ಬೆಂಗಳೂರು: ದೇಶದ ರಾಜಕಾರಣದ ಧೀಮಂತ ನಾಯಕ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಮುಂಬರುವ ಜೂನ್ 18 ರಂದು ನಡೆಯಲಿರುವ ರಾಜ್ಯಸಭಾ ಚುನಾವಣೆಗೆ ಬೆಂಗಳೂರಿನ ವಿಧಾನಸೌಧದಲ್ಲಿ ನಾಮಪತ್ರ ಸಲ್ಲಿಸಿದ್ದಾರೆ. ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಸಮ್ಮುಖದಲ್ಲಿ ಖರ್ಗೆ ಅವರು ನಾಮಪತ್ರ ಸಲ್ಲಿಕೆ ಮಾಡಿದರು.
ಆದರೆ, ನಾಮಪತ್ರ ಸಲ್ಲಿಕೆ ಬೆನ್ನಲ್ಲೇ ಖರ್ಗೆ ಅವರು ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಆಸ್ತಿ ಅಫಿಡವಿಟ್ ಈಗ ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಕಳೆದ ಕೇವಲ 6 ವರ್ಷಗಳಲ್ಲಿ ಅವರ ನಿವ್ವಳ ಆಸ್ತಿ ಮೌಲ್ಯದಲ್ಲಿ ಬರೋಬ್ಬರಿ ಶೇಕಡಾ 92 ರಷ್ಟು ಭಾರಿ ಏರಿಕೆಯಾಗಿದೆ ಅವರ ಒಟ್ಟು ಆಸ್ತಿ ಎಷ್ಟು ಕೋಟಿ ತಲುಪಿದೆ? ಪತ್ನಿ ಹೆಸರಲ್ಲೇನಿದೆ? ಅವರ ಮೇಲಿರುವ ಕೇಸ್‌ಗಳೇನು? ಖರ್ಗೆ ಅವರ ಅಫಿಡವಿಟ್‌ನ ಚರ ಮತ್ತು ಸ್ಥಿರ ಆಸ್ತಿಗಳ ಸಂಪೂರ್ಣ ವಿವರ ಹೀಗಿದೆ
20 ಕೋಟಿ ರೂಪಾಯಿ ಜಂಪ್ 6 ವರ್ಷದ ಲೆಕ್ಕಾಚಾರವೇನು?
ಅಫಿಡವಿಟ್ ಪ್ರಕಾರ, ಖರ್ಗೆ ಅವರ ಒಟ್ಟು ಆಸ್ತಿ ಮೌಲ್ಯ ಈಗ 38.7 ರಿಂದ 38.80 ಕೋಟಿ ರೂಪಾಯಿಗಳಿಗೆ ತಲುಪಿದೆ (ಪತ್ನಿ ಮತ್ತು ಜಂಟಿ ಕುಟುಂಬದ ಆಸ್ತಿ ಸೇರಿ).
ಕಳೆದ 2020ರ ಜೂನ್‌ನಲ್ಲಿ ರಾಜ್ಯಸಭೆ ಚುನಾವಣೆಗೆ ಸ್ಪರ್ಧಿಸುವಾಗ ಖರ್ಗೆ ಅವರ ಒಟ್ಟು ಆಸ್ತಿ 20.12 ಕೋಟಿ ರೂ. ಇತ್ತು.ಕೇವಲ ಆರು ವರ್ಷಗಳ ಅವಧಿಯಲ್ಲಿ ಅವರ ಆಸ್ತಿಯಲ್ಲಿ ಸುಮಾರು 20 ಕೋಟಿ ರೂಪಾಯಿಗಳಿಗಿಂತಲೂ ಅಧಿಕ ಭಾರಿ ಹೆಚ್ಚಳ ಕಂಡುಬಂದಿದೆ.
ಮಲ್ಲಿಕಾರ್ಜುನ ಖರ್ಗೆ ಕುಟುಂಬದ ಚರ ಮತ್ತು ಸ್ಥಿರ ಆಸ್ತಿಯ ಡಿಟೇಲ್ಸ್ ಈ ಕೆಳಗಿನಂತಿದೆ:
ಮಲ್ಲಿಕಾರ್ಜುನ ಖರ್ಗೆ ಅವರ ಸ್ವಂತ ಆಸ್ತಿ:
ಒಟ್ಟು ಸ್ವಂತ ಆಸ್ತಿ: 14.89 ಕೋಟಿ ರೂಪಾಯಿ.
ಚರಾಸ್ತಿ (Movable): 6.59 ಕೋಟಿ ರೂ. (ಇದರಲ್ಲಿ ವಿವಿಧ ಬ್ಯಾಂಕ್‌ಗಳಲ್ಲಿ 5.25 ಕೋಟಿ ರೂ. ಠೇವಣಿ ಹಾಗೂ 54.15 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಸೇರಿದೆ).
ಸ್ಥಿರಾಸ್ತಿ (Immovable): 8.30 ಕೋಟಿ ರೂ..
ಪತ್ನಿ ರಾಧಾಬಾಯಿ ಖರ್ಗೆ ಆಸ್ತಿ ವಿವರ:
ಒಟ್ಟು ಸ್ವಂತ ಆಸ್ತಿ: 14.26 ಕೋಟಿ ರೂಪಾಯಿ.
ಚರಾಸ್ತಿ (Movable): 4.41 ಕೋಟಿ ರೂ. (ಬ್ಯಾಂಕ್ ಠೇವಣಿ 2.84 ಕೋಟಿ ರೂ. ಮತ್ತು 1.50 ಕೋಟಿ ರೂ. ಮೌಲ್ಯದ ಚಿನ್ನಾಭರಣ ಹೊಂದಿದ್ದಾರೆ).
ಸ್ಥಿರಾಸ್ತಿ (Immovable): 9.85 ಕೋಟಿ ರೂ.
ಜಂಟಿ ಕುಟುಂಬದ ಸ್ಥಿರಾಸ್ತಿ: ಇವೆಲ್ಲದರ ಹೊರತಾಗಿ ಖರ್ಗೆ ಅವರ ಜಂಟಿ ಕುಟುಂಬದ ಹೆಸರಿನಲ್ಲಿ 9.22 ಕೋಟಿ ರೂಪಾಯಿ ಮೌಲ್ಯದ ಸ್ಥಿರಾಸ್ತಿ ಇದೆ.
ಬೆಂಗಳೂರು, ಕಲಬುರಗಿಯಲ್ಲಿ ಮನೆ, ವಾಣಿಜ್ಯ ಕಟ್ಟಡಗಳು (Real Estate)ಖರ್ಗೆ ಮತ್ತು ಅವರ ಪತ್ನಿ ಹೆಸರಿನಲ್ಲಿ ರಾಜ್ಯದ ಪ್ರಮುಖ ನಗರಗಳಲ್ಲಿ ವಸತಿ ಹಾಗೂ ವಾಣಿಜ್ಯ ಆಸ್ತಿಗಳಿವೆ
ಮಲ್ಲಿಕಾರ್ಜುನ ಖರ್ಗೆ ಅವರಿಗೆ ಬೆಂಗಳೂರಿನ ಸದಾಶಿವನಗರ ಮತ್ತು ಕಲಬುರಗಿಯಲ್ಲಿ ಮೂರು ವಾಸದ ಮನೆಗಳಿದ್ದು, ಇವುಗಳ ಮೌಲ್ಯ 7.82 ಕೋಟಿ ರೂ. ಆಗಿದೆ. ಇದರೊಂದಿಗೆ ಕಲಬುರಗಿ ಜಿಲ್ಲೆಯ ಗುಂಡಗುರ್ತಿ ಗ್ರಾಮದಲ್ಲಿ ಕೃಷಿ ಮತ್ತು ಕೃಷಿಯೇತರ ಭೂಮಿ ಹೊಂದಿದ್ದಾರೆ.
ಪತ್ನಿ ರಾಧಾಬಾಯಿ ಹೆಸರಲ್ಲೂ ಸದಾಶಿವನಗರ ಮತ್ತು ಕಲಬುರಗಿಯಲ್ಲಿ 3.32 ಕೋಟಿ ರೂ. ಮೌಲ್ಯದ ಮನೆಗಳಿವೆ. ಜೊತೆಗೆ ಅವರ ಹೆಸರಿನಲ್ಲಿ 4 ಕೋಟಿ ರೂ. ಮೌಲ್ಯದ ವಾಣಿಜ್ಯ ಕಟ್ಟಡಗಳೂ ಇವೆ.
ದೇಶದ ಅತಿ ದೊಡ್ಡ ರಾಷ್ಟ್ರೀಯ ಪಕ್ಷದ ಅಧ್ಯಕ್ಷರಾಗಿದ್ದರೂ, ಮಲ್ಲಿಕಾರ್ಜುನ ಖರ್ಗೆ ಅವರ ಹೆಸರಿನಲ್ಲಿ ಯಾವುದೇ ಸ್ವಂತ ಕಾರು, ಬೈಕ್ ಅಥವಾ ಇನ್ಯಾವುದೇ ವಾಹನಗಳಿಲ್ಲ ಎಂದು ಅಫಿಡವಿಟ್‌ನಲ್ಲಿ ಸ್ವತಃ ಘೋಷಿಸಿಕೊಂಡಿದ್ದಾರೆ.ಖರ್ಗೆ ಅವರ ಹೆಸರಿನಲ್ಲಿ 10 ಲಕ್ಷ ರೂ. ಹಾಗೂ ಪತ್ನಿ ಹೆಸರಿನಲ್ಲಿ 17.50 ಲಕ್ಷ ರೂ. ಸಾಲದ ಹೊಣೆಗಾರಿಕೆ ಇದೆ.
ಅಸ್ಸಾಂನಲ್ಲಿ ದಾಖಲಾಗಿವೆ 5 ದ್ವೇಷ ಭಾಷಣದ ಕೇಸ್‌ಗಳು! (Legal Cases)
ತಮ್ಮ ವಿರುದ್ಧ ಇರುವ ಕ್ರಿಮಿನಲ್ ಮೊಕದ್ದಮೆಗಳ ಬಗ್ಗೆಯೂ ಖರ್ಗೆ ಮಾಹಿತಿ ನೀಡಿದ್ದಾರೆ. ರಾಜಕೀಯ ಭಾಷಣದ ವೇಳೆ ದ್ವೇಷ ಪ್ರಚೋದನೆ ಮಾಡಲಾಗಿದೆ ಎಂದು ಆರೋಪಿಸಿ ಅವರ ವಿರುದ್ಧ ಒಟ್ಟು 5 ದ್ವೇಷ ಭಾಷಣಕ್ಕೆ ಸಂಬಂಧಿಸಿದ ಪ್ರಕರಣಗಳು ದಾಖಲಾಗಿವೆ. ವಿಶೇಷವೆಂದರೆ, ಈ ಎಲ್ಲಾ ಐದೂ ಪ್ರಕರಣಗಳು ಅಸ್ಸಾಂ ರಾಜ್ಯದಲ್ಲಿ ದಾಖಲಾಗಿದ್ದು, ಇವುಗಳನ್ನು ಹೊರತುಪಡಿಸಿ ಅವರ ಮೇಲೆ ಬೇರೆ ಯಾವುದೇ ಕ್ರಿಮಿನಲ್ ಕೇಸ್‌ಗಳಿಲ್ಲ.

