ಮಹಾರಾಷ್ಟ್ರದ ಉಪಮುಖ್ಯಮಂತ್ರಿ, ಎನ್‌ಸಿಪಿ ಮುಖ್ಯಸ್ಥ ಅಜಿತ್ ಪವಾರ್ ನಿಧನದ ಕಾರಣ ಬಾರಾಮತಿ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಎದುರಾಗಿದೆ. ಏಪ್ರಿಲ್ 23ರಂದು ಮತದಾನ ನಡೆಯಲಿದ್ದು, ಮೇ 4ರಂದು ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟವಾಗಲಿದೆ.
ಬಾರಾಮತಿ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಅಜಿತ್ ಪವಾರ್ ಪತ್ನಿ, ಮಹಾರಾಷ್ಟ್ರದ ಡಿಸಿಎಂ ಸುನೇತ್ರಾ ಪವಾರ್ ಅವಿರೋಧವಾಗಿ ಆಯ್ಕೆಯಾಗುವ ಸಾಧ್ಯತೆ ಇದೆ. ಈ ಕ್ಷೇತ್ರವನ್ನು ಅಜಿತ್ ಪವಾರ್ ಭದ್ರಕೋಟೆ ಎಂದೇ ಕರೆಯಲಾಗುತ್ತದೆ.
ಅಜಿತ್ ಪವಾರ್ ಬಾರಾಮತಿ ವಿಧಾನಸಭಾ ಕ್ಷೇತ್ರದಲ್ಲಿ 8 ಬಾರಿ ಗೆಲುವು ಸಾಧಿಸಿದ್ದರು. ಜನವರಿ 28ರಂದು ವಿಮಾನ ಅಪಘಾತದಲ್ಲಿ ಅವರು ಮೃತಪಟ್ಟ ಕಾರಣ ಈಗ ಉಪ ಚುನಾವಣೆ ಎದುರಾಗಿದೆ.
ಎನ್‌ಸಿಪಿ (ಶರದ್ ಪವಾರ್ ಬಣ)ದ ನಾಯಕ ರೋಹಿತ್ ಪವಾರ್ ಮಾತನಾಡಿ, “ಉಪ ಚುನಾವಣೆಯಲ್ಲಿ ಸುನೇತ್ರಾ ಪವಾರ್ ಅವರು ಅವಿರೋಧವಾಗಿ ಆಯ್ಕೆಯಾಗಲಿ ಎಂದು ಎಲ್ಲಾ ರಾಜಕೀಯ ಪಕ್ಷಗಳಲ್ಲಿ ಮನವಿ ಮಾಡುತ್ತೇನೆ” ಎಂದು ಹೇಳಿದ್ದಾರೆ.
“ಎನ್‌ಸಿಪಿ (ಶರದ್ ಪವಾರ್ ಬಣ) ಉಪ ಚುನಾವಣೆಗೆ ಅಭ್ಯರ್ಥಿಯನ್ನು ಕಣಕ್ಕಿಳಿಸುವುದಿಲ್ಲ. ಯಾವ ಪಕ್ಷದ ಜೊತೆ ಮಾತುಕತೆ ನಡೆಸದೇ ಈ ಹೇಳಿಕೆಯನ್ನು ನೀಡುವುದಕ್ಕೆ ಕ್ಷಮೆ ಕೇಳುತ್ತೇನೆ. ಆದರೆ ಸುನೇತ್ರಾ ಪವಾರ್ ಅವಿರೋಧವಾಗಿ ಆಯ್ಕೆಯಾಗಬೇಕು ಎಂಬುದು ಎಲ್ಲರ ಆಕಾಂಕ್ಷೆಯಾಗಿದೆ” ಎಂದರು.
ಅಜಿತ್ ಪವಾರ್ 1991, 1995, 1999, 2004, 2009, 2014, 2019 ಮತ್ತು 2024ರಲ್ಲಿ ಬಾರಾಮತಿ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದರು. 2024ರ ಚುನಾವಣೆ ಬಳಿಕ ಅವರು ಸಿಎಂ ದೇವೇಂದ್ರ ಫಡ್ನವೀಸ್ ಸಂಪುಟದಲ್ಲಿ ಉಪಮುಖ್ಯಮಂತ್ರಿಯಾಗಿದ್ದರು.
ಬಾರಾಮತಿ ಉಪ ಚುನಾವಣೆಗೆ ಎನ್‌ಸಿಪಿ (ಶರದ್ ಪವಾರ್ ಬಣ) ಅಭ್ಯರ್ಥಿ ಕಣಕ್ಕಿಳಿಸುವುದಿಲ್ಲ. ಬಿಜೆಪಿ, ಶಿವಸೇನೆ (ಏಕನಾಥ್ ಶಿಂಧೆ ಬಣ), ಎನ್‌ಸಿಪಿ (ಅಜಿತ್ ಪವಾರ್ ಬಣ) ಒಂದೇ ಮೈತ್ರಿಕೂಟವಾದ ಕಾರಣ ಸುನೇತ್ರಾ ಪವಾರ್ ಅವರೇ ಮೈತ್ರಿ ಅಭ್ಯರ್ಥಿ.
ಇನ್ನು ಉದ್ಭವ್ ಠಾಕ್ರೆ, ಕಾಂಗ್ರೆಸ್ ಉಪ ಚುನಾವಣೆಗೆ ಅಭ್ಯರ್ಥಿ ಕಣಕ್ಕಿಳಿಸಲಿವೆಯೇ? ಅಥವ ತಟಸ್ಥ ನಿಲುವು ತಳೆಯುವ ಮೂಲಕ ಸುನೇತ್ರಾ ಪವಾರ್ ಬೆಂಬಲಿಸಲಿದೆಯೇ? ಎಂದು ಕಾದು ನೋಡಬೇಕಿದೆ.

