ನವದೆಹಲಿ: ಬದಲಾಗುತ್ತಿರುವ ಹವಾಮಾನ, ಮಿತಿಮೀರಿದ ಮಾಲಿನ್ಯ ಮತ್ತು ಒತ್ತಡದ ಜೀವನಶೈಲಿಯ ನಡುವೆ ನಮ್ಮ ದೇಹದ ಕಾವಲುಗಾರನಂತೆ ಕೆಲಸ ಮಾಡುವುದು ರೋಗನಿರೋಧಕ ವ್ಯವಸ್ಥೆ (Immunity System). ಆದರೆ ಈ ರಕ್ಷಾಕವಚ ದುರ್ಬಲಗೊಂಡಾಗ ದೇಹವು ಕೆಲವು ಸೌಮ್ಯ ಸಂಕೇತಗಳನ್ನು ನೀಡುತ್ತದೆ. ಇದನ್ನು ಸರಿಯಾದ ಸಮಯದಲ್ಲಿ ಗುರುತಿಸದಿದ್ದರೆ ದೊಡ್ಡ ಆರೋಗ್ಯ ಸಮಸ್ಯೆಗಳಿಗೆ ದಾರಿಯಾಗಬಹುದು.
ದೆಹಲಿ ವೈದ್ಯಕೀಯ ಸಂಘದ ಮಾಜಿ ಅಧ್ಯಕ್ಷ ಡಾ. ಅನಿಲ್ ಬನ್ಸಾಲ್ ಅವರು ತಿಳಿಸುವಂತೆ, ದುರ್ಬಲ ರೋಗನಿರೋಧಕ ಶಕ್ತಿಯನ್ನು ಪತ್ತೆಹಚ್ಚಲು ಈ ಕೆಳಗಿನ 5 ಪ್ರಮುಖ ಲಕ್ಷಣಗಳ ಬಗ್ಗೆ ಗಮನಹರಿಸುವುದು ಅವಶ್ಯಕ.
ದುರ್ಬಲ ರೋಗನಿರೋಧಕ ಶಕ್ತಿಯ 5 ಪ್ರಮುಖ ಲಕ್ಷಣಗಳು:
ಪದೇ ಪದೇ ಅನಾರೋಗ್ಯ: ನಿಮಗೆ ಬೇಗನೆ ಶೀತ ಕೆಮ್ಮು ಅಥವಾ ಜ್ವರ ಕಾಣಿಸಿಕೊಳ್ಳುತ್ತಿದ್ದರೆ ಮತ್ತು ಚೇತರಿಸಿಕೊಳ್ಳಲು ಹೆಚ್ಚು ಸಮಯ ತೆಗೆದುಕೊಳ್ಳುತ್ತಿದ್ದರೆ, ನಿಮ್ಮ ದೇಹದ ರಕ್ಷಣಾ ವ್ಯವಸ್ಥೆ ಸುಸ್ತಾಗಿದೆ ಎಂದರ್ಥ.
ನಿರಂತರ ಆಯಾಸ ಮತ್ತು ಆಲಸ್ಯ: ಸಾಕಷ್ಟು ನಿದ್ರೆ ಮತ್ತು ವಿಶ್ರಾಂತಿ ಪಡೆದರೂ ನೀವು ಸದಾ ದಣಿದಂತೆ ಅನುಭವಿಸುತ್ತಿದ್ದರೆ, ನಿಮ್ಮ ರೋಗನಿರೋಧಕ ವ್ಯವಸ್ಥೆಯು ಆಂತರಿಕ ಸೋಂಕುಗಳ ವಿರುದ್ಧ ಹೋರಾಡಲು ನಿಮ್ಮ ಶಕ್ತಿಯನ್ನು ವ್ಯಯಿಸುತ್ತಿದೆ ಎಂದು ತಿಳಿಯಬಹುದು.
ಹೊಟ್ಟೆಯ ಸಮಸ್ಯೆಗಳು: ನಮ್ಮ ದೇಹದ ಶೇ. 70ರಷ್ಟು ರೋಗನಿರೋಧಕ ಶಕ್ತಿ ಕರುಳಿನಲ್ಲಿದೆ ಪದೇ ಪದೇ ಗ್ಯಾಸ್ ಮಲಬದ್ಧತೆ ಅಥವಾ ಅಜೀರ್ಣ ಉಂಟಾಗುತ್ತಿದ್ದರೆ ಅದು ಕರುಳಿನ ಆರೋಗ್ಯದ ಜೊತೆಗೆ ರೋಗನಿರೋಧಕ ಶಕ್ತಿಯೂ ಕುಸಿದಿರುವುದರ ಸಂಕೇತ.
ಗಾಯಗಳು ಗುಣವಾಗಲು ವಿಳಂಬ: ಸಣ್ಣಪುಟ್ಟ ಗಾಯಗಳು ಅಥವಾ ಕಡಿತಗಳು ಗುಣವಾಗಲು ಅತಿ ಹೆಚ್ಚು ಸಮಯ ತೆಗೆದುಕೊಳ್ಳುತ್ತಿದ್ದರೆ ಅಥವಾ ಚರ್ಮದ ದದ್ದುಗಳು ಕಾಣಿಸಿಕೊಳ್ಳುತ್ತಿದ್ದರೆ ದೇಹದ ರಿಪೇರಿ ಪ್ರಕ್ರಿಯೆ ನಿಧಾನವಾಗಿದೆ ಎಂದು ತಿಳಿಯಬೇಕು.
ನಿದ್ರೆಯ ಕೊರತೆ ಮತ್ತು ಒತ್ತಡ: ನಿದ್ರಿಸಲು ಕಷ್ಟವಾಗುವುದು ಅಥವಾ ಸಣ್ಣ ವಿಷಯಕ್ಕೂ ವಿಪರೀತ ಒತ್ತಡಕ್ಕೆ ಒಳಗಾಗುವುದು ರೋಗನಿರೋಧಕ ಶಕ್ತಿಯನ್ನು ಮತ್ತಷ್ಟು ಕುಂದಿಸುತ್ತದೆ.
ನೀವೂ ಪದೇ ಪದೇ ಅನಾರೋಗ್ಯಕ್ಕೆ ಒಳಗಾಗುತ್ತಿದ್ದರೆ, ನಿಮ್ಮ ದಿನಚರಿಯಲ್ಲಿ ಈ 5 ಪ್ರಮುಖ ಬದಲಾವಣೆಗಳನ್ನು ಮಾಡಿಕೊಳ್ಳಿ ಎಂದು ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ.
1.ಊಟದಲ್ಲಿರಲಿ ಸಮತೋಲನ (Balanced Diet)
ಬರೀ ಬೇಯಿಸಿದ ಆಹಾರ ಅಥವಾ ಬಿಳಿ ಅನ್ನದ ಮೇಲೆ ಅವಲಂಬಿತರಾಗಬೇಡಿ. ನಿಮ್ಮ ಊಟದ ತಟ್ಟೆ ಹೀಗಿರಲಿ:
ಅರ್ಧ ಭಾಗ: ಬೇಯಿಸಿದ ಆಹಾರ.
ಇನ್ನರ್ಧ ಭಾಗ: ಹಸಿ ತರಕಾರಿ, ಸಲಾಡ್ ಮತ್ತು ಹಣ್ಣುಗಳು.
ಮೊಳಕೆ ಕಾಳು, ಒಣ ಹಣ್ಣು (Dry Fruits) ಮತ್ತು ಖರ್ಜೂರವನ್ನು ಮರೆಯದೇ ಸೇವಿಸಿ.
2.ನಿದ್ದೆ ಎಂಬುದು ದೇಹದ ರಿಪೇರಿ ಸಮಯ
ಆಧುನಿಕ ಜೀವನದಲ್ಲಿ ನಿದ್ದೆಯನ್ನು ಕಡೆಗಣಿಸುವುದೇ ದೊಡ್ಡ ಶಾಪ ಒಂದು ನಿರ್ದಿಷ್ಟ ನಿದ್ರಾ ಸಮಯವನ್ನು (Sleep Schedule) ಫಿಕ್ಸ್ ಮಾಡಿಕೊಳ್ಳಿ.ಗಾಢ ನಿದ್ದೆಯು ರೋಗನಿರೋಧಕ ಕೋಶಗಳನ್ನು ಪುನಶ್ಚೇತನಗೊಳಿಸುತ್ತದೆ. ನಿದ್ದೆ ಸರಿಯಾಗಿದ್ದರೆ ಮಾನಸಿಕ ಸಮಸ್ಯೆಗಳೂ ದೂರ
3.ವ್ಯಾಯಾಮಕ್ಕೆ ಇರಲಿ ಮೊದಲ ಆದ್ಯತೆ,ವ್ಯಾಯಾಮ ಕೇವಲ ಸ್ನಾಯುಗಳಿಗಲ್ಲ ಮಿದುಳಿನ ಚೈತನ್ಯಕ್ಕೂ ಮುಖ್ಯ.ದಿನವೂ ನಿಯಮಿತ ವ್ಯಾಯಾಮ ಮಾಡುವುದರಿಂದ ದೇಹವು ಆಂತರಿಕವಾಗಿ ಸದೃಢವಾಗುತ್ತದೆ.ಇದು ನಿಮ್ಮನ್ನು ದಿನಪೂರ್ತಿ ಆಯಾಸವಿಲ್ಲದೆ ಚಟುವಟಿಕೆಯಿಂದ (Active) ಇರಿಸಲು ನೆರವಾಗುತ್ತದೆ.
4.ಒತ್ತಡ (Stress) ನಿಭಾಯಿಸುವುದು ಒಂದು ಕಲೆ ಒತ್ತಡವು ರೋಗನಿರೋಧಕ ಶಕ್ತಿಯ ದೊಡ್ಡ ಶತ್ರು. ಅದನ್ನು ಹೀಗೆ ಮ್ಯಾನೇಜ್ ಮಾಡಿ:
ಗ್ಯಾಜೆಟ್‌ಗಳ ಬಳಕೆಯನ್ನು ಕಡಿಮೆ ಮಾಡಿ.
ಎಲ್ಲವನ್ನೂ ನೀವೇ ಮಾಡಬೇಡಿ, ಕೆಲಸವನ್ನು ಹಂಚಿಕೊಳ್ಳಿ.
ಕೆಲಸವನ್ನು ಪ್ರೀತಿಸಿ ಮಾಡಿದರೆ ಅದು ಒತ್ತಡ ಎನಿಸುವುದಿಲ್ಲ.
5.ಬಿಸಿಲು ಮೈ ಮೇಲೆ ಬೀಳಲಿ:ನೆಗಡಿ, ಶೀತದಂತಹ ಸಮಸ್ಯೆಗಳಿಗೆ ವಿಟಮಿನ್ ಡಿ ಕೊರತೆಯೂ ಕಾರಣವಾಗಬಹುದು.ದಿನಕ್ಕೆ ಕನಿಷ್ಠ ಅರ್ಧ ಗಂಟೆ ಬಿಸಿಲಿನಲ್ಲಿ ಕಳೆಯಿರಿ.ಇದು ಕೇವಲ ಮೂಳೆಗಳಿಗಲ್ಲ ಮಾನಸಿಕ ಆರೋಗ್ಯ ಸುಧಾರಣೆಗೂ ಮತ್ತು ಇಮ್ಯುನಿಟಿ ಹೆಚ್ಚಳಕ್ಕೂ ರಾಮಬಾಣ.

