ಇಂದಿನ ದಿನಗಳಲ್ಲಿ ಕೈತುಂಬಾ ಸಂಬಳ ಬರುವ ಸಾಫ್ಟ್‌ವೇರ್ ಅಥವಾ ಕಾರ್ಪೊರೇಟ್ ಕೆಲಸ ಎಂದರೆ ಅದೊಂದು ದೊಡ್ಡ ಸಾಧನೆ ಎಂಬಂತೆ ಬಿಂಬಿಸಲಾಗುತ್ತದೆ. ಆದರೆ, ಅದೇ ಐಷಾರಾಮಿ ಜೀವನ ಮತ್ತು ಲಕ್ಷಾಂತರ ರೂಪಾಯಿ ಸಂಬಳವನ್ನು ಧಿಕ್ಕರಿಸಿ, ಜೀವನದ ನಿಜವಾದ ಅರ್ಥ ಹುಡುಕಲು ಹೊರಟ ಯುವಕನೊಬ್ಬನ ಕಥೆ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗುತ್ತಿದೆ.
ವಿಶ್ವಜಿತ್ ಮೊಹಂತಿ ಎಂಬ 35 ವರ್ಷದ ವ್ಯಕ್ತಿ, ಬರೋಬ್ಬರಿ 11 ವರ್ಷಗಳ ಕಾಲ ಕಾರ್ಪೊರೇಟ್ ಜಗತ್ತಿನಲ್ಲಿ ಕೆಲಸ ಮಾಡಿದ ನಂತರ ತಮ್ಮ ವೃತ್ತಿಜೀವನಕ್ಕೆ ಅಧಿಕೃತವಾಗಿ ವಿದಾಯ ಹೇಳಿದ್ದಾರೆ. ಈ ನಿರ್ಧಾರದ ಹಿಂದೆ ಯಾವುದೇ ಕೋಪ ಅಥವಾ ಹತಾಶೆ ಇರಲಿಲ್ಲ, ಬದಲಾಗಿ ಜೀವನದ ಉದ್ದೇಶದ ಬಗ್ಗೆ ನಡೆದ ಆಳವಾದ ಚಿಂತನೆ ಇತ್ತು ಎಂದು ಅವರು ಹೇಳಿಕೊಂಡಿದ್ದಾರೆ.
ತಮ್ಮ ನಿರ್ಧಾರದ ಬಗ್ಗೆ ವಿಡಿಯೋ ಹಂಚಿಕೊಂಡಿರುವ ವಿಶ್ವಜಿತ್, “12 ವರ್ಷಗಳ ಶಾಲಾ ಶಿಕ್ಷಣ, 4 ವರ್ಷಗಳ ಪದವಿ, ಶಿಕ್ಷಣ ಸಾಲ ಪಡೆದು ಮಾಡಿದ 2 ವರ್ಷಗಳ ಸ್ನಾತಕೋತ್ತರ ಪದವಿ ಮತ್ತು 11 ವರ್ಷಗಳ ಕೆಲಸದ ಅನುಭವ.. ಇವೆಲ್ಲದರ ನಂತರ ಇಂದು ನಾನು ಕಾರ್ಪೊರೇಟ್ ಲೋಕಕ್ಕೆ ಗುಡ್ ಬೈ ಹೇಳುತ್ತಿದ್ದೇನೆ. ನಿವೃತ್ತಿಯವರೆಗೆ ಇದನ್ನೇ ಮಾಡಲು ನಾನು ಬಯಸುವುದಿಲ್ಲ ಎಂಬುದು ಮೂರು ವರ್ಷಗಳ ಹಿಂದೆಯೇ ನನಗೆ ಅರಿವಾಗಿತ್ತು” ಎಂದು ಭಾವುಕರಾಗಿ ನುಡಿದಿದ್ದಾರೆ.
ತಮ್ಮ ಆಲೋಚನೆಯನ್ನು ಬದಲಿಸಿದ ಎರಡು ಪ್ರಶ್ನೆಗಳ ಬಗ್ಗೆಯೂ ಅವರು ವಿವರಿಸಿದ್ದಾರೆ. “ಹಣದ ಅವಶ್ಯಕತೆ ಇಲ್ಲದಿದ್ದರೂ ನಾನು ಇದೇ ಕೆಲಸವನ್ನು ಮಾಡುತ್ತಿದ್ದೇನೆಯೇ?” ಮತ್ತು “ನಾನು ಮಾಡುತ್ತಿರುವ ಕೆಲಸದಿಂದ ಸಮಾಜಕ್ಕೆ ಅಥವಾ ಜಗತ್ತಿಗೆ ಏನಾದರೂ ಪ್ರಯೋಜನವಿದೆಯೇ?” ಎಂಬ ಪ್ರಶ್ನೆಗಳಿಗೆ ಅವರ ಬಳಿ ಉತ್ತರವಿರಲಿಲ್ಲ. ಗಾಜಿನ ಕಟ್ಟಡದ ಒಳಗೆ ಕುಳಿತು ಮಾಡುವ ಕೆಲಸಕ್ಕೂ ಹೊರಗಿನ ನೈಜ ಪ್ರಪಂಚಕ್ಕೂ ಯಾವುದೇ ಸಂಬಂಧವಿಲ್ಲ ಎಂಬ ಕಟು ಸತ್ಯ ಅವರಿಗೆ ಮನವರಿಕೆಯಾಗಿತ್ತು.
“ಬ್ಯಾಂಕ್‌ನಲ್ಲಿರುವ ಹಣ ಕೇವಲ ಭೌತಿಕ ಸೌಕರ್ಯಗಳನ್ನು ನೀಡಬಲ್ಲದು. ಆದರೆ ಸಮಯ ಮತ್ತು ಶಕ್ತಿ ಇಲ್ಲದಿದ್ದರೆ ಆ ಹಣದಿಂದ ಸಂತೋಷ ಅಥವಾ ರಾತ್ರಿ ನೆಮ್ಮದಿಯ ನಿದ್ದೆ ಪಡೆಯಲು ಸಾಧ್ಯವಿಲ್ಲ” ಎಂಬ ಅವರ ಮಾತುಗಳು ಅನೇಕ ಉದ್ಯೋಗಿಗಳ ಕಣ್ತೆರೆಸುವಂತಿದೆ. ಇವರ ಈ ಧೈರ್ಯದ ನಿರ್ಧಾರಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದು, ಇಂದಿನ ಯುವಜನತೆ ಎದುರಿಸುತ್ತಿರುವ ‘ಬರ್ನ್ ಔಟ್’ ಸಮಸ್ಯೆ ಮತ್ತು ಮಾನಸಿಕ ಒತ್ತಡದ ಬಗ್ಗೆ ಚರ್ಚೆಗಳು ಆರಂಭವಾಗಿವೆ.
https://www.instagram.com/reel/DX8p2GfxmLK/?utm_source=ig_web_copy_link&igsh=NTc4MTIwNjQ2YQ==

