ಈ ವರ್ಷದ ಮೊದಲ ಪೂರ್ಣ ಚಂದ್ರ ಗ್ರಹಣ ಮಾರ್ಚ್ 3ರಂದು ಸಂಭವಿಸಲಿದೆ. ಆಗಸದಲ್ಲಿ ನಡೆಯಲಿರುವ ಅಪರೂಪದ ವಿದ್ಯಾಮಾನ ಕಣ್ತುಂಬಿಕೊಳ್ಳಲು ಜನರು ಕಾಯುತ್ತಿದ್ದಾರೆ. ಫಾಲ್ಗುಣ ಪೂರ್ಣಿಮೆಯಂದು ಈ ಗ್ರಹಣ ನಡೆಯಲಿದೆ.
ಮಾರ್ಚ್ 3ರಂದು ಫಾಲ್ಗುಣ ಮಾಸದ ಹುಣ್ಣಿಮೆಯಂದು ಸಂಭವಿಸುವ ಚಂದ್ರ ಗ್ರಹಣದ ಹಿನ್ನಲೆಯಲ್ಲಿ ಧಾರ್ಮಿಕ ಆಚರಣೆಗಳು ಮತ್ತು ಸಂಪ್ರದಾಯಗಳಲ್ಲಿ ಕೆಲವು ಬದಲಾವಣೆ ಮಾಡಲಾಗಿದೆ. ಗ್ರಹಣ ಮಧ್ಯಾಹ್ನ 3:20ಕ್ಕೆ ಆರಂಭವಾಗಿ ಸಂಜೆ 6:47ರವರೆಗೆ ಇರಲಿದೆ.
ಚಂದ್ರ ಗ್ರಹಣದ ಹಿನ್ನಲೆಯಲ್ಲಿ ರಾಜ್ಯದ ಹಲವು ದೇವಾಲಯಗಳಲ್ಲಿ ಮಧ್ಯಾಹ್ನದ ಅನ್ನದಾನ ಸೇವೆ, ದೇವರ ದರ್ಶನವನ್ನು ಸ್ಥಗಿತಗೊಳಿಸಲಾಗಿದೆ. ದೇವಾಲಯಕ್ಕೆ ಭೇಟಿ ನೀಡುವವರು ಈ ಕುರಿತು ಮಾಹಿತಿ ತಿಳಿದು ಭೇಟಿ ನೀಡಬೇಕು ಎಂದು ಮನವಿ ಮಾಡಲಾಗಿದೆ.
ಶ್ರೀ ಹುಲಿಗೆಮ್ಮ ದೇವಿ ದೇವಾಲಯ: ಚಂದ್ರ ಗ್ರಹಣದ ಪ್ರಯುಕ್ತ ಸುಪ್ರಸಿದ್ದ ಧಾರ್ಮಿಕ ಕ್ಷೇತ್ರವಾದ ಕೊಪ್ಪಳ ಜಿಲ್ಲೆಯ ಶ್ರೀ ಕ್ಷೇತ್ರ ಹುಲಿಗಿಯ ಶ್ರೀ ಹುಲಿಗೆಮ್ಮ ದೇವಿ ದೇವಸ್ಥಾನದಲ್ಲಿ ಮಧ್ಯಾಹ್ನ 12 ಗಂಟೆಯೊಳಗೆ ಮಾತ್ರ ಶ್ರೀ ಹುಲಿಗೆಮ್ಮ ದೇವಿಯ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.
ಶ್ರೀ ವಿಶ್ವಾವಸು ನಾಮ ಸಂವತ್ಸರ ಪಾಲ್ಗುಣ ಶುಕ್ಲ ಹುಣ್ಣಿಮೆ ಮಾ. 3ರ ಮಂಗಳವಾರ ಪೂರ್ವ ನಕ್ಷತ್ರ ಸಿಂಹರಾಶಿ ಗ್ರದ್ಯೋದಿತ ಚಂದ್ರ ಗ್ರಹಣ ಇರುವುದರಿಂದ ಅಂದು ಮಧ್ಯಾಹ್ನ 12 ಗಂಟೆವರೆಗೆ ಮಾತ್ರ ಭಕ್ತರಿಗೆ ಶ್ರೀ ಹುಲಿಗೆಮ್ಮ ದೇವಿಯವರ ದರ್ಶನದ ವ್ಯವಸ್ಥೆ ಇರುತ್ತದೆ ಎಂದು ತಿಳಿಸಲಾಗಿದೆ.
ನಂತರ ಮಧ್ಯಾಹ್ನ 12 ಗಂಟೆಯಿಂದ ಸಂಜೆ 7 ಗಂಟೆಯವರೆಗೆ ಗ್ರಹಣ ಆಚರಣೆ ಇರುವುದರಿಂದ ದೇವರ ದರ್ಶನ ಇರುವುದಿಲ್ಲ. ಗ್ರಹಣ ಮೋಕ್ಷವಾದ ಅಂದು ಸಂಜೆ 7 ಗಂಟೆಯ ನಂತರ ದೇವಾಲಯದ ಸಾಂಪ್ರದಾಯಿಕ ಪೂಜಾ ವಿಧಿ ವಿಧಾನಗಳು ನೆರವೇರುತ್ತವೆ ಎಂದು ಶ್ರೀ ಹುಲಿಗೆಮ್ಮ ದೇವಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

