ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ, ಬಾಲಿವುಡ್‌ನ ಸಾರ್ವಕಾಲಿಕ ಬ್ಲಾಕ್‌ಬಸ್ಟರ್ ಸಿನಿಮಾ ದೇವದಾಸ್ ಚಿತ್ರದ ಡೋಲಾ ರೇ ಡೋಲಾ ಹಾಡನ್ನು ಸಿನೆಮಾ ಪ್ರೇಕ್ಷಕರು ಅಷ್ಟು ಸುಲಭವಾಗಿ ಮರೆಯಲು ಸಾಧ್ಯವಿಲ್ಲ. ಮಾಧುರಿ ದೀಕ್ಷಿತ್ ಮತ್ತು ಐಶ್ವರ್ಯಾ ರೈ ಜಂಟಿ ನೃತ್ಯದ ಸೌಂದರ್ಯ ಇಂದಿಗೂ ಹಸಿರಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಈ ಹಾಡಿನ ಚಿತ್ರೀಕರಣದ ಸಮಯದ ಕುರಿತು ದೊಡ್ಡ ವದಂತಿಯೊಂದು ಸೋಷಿಯಲ್ ಮೀಡಿಯಾದಲ್ಲಿ ಭಾರಿ ಸೌಂಡ್ ಮಾಡುತ್ತಿತ್ತು. ಇದೀಗ ಸ್ವತಃ ಮಾಧುರಿ ದೀಕ್ಷಿತ್ ಅವರೇ ಈ ಬಗ್ಗೆ ಮೌನ ಮುರಿದಿದ್ದು, ಗಣಿತದ ಲೆಕ್ಕಾಚಾರದ ಮೂಲಕವೇ ವದಂತಿಗಳಿಗೆ ಪೂರ್ಣವಿರಾಮ ಇಟ್ಟಿದ್ದಾರೆ.
ವದಂತಿ ಶುರುವಾಗಿದ್ದು ಎಲ್ಲಿಂದ?
ದಿವಂಗತ ಖ್ಯಾತ ನೃತ್ಯ ಸಂಯೋಜಕಿ ಸರೋಜ್ ಖಾನ್ ಅವರ ಸಹಾಯಕಿಯಾಗಿದ್ದ ರುಬೀನಾ ಖಾನ್ ಅವರು ಇತ್ತೀಚೆಗೆ ಯೂಟ್ಯೂಬ್ ಚಾನೆಲ್ ಒಂದರ ಪಾಡ್‌ಕಾಸ್ಟ್‌ನಲ್ಲಿ ಮಾತನಾಡುತ್ತಾ ಒಂದು ವಿಷಯ ಹಂಚಿಕೊಂಡಿದ್ದರು. ಡೋಲಾ ರೇ ಡೋಲಾ ಹಾಡಿನ ಚಿತ್ರೀಕರಣದ ಸಮಯದಲ್ಲಿ ಮಾಧುರಿ ದೀಕ್ಷಿತ್ ಅವರು ನಾಲ್ಕು ತಿಂಗಳ ಗರ್ಭಿಣಿಯಾಗಿದ್ದರು. ಹಾಡಿನಲ್ಲಿ ತಿರುಗಿ ಕೆಳಗೆ ಕುಳಿತುಕೊಳ್ಳುವ ಒಂದು ಕಷ್ಟದ ಸ್ಟೆಪ್ ಇತ್ತು. ಮಾಧುರಿ ಅವರಿಗೆ ತಲೆಸುತ್ತು ಮತ್ತು ಜ್ವರ ಇದ್ದ ಕಾರಣ, ಆ ಒಂದು ಶಾಟ್‌ಗಾಗಿ ಬೆಳಿಗ್ಗೆ 9 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಸತತವಾಗಿ ಶೂಟಿಂಗ್ ಮಾಡಲಾಗಿತ್ತು ಎಂದು ರುಬೀನಾ ಹೇಳಿದ್ದರು. ಈ ಹೇಳಿಕೆ ಬಾಲಿವುಡ್ ಅಂಗಳದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿತ್ತು.
ಸ್ವಲ್ಪ ಲೆಕ್ಕ ಹಾಕಿ ನೋಡಿ ಎಂದ ಮಾಧುರಿ ದೀಕ್ಷಿತ್
ಈ ವದಂತಿಯ ಕುರಿತು ಮಾಧ್ಯಮವೊಂದರ ಸಂವಾದದಲ್ಲಿ ನೇರವಾಗಿಯೇ ಉತ್ತರಿಸಿರುವ ಮಾಧುರಿ ದೀಕ್ಷಿತ್, ಆ ಸಮಯದಲ್ಲಿ ತಾನು ಗರ್ಭಿಣಿಯಾಗಿರಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಅಷ್ಟೇ ಅಲ್ಲದೆ, ವದಂತಿ ಹರಡುವವರಿಗೆ ನಗುತ್ತಲೇ ಗಣಿತದ ಲೆಕ್ಕ ಕಲಿಸಿದ್ದಾರೆ.
ನನ್ನ ಹಿರಿಯ ಮಗ ಆರಿನ್ ಜನಿಸಿದ್ದು 2003 ರ ಮಾರ್ಚ್ 17 ರಂದು. ಆದರೆ ದೇವದಾಸ್ ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದು 2002 ರ ಜುಲೈ 12 ರಂದು. ಅದಕ್ಕೂ ಮುನ್ನ ಮೇ ತಿಂಗಳಲ್ಲೇ ಕ್ಯಾನೆಸ್ ಚಲನಚಿತ್ರೋತ್ಸವದಲ್ಲಿ ಸಿನಿಮಾ ಪ್ರದರ್ಶನ ಕಂಡಿತ್ತು. ಹಾಗಾಗಿ ನೀವೇ ಸ್ವಲ್ಪ ಲೆಕ್ಕ ಹಾಕಿ ನೋಡಿ ಎಂದು ಮಾಧುರಿ ಹೇಳಿದ್ದಾರೆ. ಸಿನಿಮಾ ಬಿಡುಗಡೆಯಾದ ಹಲವು ತಿಂಗಳುಗಳ ನಂತರ ಮಗನ ಜನನವಾಗಿರುವುದರಿಂದ, ಶೂಟಿಂಗ್ ವೇಳೆ ಗರ್ಭಿಣಿಯಾಗಿದ್ದರು ಎಂಬ ಮಾತು ತಾರ್ಕಿಕವಾಗಿ ಸುಳ್ಳಾಗುತ್ತದೆ.
ಆಯಾಸಕ್ಕೆ ಅಸಲಿ ಕಾರಣ ಬಿಚ್ಚಿಟ್ಟ ನಟಿ
ಚಿತ್ರೀಕರಣದ ಸಮಯದಲ್ಲಿ ತಮಗೆ ಆರೋಗ್ಯ ಕೈಕೊಟ್ಟಿತ್ತು ಎನ್ನುವುದನ್ನು ಮಾಧುರಿ ಒಪ್ಪಿಕೊಂಡಿದ್ದಾರೆ. ಆದರೆ ಅದಕ್ಕೆ ಕಾರಣ ಗರ್ಭಧಾರಣೆಯಲ್ಲ, ಬದಲಿಗೆ ಬಿಡುವಿಲ್ಲದ ಪ್ರಯಾಣ ಮತ್ತು ರಾತ್ರಿ ಪಾಳಿಯ ಶೂಟಿಂಗ್. ಆ ದಿನಗಳಲ್ಲಿ ನಾನು ಮುಂಬೈ ಮತ್ತು ಅಮೆರಿಕದ ಡೆನ್ವರ್ ನಡುವೆ ಸತತವಾಗಿ ಓಡಾಡುತ್ತಿದ್ದೆ. ಅದೂ ಅಲ್ಲದೆ ಡೋಲಾ ರೇ ಡೋಲಾ ಹಾಡಿನ ಬಹುತೇಕ ಚಿತ್ರೀಕರಣಗಳು ರಾತ್ರಿಯ ವೇಳೆಯಲ್ಲೇ ನಡೆದಿದ್ದವು. ನಿರಂತರ ನೈಟ್ ಶೂಟ್ಸ್ ಮತ್ತು ಪ್ರಯಾಣದಿಂದಾಗಿ ದೇಹ ದಣಿದು ಜ್ವರ ಬಂದಿತ್ತೇ ವಿನಃ ಬೇರೇನೂ ಇರಲಿಲ್ಲ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.
1999 ರಲ್ಲಿ ಡಾಕ್ಟರ್ ಶ್ರೀರಾಮ್ ನೇನೇ ಅವರನ್ನು ಮದುವೆಯಾದ ನಂತರ ಮಾಧುರಿ ಅಮೆರಿಕಾದಲ್ಲಿ ನೆಲೆಸಿದ್ದರು. ಮದುವೆಯ ನಂತರ ಅವರು ಸಿನಿಮಾಗಳಿಗಾಗಿ ಭಾರತ ಮತ್ತು ಅಮೆರಿಕ ನಡುವೆ ಸತತವಾಗಿ ಓಡಾಡುತ್ತಿದ್ದರು. ಅವರು ಮಕ್ಕಳಾದ ಆರಿನ್ ಮತ್ತು ರೇಯಾನ್ ಅವರಿಗೆ ಜನ್ಮ ನೀಡುವ ಮುನ್ನ ನಟಿಸಿದ ಕೊನೆಯ ದೊಡ್ಡ ಸಿನಿಮಾ ದೇವದಾಸ್ ಆಗಿತ್ತು.
ಶರತ್ ಚಂದ್ರ ಚಟ್ಟೋಪಾಧ್ಯಾಯ ಅವರ ಮೂಲ ಕಾದಂಬರಿಯಲ್ಲಿ ಚಂದ್ರಮುಖಿ ಮತ್ತು ಪಾರೋ ಪಾತ್ರಗಳು ಎಲ್ಲೂ ಮುಖಾಮುಖಿಯಾಗುವುದಿಲ್ಲ. ಆದರೆ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಅವರು ಕಲಾತ್ಮಕ ಸ್ವಾತಂತ್ರ್ಯದೊಂದಿಗೆ ಇಬ್ಬರು ಸ್ಟಾರ್ ನಟಿಯರನ್ನು ಒಟ್ಟಿಗೆ ತಂದು ಈ ಐಕಾನಿಕ್ ಹಾಡನ್ನು ಸೃಷ್ಟಿಸಿದ್ದರು. ಸದ್ಯ ಮಾಧುರಿ ನೀಡಿರುವ ಈ ಕ್ಲಾರಿಫಿಕೇಶನ್ ಮೂಲಕ ದೇವದಾಸ್ ಸಿನಿಮಾದ ಇತಿಹಾಸದ ಕುರಿತು ಇದ್ದ ದೊಡ್ಡ ಗೊಂದಲವೊಂದು ನಿವಾರಣೆಯಾದಂತಾಗಿದೆ.

