ಚಿಕ್ಕಬಳ್ಳಾಪುರ: ಹಣಕ್ಕಾಗಿ ಅತ್ತಿಗೆಯನ್ನು ಕೊಲೆ ಮಾಡಿಸಿ ದರೋಡೆಕೋರರ ಕೃತ್ಯ ಎಂದು ಕಥೆ ಕಟ್ಟಿದ ನಾದಿನಿ ಹಾಗೂ ಸೋದರ ಸಂಬಂಧಿಯನ್ನು ಪೊಲೀಸರು ಬಂಧಿಸಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ನಡೆದಿದೆ.
ಚಿಕ್ಕಬಳ್ಳಾಪುರ ನಗರದ ಕಂದವಾರ ಬಾಗಿಲು ಬಳಿಯ ಬಾಪೂಜಿ ನಗರದಲ್ಲಿ ಮೇಸ್ತ್ರಿ ನರಸಿಂಹಮೂರ್ತಿ ಎಂಬವರ ಸೊಸೆ ಪುಷ್ಪಲತಾ ಅವರನ್ನು ಕತ್ತು ಸೀಳಿ ಕೊಲೆ ಮಾಡಲಾಗಿತ್ತು. ಕೊರಳಲ್ಲಿದ್ದ ಮಾಂಗಲ್ಯ ಸರ ಮತ್ತು ಕಿವಿಯೊಲೆ ದೋಚಿ ದುಷ್ಕರ್ಮಿಗಳು ಪರಾರಿಯಾಗಿದ್ದರು.
ಪುಷ್ಪಲತಾ ಪಕ್ಕದಲ್ಲಿಯೇ ಮಲಗಿದ್ದ ನಾದಿನಿ ಭವ್ಯಾಳ ಬಾಯಿಗೆ ಬಟ್ಟೆ ತುರುಕಿ, ಮುಖಕ್ಕೆ ಸ್ಪ್ರೈ ಹೊಡೆಯಲಾಗಿದ್ದು, ಕೃತ್ಯದಿಂದ ಅಸ್ವಸ್ಥಗೊಂಡಿದ್ದ ಆಕೆಯನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು. ಈ ಕುರಿತು ಚಿಕ್ಕಬಳ್ಳಾಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು.
ಮಗಳು ಕೊಲೆಯಾಗಿರುವ ಸುದ್ದಿ ತಿಳಿದು ಸ್ಥಳಕ್ಕೆ ಬಂದ ತಂದೆ ಮಹೇಶ್, ತಾಯಿ ಲಕ್ಷ್ಮೀ ಇದು ದರೋಡೆಯಲ್ಲ, ವ್ಯವಸ್ಥಿತ ಕೊಲೆ. ಅಳಿಯನ ಅಕ್ರಮ ಸಂಬಂಧದಿಂದ ಸುಪಾರಿ ಕೊಟ್ಟು ಮಗಳ ಕೊಲೆ ಮಾಡಲಾಗಿದೆ ಎಂದು ಆರೋಪ ಮಾಡಿದ್ದರು. ಆದರೆ, ತನಿಖೆ ನಡೆಸುತ್ತಿದ್ದ ಪೊಲೀಸರು ಇದಕ್ಕೂ ಮೊದಲು ದರೋಡೆ ಪ್ರಕರಣ ಎಂದೇ ನಂಬಿದ್ದರು. ಆದರೆ, ಆಸ್ಪತ್ರೆಯಲ್ಲಿ ದಾಖಲಾಗಿದ್ದ ನಾದಿನಿ ಭವ್ಯಾಳನ್ನು ವಿಚಾರಣೆ ನಡೆಸಿದಾಗ ಅಘಾತಕಾರಿ ಅಂಶ ಬೆಳಕಿಗೆ ಬಂದಿದೆ. ಭವ್ಯಾ ನೀಡಿದ ಹೇಳಿಕೆಯಿಂದ ಅನುಮಾನಗೊಂಡು ಆಕೆಯನ್ನು ತೀವ್ರ ವಿಚಾರ ಮಾಡಿದಾಗ ಕೊಲೆ ರಹಸ್ಯ ಬಾಯ್ಬಿಟ್ಟಿದ್ದಾಳೆ.
ಭವ್ಯಾ ಆಕೆಯ ಬಾಯ್ ಫ್ರೆಂಡ್ ಜೊತೆ ಖಾಸಗಿ ಕ್ಷಣಗಳ ವಿಡಿಯೋ ಆಕೆಯ ಸೋದರ ಸಂಬಂಧಿ ಹೊಸಕೋಟೆಯ ಲೋಹಿತ್ ಕುಮಾರ್ ಅಲಿಯಾಸ್ ಲೂಲ್ ಯಾದವ್ ಬಳಿ ಇತ್ತು. ಈ ವಿಡಿಯೋ ಮೂಲಕ ಆಕೆಗೆ ಬ್ಲ್ಯಾಕ್‌ಮೇಲ್ ಮಾಡಿ 4 ಲಕ್ಷ ರೂಪಾಯಿ ಹಣ ಪಡೆದಿದ್ದ. ಬಳಿಕ ಮತ್ತಷ್ಟು ಹಣಕ್ಕೆ ಬೇಡಿಕೆ ಇಟ್ಟಿದ್ದಾನೆ. ಈ ವಿಷಯ ಭವ್ಯಾಳ ತಾಯಿ ವಿಜಯಲಕ್ಷ್ಮಿಗೂ ಗೊತ್ತಾಗಿತ್ತು. ಹಣಕ್ಕಾಗಿ ಸೊಸೆಯ ಕೊರಳಲ್ಲಿದ್ದ ಮಾಂಗಲ್ಯ ಸರ ದೋಚುವ ಪ್ಲಾನ್ ಮಾಡಿದ್ದರು. ಅದರಂತೆ ಲೋಹಿತ್ನನ್ನು ಕರೆದ ಭವ್ಯಾ, ಪುಷ್ಪಲತಾ ಕೊರಳಲ್ಲಿರುವ ಮಾಂಗಲ್ಯ ಸರ ದೋಚುವಂತೆ ಹೇಳಿದ್ದಳು. ಮಗಳ ಪ್ಲಾನ್ಗೆ ಸಾಥ್ ಕೊಟ್ಟ ವಿಜಯಲಕ್ಷ್ಮಿ ತನ್ನ ಗಂಡ ನರಸಿಂಹಮೂರ್ತಿ ಹಾಗೂ ಮಗ ಭರತ್ನನ್ನು ಕರೆದುಕೊಂಡು ತಮಿಳುನಾಡಿನ ದೇವಸ್ಥಾನಕ್ಕೆ ಹೋಗಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.
ಪುಷ್ಪಲತಾ ಹಾಗೂ ಆಕೆಯ ಪತಿ ಭರತ್ ಬೇರೆ ಮನೆಯಲ್ಲಿ ವಾಸವಿದ್ದರು. ಪತಿ ಕುಟುಂಬದ ಜತೆ ದೇವಾಲಯಕ್ಕೆ ಹೋಗಿದ್ದ ಕಾರಣ ಆ ದಿನ ಅತ್ತೆಯ ಮನೆಗೆ ಬಂದು ಮಲಗಿದ್ದಳು. ಮೇ 28ರಂದು ರಾತ್ರಿ ಮನೆಗೆ ಬಂದ ಲೋಹಿತ್ ಮಲಗಿದ್ದ ಪುಷ್ಪಲತಾಳನ್ನು ತಲೆ ದಿಂಬಿನಿಂದ ಉಸಿರುಗಟ್ಟಿಸಿ ಸಾಯಿಸಿದ್ದಾನೆ. ಬಳಿಕ ಚಾಕುವಿನಿಂದ ಇರಿದು ಆಕೆಯ ಕೊರಳಲ್ಲಿದ್ದ ಮಾಂಗಲ್ಯ ಸರ, ಕಿವಿಯೋಲೆ ಕಿತ್ತುಕೊಂಡು ಹೋಗಿದ್ದ. ಇತ್ತ ಭವ್ಯಾ ಬಟ್ಟೆ ಹರಿದುಕೊಂಡು ಮೂರ್ಛೆ ಹೋದಂತೆ ನಾಟಕವಾಡಿದ್ದಳು. ಮನೆಯಲ್ಲೇ ಇದ್ದ ಅಜ್ಜಿ ನಾಗಮ್ಮ ಕಿರುಚಿಕೊಂಡು ಮನೆಯ ಹೊರಗೆ ಬಂದು ಮನೆಗೆ ಕಳ್ಳರು ಬಂದಿದ್ದಾರೆ ಎಂದು ಸ್ಥಳೀಯರನ್ನು ನಂಬಿಸಿದ್ದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.
ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ಭವ್ಯಾ, ಲೋಹಿತ್ ಕುಮಾರ್‌ನನ್ನು ಬಂಧಿಸಿರುವ ಪೊಲೀಸರು ವಿಚಾರಣೆ ಮುಂದುವರೆಸಿದ್ದಾರೆ.

