ಸೈಬರ್ ಅಪರಾಧಿಗಳು ದಿನಕ್ಕೊಂದು ಹೊಸ ದಾರಿ ಹುಡುಕುತ್ತಿದ್ದು, ಇದೀಗ ಕೇವಲ ಒಂದು ಸಣ್ಣ ‘ಡಾಟ್’ (ಚುಕ್ಕೆ) ಇರುವ ವಾಟ್ಸಾಪ್ ಸಂದೇಶದ ಮೂಲಕ ವ್ಯಕ್ತಿಯೊಬ್ಬರ ಬ್ಯಾಂಕ್ ಖಾತೆಗೆ ಕನ್ನ ಹಾಕಿರುವ ಆತಂಕಕಾರಿ ಘಟನೆ ಅಹಮದಾಬಾದ್‌ನ ನರೋಲ್‌ನಲ್ಲಿ ನಡೆದಿದೆ. ಯಾವುದೇ ಓಟಿಪಿ (OTP) ಅಥವಾ ವೈಯಕ್ತಿಕ ಮಾಹಿತಿ ಹಂಚಿಕೊಳ್ಳದಿದ್ದರೂ ಖಾಸಗಿ ಕಂಪನಿಯ ಉದ್ಯೋಗಿಯೊಬ್ಬರು ಬರೋಬ್ಬರಿ 3.40 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ.
ನರೋಲ್ ನಿವಾಸಿ ಗೋಪಾಲ್ ಮಕ್ವಾನಾ ಎಂಬುವವರೇ ಈ ವಿಚಿತ್ರ ಸೈಬರ್ ವಂಚನೆಗೆ ಬಲಿಯಾದವರು. ಇವರಿಗೆ ಕಳೆದ ಡಿಸೆಂಬರ್‌ನಲ್ಲಿ ಅಪರಿಚಿತ ಸಂಖ್ಯೆಯಿಂದ ವಾಟ್ಸಾಪ್‌ನಲ್ಲಿ ಕೇವಲ ಒಂದು ಚುಕ್ಕೆ (.) ಇರುವ ಸಂದೇಶ ಬಂದಿದೆ. ಅದರ ಬೆನ್ನಲ್ಲೇ ಮತ್ತೊಂದು ಸಂಖ್ಯೆಯಿಂದ ಮೂರು ಚುಕ್ಕೆಗಳಿರುವ (…) ಮೆಸೇಜ್ ಬಂದಿದೆ. ಈ ಸಂದೇಶ ಬಂದ ಕೆಲವೇ ಕ್ಷಣಗಳಲ್ಲಿ ಗೋಪಾಲ್ ಅವರ ಮೊಬೈಲ್ ಫೋನ್ ಹ್ಯಾಂಗ್ ಆಗಲು ಶುರುವಾಗಿದೆ. ಅವರು ಏನಾಗುತ್ತಿದೆ ಎಂದು ತಿಳಿಯುವಷ್ಟರಲ್ಲೇ ಅವರ ಬ್ಯಾಂಕ್ ಖಾತೆಯಿಂದ ಹಂತಹಂತವಾಗಿ ಒಟ್ಟು 3.40 ಲಕ್ಷ ರೂಪಾಯಿ ಡ್ರಾ ಆಗಿರುವುದಾಗಿ ಬ್ಯಾಂಕ್‌ನಿಂದ ಸಂದೇಶ ಬಂದಿದೆ.
ಇದಕ್ಕೂ ಮೊದಲು ನವೆಂಬರ್ ತಿಂಗಳಲ್ಲೂ ಇವರಿಗೆ ಕೆವೈಸಿ (KYC) ಅಪ್‌ಡೇಟ್ ಮಾಡುವಂತೆ ಕರೆ ಬಂದಿತ್ತು. ಆಗ ಇವರು ಜಾಗರೂಕರಾಗಿ ಕರೆ ಕಟ್ ಮಾಡಿದ್ದರೂ ಸಹ, ಅಂದು ಸಂಜೆ ಇವರ ಫೋನ್ ಹ್ಯಾಂಗ್ ಆಗಿ ಖಾತೆಯಿಂದ ಸುಮಾರು 5 ಸಾವಿರ ರೂಪಾಯಿ ಕಡಿತವಾಗಿತ್ತು. ಆದರೆ ಎರಡನೇ ಬಾರಿ ವಂಚಕರು ವಾಟ್ಸಾಪ್ ಸಂದೇಶದ ತಂತ್ರ ಬಳಸಿ ಲಕ್ಷಾಂತರ ರೂಪಾಯಿ ದೋಚಿದ್ದಾರೆ.
ಈ ಬಗ್ಗೆ ನರೋಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಕೇವಲ ಒಂದು ಮೆಸೇಜ್ ಮೂಲಕ ಫೋನ್ ಹ್ಯಾಂಗ್ ಮಾಡಿ ಹಣ ದೋಚಿದ್ದು ಹೇಗೆ ಎಂಬ ಬಗ್ಗೆ ತಾಂತ್ರಿಕ ತನಿಖೆ ನಡೆಯುತ್ತಿದೆ. ಸೈಬರ್ ತಜ್ಞರ ಪ್ರಕಾರ, ಇಂತಹ ಸಂದೇಶಗಳ ಮೂಲಕ ಫೋನ್‌ಗೆ ಮಾಲ್‌ವೇರ್ (ವೈರಸ್) ಕಳುಹಿಸಿ ಬ್ಯಾಂಕಿಂಗ್ ಮಾಹಿತಿಯನ್ನು ಕದಿಯುವ ಸಾಧ್ಯತೆ ಇರುತ್ತದೆ. ಸಾರ್ವಜನಿಕರು ಅಪರಿಚಿತ ಸಂಖ್ಯೆಗಳಿಂದ ಬರುವ ಇಂತಹ ಸಂದೇಹಾಸ್ಪದ ಲಿಂಕ್ ಅಥವಾ ಮೆಸೇಜ್‌ಗಳ ಬಗ್ಗೆ ಎಚ್ಚರದಿಂದಿರಲು ಪೊಲೀಸರು ಸೂಚಿಸಿದ್ದಾರೆ.

