HomeIndiaಕೊಲೆ ಆರೋಪಿಗೆ ಬಸ್ ನಿಲ್ದಾಣದಲ್ಲೇ ಧರ್ಮದೇಟು ; ಸ್ಥಳ ಮಹಜರು ವೇಳೆ ಲಾಠಿಯಿಂದ ಬಡಿದ ಗುಜರಾತ್...

ಕೊಲೆ ಆರೋಪಿಗೆ ಬಸ್ ನಿಲ್ದಾಣದಲ್ಲೇ ಧರ್ಮದೇಟು ; ಸ್ಥಳ ಮಹಜರು ವೇಳೆ ಲಾಠಿಯಿಂದ ಬಡಿದ ಗುಜರಾತ್ ಪೊಲೀಸರು | Video

ತನ್ನೊಂದಿಗೆ ಲಿವ್-ಇನ್ ಸಂಬಂಧದಲ್ಲಿದ್ದ ಮಹಿಳೆಯನ್ನು ಬರ್ಬರವಾಗಿ ಹತ್ಯೆಗೈದ ಆರೋಪಿಯನ್ನು ಅಪರಾಧ ಸ್ಥಳ ಮರುಸೃಷ್ಟಿಗೆ ಕರೆತಂದ ಪೊಲೀಸರು, ಆತನನ್ನು ಬಸ್ ನಿಲ್ದಾಣದಲ್ಲೇ ಸಾರ್ವಜನಿಕವಾಗಿ ಲಾಠಿಯಿಂದ ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಗುಜರಾತ್‌ನ ಭಾವನಗರದಲ್ಲಿ ನಡೆದಿದೆ.

ಆರೋಪಿಯನ್ನು ಹಗ್ಗದಿಂದ ಕಟ್ಟಿ ರಸ್ತೆಯುದ್ದಕ್ಕೂ ಎಳೆದೊಯ್ಯುತ್ತಾ ಲಾಠಿಯಿಂದ ಹೊಡೆಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪೊಲೀಸರ ಈ ಕೃತ್ಯದ ಕುರಿತು ಭಾರಿ ಚರ್ಚೆ ಆರಂಭವಾಗಿದೆ.

ಏನಿದು ಕೊಲೆ ಪ್ರಕರಣ ?

ವರದಿಗಳ ಪ್ರಕಾರ, ಆರೋಪಿ ಫೈಸಲ್ ಲಖಾನಿ ಎಂಬಾತ ಕಾಜಲ್‌ಬೆನ್ ಬರೈಯಾ (40) ಎಂಬಾಕೆಯೊಂದಿಗೆ ಕಳೆದ ಏಳು ವರ್ಷಗಳಿಂದ ಲಿವ್-ಇನ್ ಸಂಬಂಧದಲ್ಲಿದ್ದನು. ಕಾಜಲ್‌ಬೆನ್‌ಗೆ ರವಿ ಎಂಬಾತನೊಂದಿಗೆ ಅಕ್ರಮ ಸಂಬಂಧವಿದೆ ಎಂದು ಫೈಸಲ್ ಅನುಮಾನಿಸುತ್ತಿದ್ದನು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸೆಪ್ಟೆಂಬರ್ 3 ರಂದು ಇದೇ ವಿಚಾರವಾಗಿ ಇಬ್ಬರ ನಡುವೆ ಬಸ್ ನಿಲ್ದಾಣದಲ್ಲಿ ತೀವ್ರ ಜಗಳ ನಡೆದಿದೆ. ಜಗಳ ವಿಕೋಪಕ್ಕೆ ತಿರುಗಿ ಫೈಸಲ್ ಕಾಜಲ್‌ಬೆನ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದನು. ತೀವ್ರವಾಗಿ ಗಾಯಗೊಂಡ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಸೆಪ್ಟೆಂಬರ್ 4 ರಂದು ಆಕೆ ಮೃತಪಟ್ಟಿದ್ದಳು.

ಸ್ಥಳ ಮಹಜರು ವೇಳೆ ನಡುರಸ್ತೆಯಲ್ಲೇ ಥಳಿತ

ಪ್ರಕರಣದ ತನಿಖೆ ಕೈಗೆತ್ತಿಕೊಂಡ ನೀಲಂಬಾಗ್ ಪೊಲೀಸ್ ಠಾಣೆಯ ಪೊಲೀಸರು, ಘಟನೆ ಹೇಗೆ ನಡೆಯಿತು ಎಂಬುದನ್ನು ಮರುಸೃಷ್ಟಿಸಲು ಆರೋಪಿ ಫೈಸಲ್‌ನನ್ನು ಹತ್ಯೆ ನಡೆದ ಸ್ಥಳೀಯ ಬಸ್ ನಿಲ್ದಾಣಕ್ಕೆ ಕರೆತಂದಿದ್ದರು.

ಆದರೆ, ಸ್ಥಳಕ್ಕೆ ಕರೆತರುತ್ತಿದ್ದಂತೆ ಪೊಲೀಸರು ಆರೋಪಿಗೆ ಹಗ್ಗ ಕಟ್ಟಿ ಎಳೆದಾಡುತ್ತಾ ಲಾಠಿಗಳಿಂದ ಸಾರ್ವಜನಿಕರ ಕಣ್ಣೆದುರೇ ಮನಬಂದಂತೆ ಥಳಿಸಿದ್ದಾರೆ. ನೀಲಂಬಾಗ್ ಪೊಲೀಸ್ ಇನ್ಸ್‌ಪೆಕ್ಟರ್ ಡಿ.ಪಿ. ಉನಾದ್ಕಡ್ ಸ್ವತಃ ಆರೋಪಿಗೆ ಬಾರಿಸುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.

ಪೊಲೀಸರ ಸಮರ್ಥನೆ ಏನು ?

ತಮ್ಮ ಕ್ರಮವನ್ನು ಸಮರ್ಥಿಸಿಕೊಂಡಿರುವ ಇನ್ಸ್‌ಪೆಕ್ಟರ್ ಉನಾದ್ಕಡ್, “ಆರೋಪಿ ನಡುರಸ್ತೆಯಲ್ಲೇ ಮಹಿಳೆಯ ಮೇಲೆ ಅಮಾನವೀಯವಾಗಿ ಹಲ್ಲೆ ಮಾಡಿ ಕೊಂದಿದ್ದನು. ಇತ್ತೀಚೆಗೆ ಮಹಿಳೆಯರ ಮೇಲೆ ಅಪರಾಧಗಳು ನಡೆದಾಗ ಪೊಲೀಸರು ಏನೂ ಮಾಡುತ್ತಿಲ್ಲ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದರು. ಸಮಾಜದಲ್ಲಿ ಪೊಲೀಸರ ಮೇಲಿನ ನಂಬಿಕೆ ಉಳಿಸಿಕೊಳ್ಳಲು ಮತ್ತು ಅಪರಾಧಿಗಳಲ್ಲಿ ಕಾನೂನಿನ ಭಯ ಹುಟ್ಟಿಸಲು ಇಂತಹ ಕಠಿಣ ಸಂದೇಶ ರವಾನಿಸುವುದು ಅನಿವಾರ್ಯವಾಗಿತ್ತು” ಎಂದು ಹೇಳಿದ್ದಾರೆ.

ಹೈಕೋರ್ಟ್ ಆದೇಶ, ಸರ್ಕಾರದ ಸುತ್ತೋಲೆಗೆ ವಿರುದ್ಧ?

ಪೊಲೀಸರ ಈ ಕ್ರಮ ಸಾರ್ವಜನಿಕ ವಲಯದಲ್ಲಿ ಪರ-ವಿರೋಧದ ಚರ್ಚೆಗೆ ಕಾರಣವಾಗಿದೆ. ಸೂರತ್‌ನಲ್ಲಿ ಈ ಹಿಂದೆ ಆರೋಪಿಗಳನ್ನು ಸಾರ್ವಜನಿಕವಾಗಿ ಥಳಿಸಿದ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಗುಜರಾತ್ ಹೈಕೋರ್ಟ್‌ನಲ್ಲಿ ವಿಚಾರಣೆ ನಡೆದಿತ್ತು.

ಈ ಹಿನ್ನೆಲೆಯಲ್ಲಿ ಗುಜರಾತ್ ಗೃಹ ಇಲಾಖೆಯು ಮೇ 7 ರಂದು ಕಟ್ಟುನಿಟ್ಟಿನ ಸುತ್ತೋಲೆ ಹೊರಡಿಸಿತ್ತು. ಸಾರ್ವಜನಿಕ ಸ್ಥಳಗಳಲ್ಲಿ ಆರೋಪಿಗಳನ್ನು ಮೊಣಕಾಲ ಮೇಲೆ ಕೂರಿಸುವುದು, ಬಸ್ಕಿ ಹೊಡೆಸುವುದು, ಎಳೆಯುವುದು ಅಥವಾ ಲಾಠಿಗಳಿಂದ ಹೊಡೆಯುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ನಿಯಮ ಮೀರಿದರೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕಠಿಣ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಸುತ್ತೋಲೆಯಲ್ಲಿ ಎಚ್ಚರಿಸಲಾಗಿತ್ತು. ಹೈಕೋರ್ಟ್ ಮತ್ತು ಸರ್ಕಾರದ ಸ್ಪಷ್ಟ ನಿರ್ದೇಶನಗಳಿದ್ದರೂ ಪೊಲೀಸರು ಕೈಗೊಂಡ ಈ ‘ಆನ್‌ಸ್ಪಾಟ್ ನ್ಯಾಯ’ ಇದೀಗ ಇಲಾಖಾ ತನಿಖೆಯ ಬಿಸಿ ಎದುರಿಸುವ ಸಾಧ್ಯತೆಯಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular