ಶಿವಮೊಗ್ಗ: ಮಹಿಳೆಯನ್ನು ಕೊಲೆ ಮಾಡಿ ಬಾವಿಗೆ ಮೃತದೇಹ ಎಸೆದಿದ್ದ ಅಪರಾಧಿಗೆ ಶಿವಮೊಗ್ಗದ ಮೂರನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ.
ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕು ಬಿದರಗೋಡು ಗ್ರಾಮದಲ್ಲಿ 2022 ಡಿಸೆಂಬರ್ 18ರಂದು ಪಾರ್ವತಮ್ಮ(50) ಎಂಬುವವರ ಮೇಲೆ ಅದೇ ಗ್ರಾಮದ ರಾಜಪ್ಪ(36) ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿ ಗುದ್ದಲಿಯಿಂದ ಹೊಡೆದು ಕೊಲೆ ಮಾಡಿದ್ದ. ನಂತರ ಮೃತದೇಹವನ್ನು ಎಳೆದೊಯ್ದು ಬಾವಿಗೆ ಎಸೆದಿದ್ದ, ಈ ಬಗ್ಗೆ ಆಗುಂಬೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ತನಿಖೆ ನಡೆಸಿದ ಮಾಳೂರು ಸರ್ಕಲ್ ಇನ್ಸ್ಪೆಕ್ಟರ್ ಪ್ರವೀಣ್ ನೀಲಮ್ಮನವರ್ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಸಾಕ್ಷ್ಯಾಧಾರ ದೃಢಪಟ್ಟ ಹಿನ್ನೆಲೆಯಲ್ಲಿ ನ್ಯಾಯಾಧೀಶರಾದ ಯಶವಂತಕುಮಾರ್ ಅವರು ಆರೋಪಿಗೆ ಜೀವಾವಧಿ ಜೈಲು ಶಿಕ್ಷೆ ಮತ್ತು 10 ಸಾವಿರ ರೂಪಾಯಿ ದಂಡ ವಿಧಿಸಿ ಆದೇಶ ಹೊರಡಿಸಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಶಾಂತರಾಜ್ ವಾದ ಮಂಡಿಸಿದ್ದರು.

