ಉತ್ತರ ಪ್ರದೇಶದ ಲಕ್ನೋದ ಚೌಪಟಿಯಾ ಕಾಲೋನಿಯಲ್ಲಿ ನಡೆದ ಆಘಾತಕಾರಿ ಘಟನೆಯ ಸಿಸಿಟಿವಿ ದೃಶ್ಯಾವಳಿ ಈಗ ಇಂಟರ್ನೆಟ್ನಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ವಸತಿ ಪ್ರದೇಶದ ಕಿರಿದಾದ ಗಲ್ಲಿಯೊಂದರಲ್ಲಿ ತನ್ನ ಪಾಡಿಗೆ ತಾನು ಹೋಗುತ್ತಿದ್ದ ಪುಟ್ಟ ಬಾಲಕಿಯ ಮೇಲೆ ಗೂಳಿಯೊಂದು ಭೀಕರವಾಗಿ ದಾಳಿ ಮಾಡಿದ್ದು, ಅಲ್ಲಿನ ನಿವಾಸಿಗಳನ್ನು ಬೆಚ್ಚಿಬೀಳಿಸಿದೆ.
ವೈರಲ್ ಆಗಿರುವ ವಿಡಿಯೋದಲ್ಲಿ, ಗೂಳಿಯು ಆಕ್ರಮಣಕಾರಿಯಾಗಿ ಬಾಲಕಿಯನ್ನು ಅಟ್ಟಿಸಿಕೊಂಡು ಬರುವುದನ್ನು ಕಾಣಬಹುದು. ಭಯದಿಂದ ಬಾಲಕಿ ಸಹಾಯಕ್ಕಾಗಿ ಕಿರುಚುತ್ತಾ ಓಡುತ್ತಿದ್ದರೆ, ಗೂಳಿ ಅವಳನ್ನು ಕೆಡವಿ ಕಾಲಿನಿಂದ ತುಳಿಯಲು ಯತ್ನಿಸಿದೆ. ಕೂಡಲೇ ಎಚ್ಚೆತ್ತ ಏಳೆಂಟು ಸ್ಥಳೀಯ ನಿವಾಸಿಗಳು ಬಾಲಕಿಯ ರಕ್ಷಣೆಗೆ ಧಾವಿಸಿದ್ದಾರೆ. ಗೂಳಿಯನ್ನು ಹೆದರಿಸಲು ಅದರ ಮೇಲೆ ಕಲ್ಲು ತೂರುತ್ತಾ, ಕೂಗಾಡುತ್ತಾ ಬಾಲಕಿಯನ್ನು ರಕ್ಷಿಸಲು ಸಾಹಸ ಪಟ್ಟಿದ್ದಾರೆ.
ಜನರು ಅಟ್ಟಿಸಿಕೊಂಡು ಬರುತ್ತಿದ್ದರೂ ಜಗ್ಗದ ಗೂಳಿ ಬಾಲಕಿಯನ್ನು ತುಳಿಯುತ್ತಿರುವುದು ವಿಡಿಯೋದಲ್ಲಿ ಸ್ಪಷ್ಟವಾಗಿ ಸೆರೆಯಾಗಿದೆ. ಕೊನೆಗೆ ಜನರ ಗುಂಪು ಮತ್ತು ಕಲ್ಲು ತೂರಾಟಕ್ಕೆ ಹೆದರಿದ ಗೂಳಿ ಅಲ್ಲಿಂದ ಕಾಲ್ಕಿತ್ತಿದೆ. ತಕ್ಷಣವೇ ಬಾಲಕಿಯನ್ನು ಅಲ್ಲಿಂದ ಸುರಕ್ಷಿತವಾಗಿ ಹೊರತರಲಾಗಿದ್ದು, ಸ್ಥಳೀಯರ ಸಮಯಪ್ರಜ್ಞೆಯಿಂದ ದೊಡ್ಡ ಅನಾಹುತವೊಂದು ತಪ್ಪಿದೆ.
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೆಯಾದ ಬೆನ್ನಲ್ಲೇ ಸಾರ್ವಜನಿಕರು ಉತ್ತರ ಪ್ರದೇಶ ಸರ್ಕಾರ ಮತ್ತು ಸ್ಥಳೀಯ ಆಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಗರ ಪ್ರದೇಶಗಳಲ್ಲಿ ಬಿಡಾಡಿ ದನಗಳ ಹಾವಳಿ ಪ್ರಾಣಕ್ಕೆ ಕಂಟಕವಾಗುತ್ತಿದೆ ಎಂದು ಜನರು ದೂರಿದ್ದಾರೆ. “ನಗರಗಳಲ್ಲಿ ಮಕ್ಕಳು ಮತ್ತು ವೃದ್ಧರ ಸುರಕ್ಷತೆ ಎಲ್ಲಿದೆ?” ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ. ಬಿಡಾಡಿ ಪ್ರಾಣಿಗಳನ್ನು ನಿಯಂತ್ರಿಸಲು ಅಧಿಕಾರಿಗಳು ಕೂಡಲೇ ಕಠಿಣ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

