ಸುಮಾರು 575 ಕೋಟಿ ರೂ.ವೆಚ್ಚದಲ್ಲಿ ಕೈಗೊಂಡಿದ್ದ ಬೆಂಗಳೂರು ನಗರದ ಪ್ರಮುಖ ರಸ್ತೆ ಯೋಜನೆಯೊಂದು ಉದ್ಘಾಟನೆಗೆ ಸಿದ್ಧವಾಗಿದೆ. 6 ಪಥದ ಈ ರಸ್ತೆ ಯೋಜನೆ ಲೋಕಾರ್ಪಣೆಗೊಂಡರೆ ಬೆಂಗಳೂರು-ಮೈಸೂರು ರಸ್ತೆ ವಾಹನ ಸವಾರರು ನಿಟ್ಟುಸಿರು ಬಿಡಲಿದ್ದಾರೆ.
ಬೆಂಗಳೂರು-ಮೈಸೂರು ಹೆದ್ದಾರಿಯೊಂದಿಗೆ ಮಾಗಡಿ ರಸ್ತೆ ಸಂಪರ್ಕಿಸುವ ಪ್ರಮುಖವಾದ ಮೇಜರ್ ಆರ್ಟೀರಿಯಲ್ ರಸ್ತೆ (ಎಂಎಆರ್) ಮಾರ್ಚ್ ಅಂತ್ಯದಲ್ಲಿ ಲೋಕಾರ್ಪಣೆಯಾಗಲಿದೆ. ಸಂಚಾರ ದಟ್ಟಣೆ ನಿಯಂತ್ರಿಸುವ ಸಲುವಾಗಿ ಬಿಡಿಎ 2018ರಲ್ಲಿ ಈ ಯೋಜನೆ ಆರಂಭಿಸಿತ್ತು.
ಇದು 330 ಅಡಿ ಅಗಲದ ರಸ್ತೆಯಾಗಿದೆ. 6 ಪಥ, ಎರಡೂ ಬದಿಗಳಲ್ಲಿ ಸರ್ವಿಸ್ ರಸ್ತೆ ಹಾಗೂ ತಡೆಗೋಡೆಗಳ ಸಹಿತ ನಿರ್ಮಿಸಲಾಗುತ್ತಿದೆ. ಈ ರಸ್ತೆಯಿಂದ ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ಸೈಟು ಪಡೆದಿರುವ ಜನರಿಗೆ ಸಹ ಬಿಗ್ ರಿಲೀಫ್ ಸಿಗಲಿದ್ದು, ಅವರ ಸಂಚಾರಕ್ಕೆ ಅನುಕೂಲವಾಗಲಿದೆ.
ರಸ್ತೆ ಯೋಜನೆ ವಿವರ: ಬಿಡಿಎ ಅಧಿಕಾರಿಗಳು ಮೊದಲು ಜನವರಿ 14ಕ್ಕೆ 3 ಪಥವನ್ನು ವಾಹನ ಸಂಚಾರಕ್ಕೆ ಮುಕ್ತಗೊಳಿಸಲಾಗುತ್ತದೆ. ಚಲ್ಲಘಟ್ಟ ಬಳಿ ನಿರ್ಮಾಣವಾಗುತ್ತಿರುವ ರೈಲ್ವೆ ಅಂಡರ್ಪಾಸ್ ಕಾಮಗಾರಿ ಮುಕ್ತಾಯವಾದ ಬಳಿಕ ರಸ್ತೆಯನ್ನು ಸಂಪೂರ್ಣವಾಗಿ ಸಂಚಾರಕ್ಕೆ ಮುಕ್ತಗೊಳಿಸಲಾಗುತ್ತದೆ ಎಂದು ಹೇಳಿದ್ದರು.
ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ. ಶಿವಕುಮಾರ್ ಸಂಚಾರ ದಟ್ಟಣೆ ಮತ್ತು ಕಾರ್ಯಾಚರಣೆಯ ದಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಎಲ್ಲಾ 6 ಪಥಗಳು ಪೂರ್ಣಗೊಂಡ ನಂತರವೇ ಈ ಕಾರಿಡಾರ್ ಅನ್ನು ಲೋಕಾರ್ಪಣೆಗೊಳಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಆದ್ದರಿಂದ ಬಿಡಿಎ ರಸ್ತೆಯನ್ನು ಭಾಗಶಃ ಸಂಚಾರಕ್ಕೆ ಮುಕ್ತಗೊಳಿಸುವ ಯೋಜನೆಯನ್ನು ಕೈಬಿಟ್ಟಿದೆ. ಉಳಿದ ಅಂಡರ್ಪಾಸ್ ಕೆಲಸ ಮತ್ತು ಸಂಬಂಧಿತ ಸಿವಿಲ್ ಕಾಮಗಾರಿಗಳನ್ನು ಪೂರ್ಣಗೊಳಿಸಲು ಗಮನಹರಿಸಿದೆ.
ರೈಲ್ವೆ ಅಂಡರ್ಪಾಸ್ ನಿರ್ಮಾಣದ ಮುಂದಿನ ಕೆಲಸಕ್ಕಾಗಿ ಬಿಡಿಎ ನೈಋತ್ಯ ರೈಲ್ವೆಯಿಂದ ಬ್ಲಾಕ್ಗಳಿಗಾಗಿ ಬೇಡಿಕೆ ಇಟ್ಟಿದೆ. ಬಾಕ್ಸ್ ಪುಶಿಂಗ್ನ ಎರಡನೇ ಹಂತಕ್ಕೆ ಅಗತ್ಯವಿರುವ ಸ್ಟೀಲ್ ಗರ್ಡರ್ಗಳನ್ನು ತೆಗೆದುಹಾಕಲು ರೈಲುಗಳ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಬೇಕಾಗುತ್ತದೆ.
ಈಗಿರುವ ಸ್ಟೀಲ್ ಗರ್ಡರ್ ಅನ್ನು ಜನವರಿ 8ರಂದು ತೆಗೆದುಹಾಕಲು ನಿರ್ಧರಿಸಲಾಗಿದೆ. ರೈಲ್ವೆ ಇಲಾಖೆಯಿಂದ ಅನುಮತಿ ದೊರೆತಿದ್ದು, ಅದರ ನಂತರ ರಸ್ತೆಯ ಉಳಿದ ಅರ್ಧ ಭಾಗದಲ್ಲಿ ಅಂಡರ್ಪಾಸ್ ನಿರ್ಮಾಣ ಕಾರ್ಯ ಪ್ರಾರಂಭವಾಗಲಿದೆ.
ಈ ರಸ್ತೆ ಮೈಸೂರು ರಸ್ತೆಯ ಚಲ್ಲಘಟ್ಟ ಮತ್ತು ಮಾಗಡಿ ರಸ್ತೆಯ ಮಾಚೋಹಳ್ಳಿಯನ್ನು ಸಂಪರ್ಕಿಸುತ್ತದೆ. ಕಂಬಿಪುರ, ಭೀಮನಕುಪ್ಪೆ, ಕೊಮ್ಮಘಟ್ಟ, ಸೂಲಿಕೆರೆ, ಕನ್ನಹಳ್ಳಿ ಮತ್ತು ಇತರ ಸ್ಥಳಗಳ ಮೂಲಕ ಹಾದುಹೋಗುತ್ತದೆ. ಈ ರಸ್ತೆ ಸಂಪೂರ್ಣವಾಗಿ ಮುಕ್ತವಾದ ಬಳಿಕ ಮೈಸೂರು ಮತ್ತು ಮಾಗಡಿ ರಸ್ತೆಗಳ ನಡುವಿನ ಪ್ರಯಾಣದ ಸಮಯವು ಕಡಿತವಾಗಲಿದೆ. ಜೊತೆಗೆ ಮೈಸೂರು ಹೆದ್ದಾರಿಗೆ ವಾಹನಗಳ ಪ್ರವೇಶ ಸುಲಭವಾಗಲಿದೆ.
ಈ ರಸ್ತೆ ಯೋಜನೆಯು ಸರ್ಕಾರದ ಪ್ರಸ್ತಾವಿತ ಪೆರಿಫೆರಲ್ ರಿಂಗ್ ರೋಡ್-2 ಯೋಜನೆಗೆ ಸಹಕಾರಿಯಾಗಿದೆ. ಈ ರಸ್ತೆ ಸಿಗ್ನಲ್-ಮುಕ್ತ ಕಾರಿಡಾರ್ಗಳು, ಅಂಡರ್ಪಾಸ್ಗಳು ಮತ್ತು ಪ್ರಮುಖ ಇಂಟರ್ಚೇಂಜ್ಗಳನ್ನು ಒಳಗೊಂಡಿದ್ದು, ಪಶ್ಚಿಮ ಮತ್ತು ನೈಋತ್ಯ ಬೆಂಗಳೂರಿನಾದ್ಯಂತ ಸಂಪರ್ಕವನ್ನು ಸುಧಾರಿಸಲಿದೆ.
ರಸ್ತೆ ಕೆಂಪೇಗೌಡ ಬಡಾವಣೆ ಮೂಲಕ ಹಾದು ಹೋಗುವ ಕಾರಣ ಅಲ್ಲಿ ಮನೆ ನಿರ್ಮಾಣಕ್ಕೆ ಪ್ಲಾನ್ ಮಾಡುವವರಿಗೆ ಅನುಕೂಲ ಕಲ್ಪಿಸಲಿದೆ. ಈಗಾಗಲೇ ಸಿದ್ದವಾಗಿರುವ ರಸ್ತೆಯಲ್ಲಿ ಪ್ರಾಯೋಗಿಕ ಸಂಚಾರ ಆರಂಭವಾಗಿದ್ದು, ಕೆಲವು ಭಾಗಗಳನ್ನು ಅನೌಪಚಾರಿಕವಾಗಿ ವಾಹನ ಸವಾರರು ಬಳಸುತ್ತಿದ್ದಾರೆ.

