ಬೆಂಗಳೂರು- ಕರ್ನಾಟಕದ ಕರಾವಳಿ ಪ್ರದೇಶದಲ್ಲಿರುವ ಸಿಆರ್ಝೆಡ್ (Coastal Regulation Zone) ನಿಯಮಗಳಡಿ ಈಗಾಗಲೇ ಪ್ರವಾಸೋದ್ಯಮ ಅಭಿವೃದ್ಧಿಗೆ ಅವಕಾಶವಿರುವ ಸಮುದ್ರ ತೀರಗಳ ಸಮಗ್ರ ಅಧ್ಯಯನ ನಡೆಸಿ, ಪ್ರತಿಯೊಂದು ಬೀಚ್ಗೆ ಪ್ರತ್ಯೇಕ ಪ್ರವಾಸೋದ್ಯಮ ಅಭಿವೃದ್ಧಿ ಯೋಜನೆ (Master Plan) ಸಿದ್ಧಪಡಿಸುವಂತೆ *ಇಂಧನ ಹಾಗೂ ಪ್ರವಾಸೋದ್ಯಮ ಸಚಿವ ಕೆ.ಜೆ. ಜಾರ್ಜ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ* .
ಕರ್ನಾಟಕವು ಸುಮಾರು 320 ಕಿಲೋಮೀಟರ್ ಉದ್ದದ ಕರಾವಳಿ ಪ್ರದೇಶವನ್ನು ಹೊಂದಿದ್ದು, ಬೀಚ್ ಪ್ರವಾಸೋದ್ಯಮ, ಸಮುದ್ರ ಆಧಾರಿತ ಸಾಹಸ ಚಟುವಟಿಕೆಗಳು, ವೆಲ್ನೆಸ್ ಪ್ರವಾಸೋದ್ಯಮ, ಪರಿಸರ ಸ್ನೇಹಿ ಪ್ರವಾಸೋದ್ಯಮ ಹಾಗೂ ಆತಿಥ್ಯ ವಲಯದಲ್ಲಿ ಅಪಾರ ಹೂಡಿಕೆ ಅವಕಾಶಗಳನ್ನು ಹೊಂದಿದೆ. ಸಿಆರ್ಝೆಡ್ ನಿಯಮಾವಳಿಗಳಡಿ ಈಗಾಗಲೇ ಹಲವು ಸಮುದ್ರ ತೀರಗಳಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಅವಕಾಶವಿದ್ದರೂ, ಅವುಗಳ ಸಾಮರ್ಥ್ಯದ ಕುರಿತು ಸಮಗ್ರ ಅಧ್ಯಯನ ನಡೆಸಿ ಯೋಜನಾಬದ್ಧ ಅಭಿವೃದ್ಧಿಗೆ ಇದುವರೆಗೆ ವಿಶೇಷ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಸಚಿವರು ತಿಳಿಸಿದ್ದಾರೆ.
ಬೀಚ್ವಾರು ಮೌಲ್ಯಮಾಪನಕ್ಕೆ ನಿರ್ದೇಶನ
ಪ್ರತಿಯೊಂದು ಬೀಚ್ನ ಸಾಮರ್ಥ್ಯವನ್ನು ಪ್ರತ್ಯೇಕವಾಗಿ ಮೌಲ್ಯಮಾಪನ ಮಾಡಬೇಕು. ಆ ಪ್ರದೇಶಕ್ಕೆ ಇರುವ ರಸ್ತೆ ಸಂಪರ್ಕ, ಮೂಲಸೌಕರ್ಯ, ಪ್ರವಾಸಿಗರ ಆಕರ್ಷಣಾ ಸಾಮರ್ಥ್ಯ, ಪರಿಸರ ಸಂವೇದನಾಶೀಲತೆ, ಖಾಸಗಿ ಹೂಡಿಕೆಗೆ ಇರುವ ಅವಕಾಶ ಹಾಗೂ ಸ್ಥಳೀಯ ಸಮುದಾಯಕ್ಕೆ ದೊರೆಯಬಹುದಾದ ಉದ್ಯೋಗ ಮತ್ತು ಆರ್ಥಿಕ ಲಾಭಗಳ ಕುರಿತು ಅಧ್ಯಯನ ನಡೆಸಿ ವರದಿ ಸಲ್ಲಿಸುವಂತೆ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಈ ಅಧ್ಯಯನದ ಆಧಾರದ ಮೇಲೆ ಪ್ರತಿಯೊಂದು ಬೀಚ್ಗೆ ಪ್ರತ್ಯೇಕ ಪ್ರವಾಸೋದ್ಯಮ ಅಭಿವೃದ್ಧಿ ಮಾಸ್ಟರ್ ಪ್ಲಾನ್ ರೂಪಿಸಿ, ಅಲ್ಲಿ ಅಭಿವೃದ್ಧಿಪಡಿಸಬಹುದಾದ ಪ್ರವಾಸೋದ್ಯಮ ಚಟುವಟಿಕೆಗಳು, ಅಗತ್ಯ ಮೂಲಸೌಕರ್ಯ, ಸಾರ್ವಜನಿಕ ಸೌಲಭ್ಯಗಳು ಹಾಗೂ ಹೂಡಿಕೆ ಅವಕಾಶಗಳ ಕುರಿತು ಸಮಗ್ರ ಕಾರ್ಯಯೋಜನೆ ಸಿದ್ಧಪಡಿಸುವಂತೆ ಸಚಿವರು ನಿರ್ದೇಶಿಸಿದ್ದಾರೆ.
ಸಚಿವರ ಮತ್ತು ಅಧಿಕಾರಿಗಳ ಹೇಳಿಕೆ
“ಕರ್ನಾಟಕದ ಕರಾವಳಿ ಪ್ರದೇಶವು ರಾಜ್ಯದ ಪ್ರವಾಸೋದ್ಯಮ ಬೆಳವಣಿಗೆಯ ಪ್ರಮುಖ ಚಾಲಕವಾಗುವ ಸಾಮರ್ಥ್ಯ ಹೊಂದಿದೆ. ಪರಿಸರ ಸಂರಕ್ಷಣೆಗೆ ಯಾವುದೇ ಧಕ್ಕೆಯಾಗದಂತೆ, ಸಿಆರ್ಝೆಡ್ ನಿಯಮಾವಳಿಗಳ ವ್ಯಾಪ್ತಿಯಲ್ಲಿಯೇ ಸುಸ್ಥಿರ ಮತ್ತು ಯೋಜನಾಬದ್ಧ ಪ್ರವಾಸೋದ್ಯಮ ಅಭಿವೃದ್ಧಿಗೆ ಆದ್ಯತೆ ನೀಡಬೇಕು. ಪ್ರತಿಯೊಂದು ಬೀಚ್ನ ವೈಶಿಷ್ಟ್ಯವನ್ನು ಆಧರಿಸಿ ಅಭಿವೃದ್ಧಿ ಯೋಜನೆ ರೂಪಿಸಿದರೆ, ಕರಾವಳಿ ಪ್ರದೇಶದಲ್ಲಿ ಹೆಚ್ಚಿನ ಹೂಡಿಕೆ, ಉದ್ಯೋಗ ಹಾಗೂ ಸ್ಥಳೀಯ ಆರ್ಥಿಕ ಅಭಿವೃದ್ಧಿಗೆ ಹೊಸ ಅವಕಾಶಗಳು ಸೃಷ್ಟಿಯಾಗಲಿವೆ”.
– *ಕೆ ಜೆ ಜಾರ್ಜ್, ಪ್ರವಾಸೋದ್ಯಮ ಮತ್ತು ಇಂಧನ ಸಚಿವರು.*
“ಕರ್ನಾಟಕದ ಪ್ರತಿಯೊಂದು ಬೀಚ್ಗೂ ತನ್ನದೇ ಆದ ವೈಶಿಷ್ಟ್ಯವಿದೆ. ಒಂದೇ ಮಾದರಿಯ ಅಭಿವೃದ್ಧಿಗೆ ಬದಲಾಗಿ, ಪ್ರತಿಯೊಂದು ಬೀಚ್ನ ಭೌಗೋಳಿಕ, ಪರಿಸರ ಹಾಗೂ ಪ್ರವಾಸೋದ್ಯಮ ಸಾಮರ್ಥ್ಯಕ್ಕೆ ಅನುಗುಣವಾಗಿ ಅಭಿವೃದ್ಧಿ ಯೋಜನೆ ರೂಪಿಸುವ ಮೂಲಕ ಕರಾವಳಿ ಪ್ರವಾಸೋದ್ಯಮಕ್ಕೆ ಹೊಸ ದಿಕ್ಕು ನೀಡಲಿದ್ದೇವೆ.”
– *ಡಾ. ವಿ. ರಾಮ್ ಪ್ರಸಾತ್ ಮನೋಹರ್, ಸರ್ಕಾರದ ಕಾರ್ಯದರ್ಶಿಗಳು ಪ್ರವಾಸೋದ್ಯಮ ಇಲಾಖೆ*
ಅಧ್ಯಯನದ ಪ್ರಮುಖ ಅಂಶಗಳು
*ಅಧ್ಯಯನದಲ್ಲಿ ಒಳಗೊಳ್ಳುವ ಪ್ರಮುಖ ಅಂಶಗಳು*
– ಸಿಆರ್ಝೆಡ್ ವ್ಯಾಪ್ತಿಯ ಪ್ರವಾಸೋದ್ಯಮಕ್ಕೆ ಅನುಮತಿ ಇರುವ ಸಮುದ್ರ ತೀರಗಳ ಗುರುತಿಸುವಿಕೆ
– ಬೀಚ್ವಾರು ಪ್ರವಾಸೋದ್ಯಮ ಸಾಮರ್ಥ್ಯದ ಮೌಲ್ಯಮಾಪನ
– ರಸ್ತೆ ಹಾಗೂ ಇತರೆ ಸಂಪರ್ಕ ಮೂಲಸೌಕರ್ಯದ ಪರಿಶೀಲನೆ
– ಪರಿಸರ ಸಂರಕ್ಷಣೆ ಮತ್ತು ಸುಸ್ಥಿರ ಅಭಿವೃದ್ಧಿಯ ಅವಕಾಶಗಳು
– ಸಾರ್ವಜನಿಕ ಹಾಗೂ ಖಾಸಗಿ ಹೂಡಿಕೆ ಸಾಧ್ಯತೆಗಳ ಅಧ್ಯಯನ
– ಪ್ರತಿಯೊಂದು ಬೀಚ್ಗೆ ಪ್ರತ್ಯೇಕ ಪ್ರವಾಸೋದ್ಯಮ ಅಭಿವೃದ್ಧಿ ಮಾಸ್ಟರ್ ಪ್ಲಾನ್
– ಉದ್ಯೋಗ ಹಾಗೂ ಸ್ಥಳೀಯ ಆರ್ಥಿಕ ಬೆಳವಣಿಗೆಗೆ ಅವಕಾಶಗಳ ವಿಶ್ಲೇಷಣೆ

