ಬೆಂಗಳೂರು: ಆದಾಯ ಮೀರಿ ಆಸ್ತಿ ಗಳಿಕೆ ಆರೋಪದ ಮೇರೆಗೆ ರಾಷ್ಟ್ರೀಯ ಹೆದ್ದಾರಿ ಪ್ರಾದಿಕಾರದ ವಿಶೇಷ ಭೂಸ್ವಾಧೀನಾಧಿಕಾರಿ ಬಿ. ಮಲ್ಲಿಕಾರ್ಜುನ ಅವರಿಗೆ ಸೇರಿದ 11 ಸ್ಥಳಗಳಲ್ಲಿ ಲೋಕಾಯುಕ್ತ ಪೊಲೀಸ್ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ದಾಳಿಯ ವೇಳೆ ಕೆಎಎಸ್ ಅಧಿಕಾರಿ ಬಿ. ಮಲ್ಲಿಕಾರ್ಜುನ ಅವರು 100 ಎಕರೆ ಜಮೀನು ಸಂಪಾದಿಸಿರುವುದು ಗೊತ್ತಾಗಿದೆ. 2.53 ಕೋಟಿ ರೂಪಾಯಿ ನಗದು ಜಪ್ತಿ ಮಾಡಲಾಗಿದೆ. ಮಲ್ಲಿಕಾರ್ಜುನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದ ಲೋಕಾಯುಕ್ತ ಅಧಿಕಾರಿಗಳು ಏಕಕಾಲಕ್ಕೆ ಅವರಿಗೆ ಮತ್ತು ಅವರ ಸಂಬಂಧಿಕರ ಮನೆಗಳ ಮೇಲೆ ದಾಳಿ ನಡೆಸಿದ್ದಾರೆ.
ಬೆಂಗಳೂರು, ಬಾಗೇಪಲ್ಲಿ, ಮಾಲೂರು, ಚಿಂತಾಮಣಿ, ಚಿಕ್ಕಬಳ್ಳಾಪುರ ಸೇರಿದಂತೆ 11 ಸ್ಥಳಗಳಲ್ಲಿ ಕಾರ್ಯಾಚರಣೆ ನಡೆಸಲಾಗಿದ್ದು, ಕೋಟಿಗಟ್ಟಲೆ ನಗದು, ಚಿನ್ನಾಭರಣ, ಐಷಾರಾಮಿ ವಾಹನಗಳನ್ನು ಪತ್ತೆ ಹಚ್ಚಿದ್ದಾರೆ. ಸಂಬಂಧಿಕರು ಮತ್ತು ಆಪ್ತರ ಹೆಸರಿನಲ್ಲಿ ಸಂಪಾದಿಸಿದ ನೂರು ಎಕರೆ ಐದು ಗುಂಟೆ ಜಮೀನಿಗೆ ಸಂಬಂಧಿಸಿದ ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ.
ಬಾಗೇಪಲ್ಲಿ ತಾಲೂಕಿನಲ್ಲಿ ಮಲ್ಲಿಕಾರ್ಜುನ 30 ಎಕರೆ ಜಮೀನು ಹೊಂದಿದ್ದಾರೆ. 25 ಎಕರೆಯಲ್ಲಿ ಮಾವು, ಪಪ್ಪಾಯ ಸೇರಿ ವಾಣಿಜ್ಯ ಬೆಳೆ ಬೆಳೆಯುತ್ತಿದ್ದಾರೆ. ಫಾರ್ಮ್ ಹೌಸ್ ನಿರ್ಮಿಸಿದ್ದಾರೆ. ಬ್ಯಾಟರಾಯನಪುರದಲ್ಲಿ ಐಷಾರಾಮಿ ಅಪಾರ್ಟ್ಮೆಂಟ್ ನಲ್ಲಿ ವಾಸಿಸುತ್ತಿರುವ ಮಲ್ಲಿಕಾರ್ಜುನ ತಮ್ಮ ಸಂಬಳವನ್ನೇ ಡ್ರಾ ಮಾಡಿಲ್ಲ. ಎರಡು ವಾಸದ ಮನೆಗಳನ್ನು ಹೊಂದಿದ್ದಾರೆ. ಅವರು ಮತ್ತು ಅವರ ಸಂಬಂಧಿಕರ ಬಳಿ 2.53 ಕೋಟಿ ರೂಪಾಯಿ ನಗದು, 15 ಲಕ್ಷ ರೂ ಮೌಲ್ಯದ ವಾಹನಗಳು, 3.10 ಲಕ್ಷದ ಚಿನ್ನಾಭರಣ ಒಂದು ಕೋಟಿ ರೂಪಾಯಿ ಬ್ಯಾಂಕ್ ಬ್ಯಾಲೆನ್ಸ್ ಪತ್ತೆಯಾಗಿದೆ. ಒಟ್ಟಾರೆ 4.04 ಕೋಟಿ ರೂ ಮೌಲ್ಯದ ಚರಾಸ್ತಿ, 12.95 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಪತ್ತೆಯಾಗಿದೆ ಎಂದು ಹೇಳಲಾಗಿದೆ.

