ದೀಪಾವಳಿ ಹಬ್ಬದ ಸಂಭ್ರಮದಲ್ಲಿ ಮನೆಯೆಲ್ಲ ದೀಪ ಬೆಳಗಿಸಿ ಸಂತೋಷದಿಂದ ಕಾಲ ಕಳೆಯಬೇಕಿದ್ದ ಕುಟುಂಬವೊಂದಕ್ಕೆ ವಿಧಿ ಕ್ರೂರವಾಗಿ ಆಟವಾಡಿದೆ. ಕಿರುತೆರೆಯ ಖ್ಯಾತ ನಟಿ ದಿವ್ಯಾಂಕಾ ತ್ರಿಪಾಠಿ ಮತ್ತು ಪತಿ ವಿವೇಕ್ ದಹಿಯಾ ವಾಸವಿರುವ ಅಪಾರ್ಟ್ಮೆಂಟ್ನಲ್ಲಿ ದೀಪಾವಳಿಯ ದೀಪದಿಂದ ಭೀಕರ ಅಗ್ನಿ ಅವಘಡ ಸಂಭವಿಸಿದೆ. ಬೆಂಕಿ ಮತ್ತು ದಟ್ಟ ಹೊಗೆಯ ನಡುವೆ ನಟ ದಂಪತಿ ತಮ್ಮ ಅವಳಿ ಮಕ್ಕಳೊಂದಿಗೆ ಪ್ರಾಣ ಉಳಿಸಿಕೊಂಡು ಹೊರಬಂದಿದ್ದಾರೆ. ಆದರೆ ಇದೇ ದುರಂತದಲ್ಲಿ ಒಂಬತ್ತು ವರ್ಷಗಳಿಂದ ಕಟ್ಟಡದ ನಿವಾಸಿಗಳೊಂದಿಗೆ ಆತ್ಮೀಯವಾಗಿ ಬೆರೆತಿದ್ದ ಸೆಕ್ಯುರಿಟಿ ಗಾರ್ಡ್ ಧನ್ಪತ್ ಮಹತೋ ಪ್ರಾಣ ಕಳೆದುಕೊಂಡಿದ್ದಾರೆ.
ಮುಂಬೈನ ಅಂಧೇರಿ ವೆಸ್ಟ್ನ ರನ್ವಾಲ್ ಟವರ್ಸ್ನ 17ನೇ ಮಹಡಿಯಲ್ಲಿ ನವೆಂಬರ್ 7ರ ರಾತ್ರಿ ಈ ಘಟನೆ ನಡೆದಿದೆ. ರಾತ್ರಿ ಸುಮಾರು 9.50ರ ವೇಳೆಗೆ ಕಟ್ಟಡದ ಸಿ ವಿಂಗ್ನ 1702ನೇ ಫ್ಲಾಟ್ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕೆಲವೇ ಕ್ಷಣಗಳಲ್ಲಿ ದಟ್ಟ ಹೊಗೆ ಇಡೀ ಪ್ರದೇಶವನ್ನು ಆವರಿಸಿದೆ.
ಒಂದು ದೀಪದಿಂದ ಹೊತ್ತಿಕೊಂಡ ಬೆಂಕಿ!
ದೀಪಾವಳಿ ಪೂಜೆ ಮುಗಿಸಿದ ಬಳಿಕ ಫ್ಲಾಟ್ ಮಾಲೀಕ ಶರದ್ ಅಗರ್ವಾಲ್ ಮತ್ತು ಅವರ ಪತ್ನಿ ಹಾಲ್ನಲ್ಲಿ ದೀಪ ಹಚ್ಚಿಟ್ಟು ಊಟಕ್ಕೆ ಹೊರಗೆ ಹೋಗಿದ್ದರು. ಈ ವೇಳೆ ದೀಪದಿಂದ ಬೆಂಕಿ ಕಾಣಿಸಿಕೊಂಡು ಮನೆಯೊಳಗೆ ವ್ಯಾಪಿಸಿದೆ. ಅದೃಷ್ಟವಶಾತ್ ಮನೆಯಲ್ಲಿದ್ದ ವೃದ್ಧ ಪೋಷಕರನ್ನು ಕೆಲಸದ ಮಹಿಳೆ ಸಮಯಪ್ರಜ್ಞೆಯಿಂದ ಲಿಫ್ಟ್ ಮೂಲಕ ಕೆಳಗೆ ಕರೆತಂದಿದ್ದಾರೆ.
ಇತ್ತ ಅಗ್ನಿ ಅವಘಡದ ಸುದ್ದಿ ತಿಳಿಯುತ್ತಿದ್ದಂತೆ ಕಟ್ಟಡದ ನಿವಾಸಿಗಳಲ್ಲಿ ಆತಂಕ ಮನೆಮಾಡಿತ್ತು. ನಟಿ ದಿವ್ಯಾಂಕಾ ತ್ರಿಪಾಠಿ ಮತ್ತು ವಿವೇಕ್ ದಹಿಯಾ ಕೂಡ ತಮ್ಮ ಅವಳಿ ಮಕ್ಕಳೊಂದಿಗೆ ಸುರಕ್ಷಿತವಾಗಿ ಹೊರಬರುವಲ್ಲಿ ಯಶಸ್ವಿಯಾಗಿದ್ದಾರೆ.
ಮಕ್ಕಳೊಂದಿಗೆ ಪಾರಾದ ಸ್ಟಾರ್ ದಂಪತಿ; ಆದರೆ ಗಾರ್ಡ್ ಬದುಕುಳಿಯಲಿಲ್ಲ!
ಈ ಘಟನೆಯಲ್ಲಿ ನಟ ದಂಪತಿ ಮತ್ತು ಮಕ್ಕಳು ಸುರಕ್ಷಿತವಾಗಿರುವುದು ಸಮಾಧಾನ ತಂದಿದ್ದರೂ, ಕಟ್ಟಡದ ಸೆಕ್ಯುರಿಟಿ ಗಾರ್ಡ್ ಧನ್ಪತ್ ಮಹತೋ ಅವರ ಸಾವು ಎಲ್ಲರನ್ನೂ ದುಃಖದಲ್ಲಿ ಮುಳುಗಿಸಿದೆ.
ಕಳೆದ ಒಂಬತ್ತು ವರ್ಷಗಳಿಂದ ಇದೇ ಕಟ್ಟಡದಲ್ಲಿ ಕೆಲಸ ಮಾಡುತ್ತಿದ್ದ 56 ವರ್ಷದ ಧನ್ಪತ್, ಬೆಂಕಿ ಕಾಣಿಸಿಕೊಂಡ ಸಂದರ್ಭದಲ್ಲಿ ಕರ್ತವ್ಯದಲ್ಲಿದ್ದರು. ಅವರು ಮೆಟ್ಟಿಲುಗಳ ಬದಲಿಗೆ ಲಿಫ್ಟ್ ಬಳಸಿದಾಗ ದಟ್ಟ ಹೊಗೆಯಲ್ಲಿ ಸಿಲುಕಿಕೊಂಡು ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ಅವರನ್ನು ಹೊರತಂದು ಆಸ್ಪತ್ರೆಗೆ ದಾಖಲಿಸಿದರೂ, ನವೆಂಬರ್ 8ರ ಮುಂಜಾನೆ ಸುಮಾರು 2 ಗಂಟೆಗೆ ಅವರು ಕೊನೆಯುಸಿರೆಳೆದಿದ್ದಾರೆ.
‘ನಮ್ಮ ಮಕ್ಕಳನ್ನು ಆಶೀರ್ವದಿಸಿದ ಅಂಕಲ್ ಇನ್ನಿಲ್ಲ!’
ಧನ್ಪತ್ ಅವರ ಸಾವು ನಟಿ ದಿವ್ಯಾಂಕಾ ಮತ್ತು ವಿವೇಕ್ ದಂಪತಿಗೆ ದೊಡ್ಡ ಆಘಾತ ನೀಡಿದೆ. ಕೇವಲ ಕಟ್ಟಡದ ಸೆಕ್ಯುರಿಟಿ ಗಾರ್ಡ್ ಆಗಿರದೆ, ತಮ್ಮ ಕುಟುಂಬದ ಸದಸ್ಯರಂತೆಯೇ ಇದ್ದ ವ್ಯಕ್ತಿಯನ್ನು ಕಳೆದುಕೊಂಡ ನೋವನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ತಮ್ಮ ಅವಳಿ ಮಕ್ಕಳು ಜನಿಸಿದ ಬಳಿಕ ಮೊದಲ ಬಾರಿಗೆ ಮನೆಗೆ ಕರೆತಂದಾಗ ಧನ್ಪತ್ ಅಂಕಲ್ ಪ್ರೀತಿಯಿಂದ ಮಕ್ಕಳನ್ನು ಆಶೀರ್ವದಿಸಿದ್ದ ಹಳೆಯ ವಿಡಿಯೋವನ್ನು ದಂಪತಿ ಹಂಚಿಕೊಂಡಿದ್ದಾರೆ.
“ಕೆಲವು ನಷ್ಟಗಳು ಎಂದಿಗೂ ಮಾಯವಾಗದ ಮೌನವನ್ನು ಉಳಿಸುತ್ತವೆ. ನಮ್ಮ ಮಕ್ಕಳು ಬೆಳೆಯುವುದನ್ನು ಅವರು ನೋಡುತ್ತಾರೆ, ಅವರೊಂದಿಗೆ ಆಟವಾಡುತ್ತಾರೆ ಎಂದು ನಾವು ಕನಸು ಕಂಡಿದ್ದೆವು. ಆದರೆ ಆ ಕನಸುಗಳು ಹೀಗೆ ಅಪೂರ್ಣವಾಗಿ ಉಳಿಯುತ್ತವೆ ಎಂದು ಊಹಿಸಿರಲಿಲ್ಲ” ಎಂದು ಭಾವುಕರಾಗಿದ್ದಾರೆ.
“ಧನ್ಪತ್ ಅಂಕಲ್ ಕೇವಲ ಕಟ್ಟಡದ ಗಾರ್ಡ್ ಆಗಿರಲಿಲ್ಲ. ಅವರು ನಮ್ಮ ಜೀವನದ ಒಂದು ಭಾಗವಾಗಿದ್ದರು. ನಮ್ಮ ಮಕ್ಕಳನ್ನು ಆಶೀರ್ವದಿಸಿದ ಅವರ ಪ್ರೀತಿಯ ಕೈಗಳು ಇನ್ನು ನಮ್ಮೊಂದಿಗಿಲ್ಲ ಎಂಬ ನೋವು ಎಂದಿಗೂ ಮರೆಯಾಗುವುದಿಲ್ಲ” ಎಂದು ದಂಪತಿ ಸಂತಾಪ ಸೂಚಿಸಿದ್ದಾರೆ.
ದೀಪಾವಳಿ ಸಂಭ್ರಮದ ನಡುವೆ ಮರೆಯಲಾಗದ ದುರಂತ
ಅಗ್ನಿ ಅವಘಡದ ಬಳಿಕ ಕಟ್ಟಡದಲ್ಲಿ ವಿದ್ಯುತ್ ಮತ್ತು ಗ್ಯಾಸ್ ಪೂರೈಕೆಯನ್ನು ಮರುಸ್ಥಾಪಿಸಲಾಗಿದೆ. ಆದರೆ ಧನ್ಪತ್ ಅವರ ಸಾವಿನಿಂದ ನಿವಾಸಿಗಳಲ್ಲಿ ದುಃಖದ ಛಾಯೆ ಆವರಿಸಿದೆ. ಹಬ್ಬದ ಸಂಭ್ರಮದಲ್ಲಿ ಸಣ್ಣ ನಿರ್ಲಕ್ಷ್ಯವೂ ಎಂತಹ ದೊಡ್ಡ ದುರಂತಕ್ಕೆ ಕಾರಣವಾಗಬಹುದು ಎಂಬುದಕ್ಕೆ ಈ ಘಟನೆ ಕಹಿ ನೆನಪಾಗಿ ಉಳಿದಿದೆ.
https://x.com/thetatvaindia/status/2120119277759934835/video/2

