ನಿನ್ನೆ ( ಡಿಸೆಂಬರ್ 25 ) ಕ್ರಿಸ್‌ಮಸ್ ರಜೆಯನ್ನು ಗುರಿಯನ್ನಾಗಿಸಿಕೊಂಡು ಕನ್ನಡದಲ್ಲಿ ಎರಡು ಸ್ಟಾರ್ ನಟರ ಚಿತ್ರಗಳು ತೆರೆಗೆ ಬಂದಿವೆ. ಒಂದೆಡೆ ಕಿಚ್ಚ ಸುದೀಪ್ ನಟನೆಯ ಮಾರ್ಕ್ ಬಿಡುಗಡೆಯಾಗಿದ್ದರೆ, ಮತ್ತೊಂದೆಡೆ ಶಿವರಾಜ್‌ಕುಮಾರ್, ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ನಟನೆಯ 45 ತೆರೆ ಕಂಡಿದೆ.
ಇನ್ನು ಎರಡೂ ಚಿತ್ರಗಳು ಒಂದೇ ದಿನ ಬಿಡುಗಡೆಯಾದ ಕಾರಣ ಎರಡೂ ಚಿತ್ರಗಳಿಗೂ ಬಾಕ್ಸ್ ಆಫೀಸ್‌ನಲ್ಲಿ ದೊಡ್ಡ ಓಪನಿಂಗ್ ಪಡೆದುಕೊಳ್ಳಲು ಸಾಧ್ಯವಾಗಿಲ್ಲ. ವಿಮರ್ಶೆಯ ವಿಚಾರಕ್ಕೆ ಬಂದರೆ ಎರಡೂ ಚಿತ್ರಗಳಿಗೂ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
45 ಗರುಣ ಪುರಾಣ ಆಧಾರಿತ ಸಿನಿಮಾವಾಗಿದ್ದು, ಮಾನವ ಸತ್ತ ಬಳಿಕ ಏನಾಗಲಿದ್ದಾನೆ ಎಂಬುದನ್ನು ತೆರೆ ಮೇಲೆ ಹೇಳಲಾಗಿದೆ. ಯಮನಾಗಿ ಉಪೇಂದ್ರ ಕಾಣಿಸಿಕೊಂಡರೆ, ಶಿವರಾಜ್‌ಕುಮಾರ್ ಶಿವನಾಗಿ ನಟಿಸಿದ್ದಾರೆ. ರಾಜ್ ಬಿ ಶೆಟ್ಟಿ ಓರ್ವ ಸಾಮಾನ್ಯ ವ್ಯಕ್ತಿಯಾಗಿ ಕಾಣಿಸಿಕೊಂಡಿದ್ದಾರೆ.
ಚಿತ್ರ ಮೊದಲಾರ್ಧದಲ್ಲಿ ಹುಟ್ಟುಹಾಕುವ ಕುತೂಹಲಕ್ಕೆ ತಕ್ಕ ಬರವಣಿಗೆ ದ್ವಿತೀಯಾರ್ಧದಲ್ಲಿ ಇಲ್ಲ ಎಂದೇ ಹೇಳಬಹುದಾಗಿದ್ದು, ಚಿತ್ರ ಅಭಿಮಾನಿಗಳಿಗೆ ಇಷ್ಟವಾಗಲಿದೆ ಹಾಗೂ ಸಾಮಾನ್ಯ ಸಿನಿ ರಸಿಕನಿಗೆ ಪರವಾಗಿಲ್ಲ ಎಂಬಂತಿದೆ.
ಇನ್ನು ಬಾಕ್ಸ್ ಆಫೀಸ್ ವಿಚಾರಕ್ಕೆ ಬಂದರೆ ಮೊದಲೇ ಹೇಳಿದಂತೆ ಎರಡು ಚಿತ್ರಗಳು ಒಟ್ಟಿಗೆ ಬಿಡುಗಡೆಯಾದ ಕಾರಣ ಮೊದಲ ದಿನ 45 ದೊಡ್ಡ ಮಟ್ಟದ ಗಳಿಕೆಯನ್ನೇನು ಮಾಡಿಲ್ಲ. ಚಿತ್ರತಂಡ ಮೊದಲ ದಿನದ ಗಳಿಕೆಯನ್ನು ಅಧಿಕೃತವಾಗಿ ಮಾಡದೇ ಇದ್ದರೂ ಜನಪ್ರಿಯ ಬಾಕ್ಸ್ ಆಫೀಸ್ ಟ್ರ್ಯಾಕಿಂಗ್ ವೆಬ್‌ಸೈಟ್ ಸ್ಯಾಕ್‌ನಿಲ್ಕ್ ಕಲೆಕ್ಷನ್ ವರದಿಯನ್ನು ಪ್ರಕಟಿಸಿದೆ.
ಈ ವರದಿಯ ಪ್ರಕಾರ 45 ಮೊದಲ ದಿನ 4.25 ಕೋಟಿ ನೆಟ್ ಕಲೆಕ್ಷನ್ ಮಾಡಿದೆ. ಇದು ಮಾರ್ಕ್ ಗಳಿಕೆಗೆ ಹೋಲಿಸಿದರೆ ಕಡಿಮೆ. ಮಾರ್ಕ್ ಮೊದಲ ದಿನ ಇದೇ ಸ್ಯಾಕ್‌ನಿಲ್ಕ್ ವರದಿಯ ಪ್ರಕಾರ 6.28 ಕೋಟಿ ರೂ ನೆಟ್ ಗಳಿಕೆ ಮಾಡಿದೆ. ಈ ಮೂಲಕ ಮೊದಲ ದಿನದ ಗಳಿಕೆಯಲ್ಲಿ ಸುದೀಪ್ ನಟನೆಯ ಮಾರ್ಕ್ ಚಿತ್ರವನ್ನು ಮಲ್ಟಿಸ್ಟಾರರ್ 45 ಹಿಂದಿಕ್ಕುವಲ್ಲಿ ವಿಫಲವಾಗಿದೆ.

