ಬಾಲಿವುಡ್‌ನ ಖ್ಯಾತ ನಟಿ ಮಹಿಮಾ ಚೌಧರಿ ಅವರ ಮಗಳು ಅರಿನಾ ಚೌಧರಿ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದ್ದಾರೆ. ಇತ್ತೀಚೆಗೆ ಬಿಡುಗಡೆಯಾಗಿ ಜನಪ್ರಿಯತೆ ಪಡೆದಿರುವ ವೆಬ್ ಸರಣಿಯೊಂದರ ನಟಿಯನ್ನು ನೋಡಿ, ಅದು ಮಹಿಮಾ ಚೌಧರಿ ಮಗಳೇ ಇರಬೇಕು ಎಂದು ನೆಟ್ಟಿಗರು ಕನ್‌ಫ್ಯೂಸ್ ಮಾಡಿಕೊಂಡಿದ್ದಾರೆ. ಈ ಗೊಂದಲ ಎಷ್ಟು ಹೆಚ್ಚಾಗಿದೆಯೆಂದರೆ, ಅನೇಕರು ಮಹಿಮಾ ಅವರಿಗೆ ಫೋನ್ ಮಾಡಿ ನಿಮ್ಮ ಮಗಳು ನಟನೆಗೆ ಪದಾರ್ಪಣೆ ಮಾಡಿದ್ದಾಳಾ ಎಂದು ಕೇಳಲು ಆರಂಭಿಸಿದ್ದಾರೆ.
ಅಮೆರಿಕದ ಪ್ರೈಮ್ ವಿಡಿಯೋದಲ್ಲಿ ಪ್ರಸಾರವಾಗುತ್ತಿರುವ ಆಫ್ ಕ್ಯಾಂಪಸ್ ಎನ್ನುವ ಕಾಲೇಜು ರೋಮ್ಯಾನ್ಸ್ ಡ್ರಾಮಾ ಸರಣಿಯಲ್ಲಿ ಆಲಿ ಹೇಸ್ ಎಂಬ ಪಾತ್ರದಲ್ಲಿ ನಟಿಸಿರುವ ಮಿಕಾ ಅಬ್ದಲ್ಲಾ ಮತ್ತು ಮಹಿಮಾ ಮಗಳು ಅರಿನಾ ಮುಖಲಕ್ಷಣಗಳು ಒಂದೇ ತರಹ ಇವೆ. ಇವರಿಬ್ಬರ ನಡುವಿನ ಅಚ್ಚರಿಯ ಹೋಲಿಕೆಯೇ ಈ ಎಲ್ಲಾ ಗೊಂದಲಗಳಿಗೆ ಕಾರಣವಾಗಿದೆ.
ಈ ಕುರಿತು ಮಾಧ್ಯಮವೊಂದರ ಜೊತೆ ಮಾತನಾಡಿರುವ ನಟಿ ಮಹಿಮಾ ಚೌಧರಿ, ಹೌದು, ಕೆಲವರು ನನಗೆ ಫೋನ್ ಮಾಡಿ ಅರಿನಾ ಸಿನಿಮಾಗೆ ಎಂಟ್ರಿ ಕೊಟ್ಟಿದ್ದಾಳಾ ಎಂದು ಕೇಳಿದರು. ಆಗ ನಾನು ಇಲ್ಲ, ಇನ್ನು ಇಲ್ಲ, ಇದು ಆಫ್ ಕ್ಯಾಂಪಸ್ ವೆಬ್ ಸರಣಿಯ ನಟಿ ಎಂದು ಸ್ಪಷ್ಟನೆ ನೀಡಿದೆ ಎಂದು ನಗುತ್ತಾ ಹೇಳಿದ್ದಾರೆ. ಎರಡು ಬೇರೆ ಬೇರೆ ಖಂಡಗಳಲ್ಲಿ ಇರುವ ಇಬ್ಬರು ವ್ಯಕ್ತಿಗಳು ಇಷ್ಟೊಂದು ಒಂದೇ ತರಹ ಕಾಣಲು ಹೇಗೆ ಸಾಧ್ಯ ಎಂದು ಸ್ವತಃ ಮಹಿಮಾ ಅವರೇ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ ಮಗಳ ಈ ಹೋಲಿಕೆಯ ಬಗ್ಗೆ ಮಹಿಮಾ ಸಂತಸ ವ್ಯಕ್ತಪಡಿಸಿದ್ದು, ಆ ವೆಬ್ ಸರಣಿಯ ನಟಿ ಮಿಕಾ ಅಬ್ದಲ್ಲಾ ತುಂಬಾ ಮುದ್ದಾಗಿ ಕಾಣಿಸುತ್ತಾರೆ. ಹಾಗಾಗಿ ಜನರು ನನ್ನ ಮಗಳನ್ನು ಆ ನಟಿಗೆ ಹೋಲಿಸುತ್ತಿರುವುದು ನನಗೆ ಖುಷಿ ತಂದಿದೆ ಮತ್ತು ಇದೊಂದು ಉತ್ತಮ ಕಾಂಪ್ಲಿಮೆಂಟ್ ಎಂದು ಭಾವಿಸುತ್ತೇನೆ ಎಂದಿದ್ದಾರೆ.
ಮಗಳ ಭವಿಷ್ಯದ ಬಗ್ಗೆ ಮಾತನಾಡಿದ ಮಹಿಮಾ, ಅರಿನಾ ಇತ್ತೀಚೆಗಷ್ಟೇ ೧೨ನೇ ತರಗತಿ ಮುಗಿಸಿದ್ದು, ಮುಂದಿನ ವಿದ್ಯಾಭ್ಯಾಸದ ಬಗ್ಗೆ ನಿರ್ಧಾರ ಕೈಗೊಳ್ಳಲು ಸದ್ಯ ಒಂದು ವರ್ಷದ ಬಿಡುವು ತಗೆದುಕೊಂಡಿದ್ದಾಳೆ. ಅವಳು ಇನ್ನು ಯಾವುದೇ ನಟನಾ ಪ್ರಾಜೆಕ್ಟ್ ಒಪ್ಪಿಕೊಂಡಿಲ್ಲ. ಆದರೆ ವೈಯಕ್ತಿಕವಾಗಿ ಅವಳು ಮನರಂಜನಾ ಕ್ಷೇತ್ರಕ್ಕೆ ಬರಬೇಕೆಂಬುದು ನನ್ನ ಆಸೆ. ಜನರನ್ನು ರಂಜಿಸುವುದಕ್ಕಿಂತ ದೊಡ್ಡದು ಯಾವುದೂ ಇಲ್ಲ. ಚಿತ್ರರಂಗ ನನಗೆ ಎಲ್ಲವನ್ನೂ ನೀಡಿದೆ, ಹಾಗಾಗಿ ಮಗಳು ಕೂಡ ನಟಿಯಾಗಿ ಅಥವಾ ಯಾವುದೇ ಸೃಜನಶೀಲ ಪಾತ್ರದ ಮೂಲಕ ಇದೇ ರಂಗಕ್ಕೆ ಬಂದರೆ ನನಗೆ ಹೆಮ್ಮೆಯಾಗಲಿದೆ ಎಂದು ತಮ್ಮ ಇಚ್ಛೆಯನ್ನು ಹೊರಹಾಕಿದ್ದಾರೆ.
ಹಿಟ್ ಸಿನಿಮಾ ಪರದೇಸ್ ಮೂಲಕ ಶಾರುಖ್ ಖಾನ್ ಎದುರು ನಾಯಕಿಯಾಗಿ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ್ದ ಮಹಿಮಾ ಚೌಧರಿ, ಆ ಬಳಿಕ ಧಡ್ಕನ್, ಲಜ್ಜಾ, ಬಾಗ್ಬಾನ್ ಸೇರಿದಂತೆ ಹಲವು ಯಶಸ್ವಿ ಚಿತ್ರಗಳಲ್ಲಿ ನಟಿಸಿದ್ದಾರೆ. ಇತ್ತೀಚೆಗಷ್ಟೇ ಅವರು ಸಂಜಯ್ ಮಿಶ್ರಾ ಅವರೊಂದಿಗೆ ದುರ್ಲಭ್ ಪ್ರಸಾದ್ ಕಿ ದೂಸ್ರಿ ಶಾದಿ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು.

