HomeIndiaಲಕ್ನೋ ರೈಲ್ವೆ ಇಲಾಖೆಯಲ್ಲಿ ಮಾನವೀಯತೆ ಮಟಾಶ್: ಶಸ್ತ್ರಚಿಕಿತ್ಸೆಯ ಪುರಾವೆ ಕೇಳಿದ ಅಧಿಕಾರಿಗೆ ಬಟ್ಟೆ ಬಿಚ್ಚಿ ಗಾಯ...

ಲಕ್ನೋ ರೈಲ್ವೆ ಇಲಾಖೆಯಲ್ಲಿ ಮಾನವೀಯತೆ ಮಟಾಶ್: ಶಸ್ತ್ರಚಿಕಿತ್ಸೆಯ ಪುರಾವೆ ಕೇಳಿದ ಅಧಿಕಾರಿಗೆ ಬಟ್ಟೆ ಬಿಚ್ಚಿ ಗಾಯ ತೋರಿಸಿದ ಲೋಕೋ ಪೈಲಟ್

ಭಾರತೀಯ ರೈಲ್ವೆ ಇಲಾಖೆಯ ಲಕ್ನೋ ವಿಭಾಗದಲ್ಲಿ ಮನುಷ್ಯತ್ವವೇ ತಲೆತಗ್ಗಿಸುವಂತಹ ಘಟನೆಯೊಂದು ನಡೆದಿದೆ. ಅನಾರೋಗ್ಯದ ಕಾರಣ ರಜೆ ಕೇಳಲು ಬಂದ ಲೋಕೋ ಪೈಲಟ್ ಒಬ್ಬರಿಗೆ ಹಿರಿಯ ಅಧಿಕಾರಿಯೊಬ್ಬರು ಪುರಾವೆ ಕೇಳಿದ ಹಿನ್ನೆಲೆಯಲ್ಲಿ, ಅಸಹಾಯಕ ಚಾಲಕ ಕಚೇರಿಯಲ್ಲೇ ಬಟ್ಟೆ ಬಿಚ್ಚಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ವರದಿಯಾಗಿದೆ. ಈ ದೃಶ್ಯಗಳು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ರೈಲ್ವೆ ಇಲಾಖೆಯ ಕಾರ್ಯವೈಖರಿಯ ಬಗ್ಗೆ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.

ರಾಜೇಶ್ ಮೀನಾ ಎಂಬ ಲೋಕೋ ಪೈಲಟ್ ಇತ್ತೀಚೆಗೆ ಮೂಲವ್ಯಾಧಿ (ಪೈಲ್ಸ್) ಸಮಸ್ಯೆಯಿಂದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ವೈದ್ಯರ ಸಲಹೆಯಂತೆ ಫೆಬ್ರವರಿ 22 ರಿಂದ 28 ರವರೆಗೆ ಅವರಿಗೆ ರಜೆ ನೀಡಲಾಗಿತ್ತು. ಆದರೆ ಶಸ್ತ್ರಚಿಕಿತ್ಸೆಯ ಗಾಯಗಳು ಇನ್ನು ವಾಸಿಯಾಗದ ಕಾರಣ, ಅವರು ರಜೆಯನ್ನು ವಿಸ್ತರಿಸುವಂತೆ ಕೋರಿ ಹಿರಿಯ ಅಧಿಕಾರಿಗಳನ್ನು ಸಂಪರ್ಕಿಸಿದ್ದರು. ರೈಲ್ವೆ ವೈದ್ಯಕೀಯ ಘಟಕದ ವೈದ್ಯರು ಕೂಡ ಅವರಿಗೆ ಹೆಚ್ಚಿನ ವಿಶ್ರಾಂತಿಯ ಅಗತ್ಯವಿದೆ ಎಂದು ದೃಢಪಡಿಸಿದ್ದರು.

ರಜೆ ವಿಸ್ತರಣೆಗೆ ಅಗತ್ಯವಿರುವ ‘ಸಿಕ್ ಮೆಮೊ’ ಪಡೆಯಲು ರಾಜೇಶ್ ಅವರು ಮುಖ್ಯ ಕ್ರೂ ಕಂಟ್ರೋಲರ್ ರತನ್ ಕುಮಾರ್ ಅವರನ್ನು ಭೇಟಿ ಮಾಡಿದ್ದರು. ಈ ವೇಳೆ ಚಿಕಿತ್ಸೆಯ ದಾಖಲೆಗಳು ಮತ್ತು ಬ್ಯಾಂಡೇಜ್ ತೋರಿಸಿದರೂ ಅಧಿಕಾರಿ ರಜೆ ನೀಡಲು ಒಪ್ಪಲಿಲ್ಲ ಎನ್ನಲಾಗಿದೆ. ಇದರಿಂದ ಮನನೊಂದ ಮತ್ತು ಅಸಹಾಯಕತೆಗೆ ಒಳಗಾದ ಚಾಲಕ, ತಮಗೆ ಆಗಿರುವ ಶಸ್ತ್ರಚಿಕಿತ್ಸೆಯ ಗಾಯಗಳನ್ನು ತೋರಿಸಲು ಕಚೇರಿಯಲ್ಲೇ ಪ್ಯಾಂಟ್ ಬಿಚ್ಚಿದ್ದಾರೆ. ಈ ದೃಶ್ಯವನ್ನು ಸಹೋದ್ಯೋಗಿಗಳು ಮೊಬೈಲ್‌ನಲ್ಲಿ ಸೆರೆಹಿಡಿದಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ರೈಲ್ವೆ ಸಿಬ್ಬಂದಿ ಸಂಘದ (AILRSA) ನಾಯಕರು ಈ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಹಗಲಿರುಳು ರೈಲು ಚಲಾಯಿಸುವ ಸಿಬ್ಬಂದಿಗೆ ಅನಾರೋಗ್ಯದ ಸಮಯದಲ್ಲಿ ಇಂತಹ ಅವಮಾನ ಮಾಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ. ಅಧಿಕಾರಿಗಳ ಈ ವರ್ತನೆಯನ್ನು ‘ಅಮಾನವೀಯ’ ಎಂದು ಕರೆದಿರುವ ಸಂಘಟನೆ, ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದೆ. ಸದ್ಯ ಈ ವಿಚಾರ ಹಿರಿಯ ಅಧಿಕಾರಿಗಳ ಗಮನಕ್ಕೆ ಬಂದ ನಂತರ ರಾಜೇಶ್ ಅವರಿಗೆ ರಜೆ ಮಂಜೂರು ಮಾಡಲಾಗಿದೆ ಎಂದು ತಿಳಿದುಬಂದಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular