ಮಂಗಳೂರು-ಮಡಗಾಂವ್ (ಗೋವಾ) ನಡುವೆ ವಂದೇ ಭಾರತ್ ರೈಲು ಸೇವೆ ಇದೆ. 2023ರ ಡಿಸೆಂಬರ್‌ನಲ್ಲಿ ಈ ರೈಲು ಸೇವೆ ಆರಂಭವಾಗಿದೆ. ರಾಜಧಾನಿ ಬೆಂಗಳೂರು ಮತ್ತು ಕರಾವಳಿ ನಡುವೆ ವಂದೇ ಭಾರತ್ ರೈಲು ಬೇಕು ಎಂಬ ಬೇಡಿಕೆ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಕೇಂದ್ರ ರೈಲ್ವೆ ಸಚಿವರ ಮುಂದೆ ಹೊಸ ಬೇಡಿಕೆ ಇಡಲಾಗಿದೆ.
ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ, ಸಂಸದರಾದ ಕೋಟ ಶ್ರೀನಿವಾಸ ಪೂಜಾರಿ, ವಿಶ್ವೇಶ್ವರ ಹೆಗಡೆ ಕಾಗೇರಿ, ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಮುಂತಾದವರು ಬೆಂಗಳೂರು ಕರಾವಳಿ ವಂದೇ ಭಾರತ್ ರೈಲಿಗಾಗಿ ಬೇಡಿಕೆಗೆ ಧ್ವನಿಗೂಡಿಸಿದ್ದಾರೆ.
ಉದ್ಯೋಗ, ವಾಣಿಜ್ಯ, ಆರೋಗ್ಯ, ಶಿಕ್ಷಣ ಕ್ಷೇತ್ರದಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಬಹಳ ಪ್ರಸಿದ್ಧಿಯನ್ನು ಪಡೆದಿದೆ. ಪ್ರವಾಸಿಗರು, ದೇವಾಲಯಕ್ಕೆ ತೆರಳುವ ಭಕ್ತರು ಸಹ ಜಿಲ್ಲೆಗೆ ಭೇಟಿ ನೀಡುತ್ತಾರೆ. ಆದ್ದರಿಂದ ಬೆಂಗಳೂರು-ಕರಾವಳಿ ನಡುವೆ ವಂದೇ ಭಾರತ್ ರೈಲು ಬೇಕು ಎನ್ನುವ ಕೂಗು ಜೋರಾಗಿದೆ.
ಬೆಂಗಳೂರು-ಮಂಗಳೂರು ನಡುವಿನ ಪ್ರಯಾಣದ ಅವಧಿ ಬಗ್ಗೆ, ರೈಲುಗಳ ಸಂಖ್ಯೆ ಬಗ್ಗೆ ಜನರಿಗೆ ಅಸಮಾಧಾನವಿದೆ. ಆದ್ದರಿಂದ ಕಡಿಮೆ ಅವಧಿಯಲ್ಲಿ ಸಂಚಾರ ನಡೆಸುವ ವಂದೇ ಭಾರತ್ ರೈಲು ಸಂಚಾರ ಆರಂಭಿಸಬೇಕು ಎಂದು ಒತ್ತಾಯ ಮಾಡಲಾಗುತ್ತಿದೆ.
ಮಂಗಳೂರಿನಿಂದ ಬೆಳಗ್ಗೆ 4 ಅಥವ 10 ಗಂಟೆಗೆ ಹೊರಡುವ ಮಾದರಿಯಲ್ಲಿ ಬೆಂಗಳೂರಿಗೆ ವಂದೇ ಭಾರತ್ ರೈಲು ಸಂಚಾರ ಆರಂಭಿಸಬೇಕು ಎಂದು ಬೇಡಿಕೆ ಇಡಲಾಗಿದೆ. ಈಗಾಗಲೇ ಮಂಗಳೂರು ನಗರಕ್ಕೆ ಎರಡು ವಂದೇ ಭಾರತ್ ರೈಲು ಸೇವೆ ಇದೆ. ಆದರೆ ಬೆಂಗಳೂರು-ಮಂಗಳೂರು ನಡುವೆ ಈ ಮಾದರಿ ರೈಲುಗಳಿಲ್ಲ.
ಬೆಂಗಳೂರು ನಗರಿಂದ ಮಂಗಳೂರು, ಉಡುಪಿ, ಕಾರವಾರ ಮಾರ್ಗವಾಗಿ ಗೋವಾಕ್ಕೆ ಸಂಚಾರ ನಡೆಸುವ ವಂದೇ ಭಾರತ್ ರೈಲು ಆರಂಭಿಸಬೇಕು ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ಗೆ ಪತ್ರವನ್ನು ಬರೆಯಲಾಗಿದೆ. ಯಾವಾಗ ಈ ಮಾದರಿ ರೈಲು ಸೇವೆಗೆ ಒಪ್ಪಿಗೆ ಸಿಗಲಿದೆ? ಎಂದು ಕಾದು ನೋಡಬೇಕಿದೆ.
ಸಂಸದರ ಒತ್ತಾಯ: ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ರೈಲ್ವೆ ಸಚಿವರಿಗೆ ಡಿಸೆಂಬರ್ 24ರಂದು ಪತ್ರವೊಂದನ್ನು ಬರೆದಿದ್ದಾರೆ. ಅವರು ಮಂಗಳೂರು-ಮಡಗಾಂವ್ ನಡುವಿನ (20646/20645) ವಂದೇ ಭಾರತ್ ರೈಲನ್ನು ಬೆಂಗಳೂರು ನಗರಕ್ಕೆ ವಿಸ್ತರಣೆ ಮಾಡಬೇಕು ಎಂದು ಮನವಿ ಮಾಡಿದ್ದಾರೆ.
ಬೆಂಗಳೂರು-ಮಡಗಾಂವ್ ವಂದೇ ಭಾರತ್ ರೈಲು ವಯಾ ಉಡುಪಿ, ಕಾರವಾರ ಐಟಿ ಸಿಟಿ ರಾಜಧಾನಿ ಮತ್ತು ಕರಾವಳಿ ಸಂಪರ್ಕವನ್ನು ಉತ್ತಮವಾಗಿಸುತ್ತದೆ. ಗೋವಾ-ಬೆಂಗಳೂರು ಪ್ರವಾಸಿಗರಿಗೂ ಸಹಕಾರಿಯಾಗಲಿದೆ ಎಂದು ಪತ್ರದಲ್ಲಿ ವಿವರಿಸಿದ್ದಾರೆ.
ಕಾರವಾರದ ಸೀಬರ್ಡ್ ನೌಕಾನೆಲೆ, ಕೈಗಾ ವಿದ್ಯುತ್ ಸ್ಥಾವರ, ಕಾರವಾರ ಬಂದರು, ಗೋಕರ್ಣದ ಭಕ್ತರು, ಉಡುಪಿಯ ಕೃಷ್ಣ ದೇವಾಲಯದ ಭಕ್ತರು, ಸುರತ್ಕಲ್‌ನ ವಿದ್ಯಾರ್ಥಿಗಳಿಗೆ ಈ ರೈಲು ಕರಾವಳಿ-ಬೆಂಗಳೂರು ಸಂಪರ್ಕಕ್ಕೆ ಅನುಕೂಲ ಮಾಡಿಕೊಡಲಿದೆ.
ಪಶ್ಚಿಮ ಘಟ್ಟ ಮಾರ್ಗದಲ್ಲಿ ರೈಲು ಮಾರ್ಗದ ವಿದ್ಯುದೀಕರಣ ಪೂರ್ಣಗೊಂಡ ಹಿನ್ನಲೆಯಲ್ಲಿ ಬೆಂಗಳೂರು-ಕರಾವಳಿ ಮಾರ್ಗದಲ್ಲಿ ಹೈಸ್ಪೀಡ್ ರೈಲು ಓಡಿಸಬೇಕು ಎಂದು ತೇಜಸ್ವಿ ಸೂರ್ಯ ಬೇಡಿಕೆ ಇಟ್ಟಿದ್ದಾರೆ.
ಕೇರಳದ ಬಿಜೆಪಿ ನಾಯಕರು ಹಲವು ದಿನಗಳಿಂದ ಮಂಗಳೂರು-ಮಡಗಾಂವ್ ವಂದೇ ಭಾರತ್ ರೈಲನ್ನು ಕೇರಳ ತನಕ ವಿಸ್ತರಣೆ ಮಾಡಬೇಕು ಎಂದು ಒತ್ತಾಯಿಸುತ್ತಿದ್ದಾರೆ. ಈಗ ಈ ರೈಲನ್ನು ಬೆಂಗಳೂರು ತನಕ ವಿಸ್ತರಣೆ ಮಾಡಬೇಕು ಎಂಬ ಬೇಡಿಕೆ ಬಂದಿದೆ.

