ಮಂಗಳೂರು: ಈ ವರ್ಷದ ಮೊದಲ ಚಂದ್ರ ಗ್ರಹಣ ಮಾರ್ಚ್ 3 ರಂದು ಸಂಭವಿಸಲಿದೆ. ಅಂದು ರಕ್ತ ಚಂದ್ರ ಗ್ರಹಣ ಹಿನ್ನೆಲೆಯಲ್ಲಿ ರಾಅಜ್ಯದ ಹಲವು ದೇವಾಲಯಗಳ ದರ್ಶನ ಸಮಯ ಬದಲಾವಣೆ ಮಾಡಲಾಗಿದೆ. ಅದೇ ರೀತಿ ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿ ದೇವಸ್ಥಾನದಲ್ಲಿ ಭಕ್ತಾದಿಗಳ ದೇವರ ದರ್ಶನ ಸಮಯವನ್ನು ತಾತ್ಕಾಲಿಕವಾಗಿ ಬದಲಾವಣೆ ಮಾಡಲಾಗಿದೆ.
ದೇವಸ್ಥಾನದ ಆಡಳಿತ ಮಂಡಳಿಯು ಈ ಕುರಿತು ಅಧಿಕೃತ ಪ್ರಕಟಣೆ ಹೊರಡಿಸಿದ್ದು, ಭಕ್ತರಿಗೆ ಅಗತ್ಯ ಸೂಚನೆಗಳನ್ನು ನೀಡಿದೆ. ಮಾರ್ಚ್ 3 ರಂದು ಮಧ್ಯಾಹ್ನ 1:30ರವರೆಗೆ ಮಾತ್ರ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶವಿರುತ್ತದೆ. ರಕ್ತ ಚಂದ್ರ ಗ್ರಹಣದ ಅವಧಿ ಮುಗಿದ ನಂತರ, ಅಂದರೆ ರಾತ್ರಿ 7:30ರಿಂದ ಪುನಃ ದೇವರ ದರ್ಶನವನ್ನು ಪ್ರಾರಂಭಿಸಲಾಗುವುದು.
ಬಹುತೇಕ ದೇವಸ್ಥಾನಗಳಲ್ಲಿ ಗ್ರಹಣದ ಸಂದರ್ಭದಲ್ಲಿ ಭಕ್ತರಿಗೆ ದರ್ಶನಕ್ಕೆ ಅವಕಾಶ ಇರುವುದಿಲ್ಲ ಎಂಬ ನಿಯಮಕ್ಕೆ ಅನುಗುಣವಾಗಿ, ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿಯೂ ಭಕ್ತಾದಿಗಳ ಅನುಕೂಲ ಮತ್ತು ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಈ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಭಕ್ತಾದಿಗಳು ಈ ಬದಲಾದ ದರ್ಶನ ಸಮಯಗಳನ್ನು ಗಮನದಲ್ಲಿಟ್ಟುಕೊಂಡು ಶ್ರೀ ಮಂಜುನಾಥ ಸ್ವಾಮಿ ದೇವರ ದರ್ಶನಕ್ಕೆ ಆಗಮಿಸುವಂತೆ ಧರ್ಮಸ್ಥಳ ದೇವಸ್ಥಾನ ಆಡಳಿತ ಮಂಡಳಿ ತಿಳಿಸಿದೆ.

