ್ದ ಮಾನನಷ್ಟ ಮೊಕದ್ದಮೆಯನ್ನು ಉತ್ತರ ಪ್ರದೇಶದ ಗಾಜಿಯಾಬಾದ್‌ಗೆ ವರ್ಗಾಯಿಸುವಂತೆ ಕೋರಿ ಮಹಿಳೆಯೊಬ್ಬರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ಈ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿತು.
ಅರ್ಜಿದಾರ ಮಹಿಳೆಯ ಪತಿ ಭಾರತೀಯ ವಾಯುಪಡೆಯ (Indian Air Force) ಅಧಿಕಾರಿಯಾಗಿದ್ದಾರೆ. ಪತಿ ಸೇವಾ ನಿಯಮಗಳನ್ನು ಉಲ್ಲಂಘಿಸಿ ಸ್ವತಂತ್ರ ಉದ್ಯಮ ನಡೆಸುತ್ತಿದ್ದಾರೆ ಎಂದು ಆರೋಪಿಸಿ ಆಕೆ ದೆಹಲಿಯ ವಾಯುಪಡೆ ಮೇಲಾಧಿಕಾರಿಗಳಿಗೆ ದೂರು ನೀಡಿದ್ದರು.
ಇದಕ್ಕೂ ಮುನ್ನ, ಪತಿಯು ಹೆಂಡತಿ ಮತ್ತು ಆಕೆಯ ಸಹೋದರನ ವಿರುದ್ಧ ವಾಯುಪಡೆಯ ಹೆಲ್ಮೆಟ್ ಕದ್ದಿದ್ದಾರೆ ಎಂದು ಸುಳ್ಳು ದೂರು ನೀಡಿದ್ದರಿಂದ ತಾವು ಈ ಕ್ರಮಕೈಗೊಳ್ಳಬೇಕಾಯಿತು ಎಂದು ಪತ್ನಿಯ ಪರ ವಕೀಲರು ವಾದಿಸಿದರು.
ಈ ದೂರಿನ ಬೆನ್ನಲ್ಲೇ ಪತಿಯ ಸ್ನೇಹಿತ ಹಾಗೂ ಸಹೋದ್ಯೋಗಿ ಆಕೆಯ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದರು.
ನ್ಯಾಯಮೂರ್ತಿಗಳ ಎಚ್ಚರಿಕೆ
ಜೀವನೋಪಾಯ ಕಳೆದುಕೊಳ್ಳುವುದು ವಿಚ್ಛೇದನಕ್ಕಿಂತಲೂ ಭೀಕರ ಎಂದು ವಿಚಾರಣೆಯ ವೇಳೆ ನ್ಯಾಯಮೂರ್ತಿ ಬಿ.ವಿ. ನಾಗರತ್ನ ಅವರು ಇಂದಿನ ವಾಸ್ತವಿಕ ಪರಿಸ್ಥಿತಿಯನ್ನು ಎತ್ತಿಹಿಡಿಯುತ್ತಾ ಹೀಗೆ ಹೇಳಿದರು.
“ವಿಚ್ಛೇದನ ಪಡೆಯುವುದು ಒಂದು ವಿಷಯವಾದರೆ, ಸಂಗಾತಿಯ ಜೀವನೋಪಾಯವನ್ನು ಕಳೆದುಕೊಳ್ಳುವಂತೆ ಮಾಡುವುದು ಇನ್ನೂ ಕೆಟ್ಟದ್ದು. ಗಂಡನ ಉದ್ಯೋಗ ಸಂಸ್ಥೆಗೆ ದೂರು ನೀಡಿ ಆತನ ಕೆಲಸ ಪೋಲಾದರೆ, ಭವಿಷ್ಯದಲ್ಲಿ ಆತನಿಂದ ಜೀವನಾಂಶ ಪಡೆಯಲು ಯಾವುದೇ ಕಾನೂನಾತ್ಮಕ ಅಥವಾ ಆರ್ಥಿಕ ಆಧಾರ ಉಳಿಯುವುದಿಲ್ಲ.ವೈವಾಹಿಕ ವಿವಾದಗಳು ಏನೇ ಇದ್ದರೂ, ವ್ಯಕ್ತಿಯೊಬ್ಬನ ಉದ್ಯೋಗ ಮತ್ತು ಜೀವನೋಪಾಯಕ್ಕೆ ಧಕ್ಕೆ ತರುವುದು ನ್ಯಾಯಸಮ್ಮತವಲ್ಲ ಎಂದು ಪೀಠ ಅಸಮಾಧಾನ ಹೊರಹಾಕಿದೆ.
ಮಧ್ಯಸ್ಥಿಕೆಗೆ ಉಲ್ಲೇಖ
ಸುಪ್ರೀಂ ಕೋರ್ಟ್ ಈ ಪ್ರಕರಣವನ್ನು ಮಧ್ಯಸ್ಥಿಕೆ ಕೇಂದ್ರಕ್ಕೆ (Mediation Centre) ಉಲ್ಲೇಖಿಸಿದ್ದು, ಎಲ್ಲಾ ಆರೋಪಗಳನ್ನು ಹಿಂಪಡೆದು ಶಾಂತಿಯುತವಾಗಿ ವಿವಾದ ಬಗೆಹರಿಸಿಕೊಳ್ಳುವಂತೆ ಪತ್ನಿಯ ವಕೀಲರಿಗೆ ಸಲಹೆ ನೀಡಿದೆ.

