ಥರ್ಡ್ ಪಾರ್ಟಿ ಇನ್ಶೂರೆನ್ಸ್ ಇಲ್ಲದೆ ವಾಹನ ಚಲಾಯಿಸುವವರಿಗೆ ಸುಪ್ರೀಂ ಕೋರ್ಟ್ ಬಿಗ್ ಶಾಕ್ ನೀಡಿದೆ. ವಿಮೆ ಇಲ್ಲದ ವಾಹನಗಳಿಗೆ ಪೆಟ್ರೋಲ್ ಬಂಕ್ಗಳಲ್ಲಿ ಇಂಧನ ನೀಡದಿರುವಂತೆ ವಿಶೇಷ ಪೈಲಟ್ ಯೋಜನೆ ಜಾರಿಗೆ ತರಲು ಕೇಂದ್ರ ಸರ್ಕಾರಕ್ಕೆ ಕೋರ್ಟ್ ಸೂಚಿಸಿದ್ದು, ಆರಂಭಿಕ ಹಂತದಲ್ಲಿ ದೆಹಲಿಯಲ್ಲಿ ಈ ಯೋಜನೆ ಜಾರಿಗೊಳಿಸುವ ಸಾಧ್ಯತೆ ಇದೆ.
ಹೌದು. ದೇಶದಲ್ಲಿ ಮಾನ್ಯವಾಗಿರುವ ಥರ್ಡ್ ಪಾರ್ಟಿ ವಾಹನ ವಿಮೆ ಇಲ್ಲದೆ ಹೆಚ್ಚಿನ ಸಂಖ್ಯೆಯ ವಾಹನಗಳು ರಸ್ತೆಗಳಲ್ಲಿ ಸಂಚರಿಸುತ್ತಿರುವ ಬಗ್ಗೆ ಸುಪ್ರೀಂ ಕೋರ್ಟ್ ತೀವ್ರ ಕಳವಳ ವ್ಯಕ್ತಪಡಿಸಿದೆ.
ರಸ್ತೆ ಅಪಘಾತಗಳು ಸಂಭವಿಸಿದಾಗ ಸಂತ್ರಸ್ತರಿಗೆ ಸೂಕ್ತ ಪರಿಹಾರ ದೊರೆಯದಿರಲು ವಿಮೆ ಇಲ್ಲದಿರುವುದೇ ಪ್ರಮುಖ ಕಾರಣ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ವಿಮೆ ಇಲ್ಲದ ವಾಹನಗಳಿಗೆ ಪೆಟ್ರೋಲ್ ಬಂಕ್ಗಳಲ್ಲಿ ಇಂಧನ ಮಾರಾಟ ನಿರಾಕರಿಸುವ ವಿಶೇಷ ಪೈಲಟ್ ಯೋಜನೆಯನ್ನು ತಕ್ಷಣ ಆರಂಭಿಸುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಸೂಚಿಸಿದೆ.
ದೆಹಲಿಯಲ್ಲಿ ಪೈಲಟ್ ಯೋಜನೆ ಆರಂಭಿಸಲು ಸೂಚನೆ
ನ್ಯಾಯಮೂರ್ತಿಗಳಾದ ಸಂಜಯ್ ಕರೋಲ್ ಮತ್ತು ಪ್ರಶಾಂತ್ ಕುಮಾರ್ ಮಿಶ್ರಾ ಅವರ ದ್ವಿಸದಸ್ಯ ಪೀಠ ಈ ಪ್ರಕರಣದ ವಿಚಾರಣೆ ನಡೆಸಿತು. ಕೇಂದ್ರ ಸರ್ಕಾರದ ಪರ ವಕೀಲರು, ಈ ನಿಯಮ ಜಾರಿಗೆ ಕೆಲವು ಪ್ರಾಯೋಗಿಕ ಸವಾಲುಗಳು ಮತ್ತು ಆತಂಕಗಳಿವೆ ಎಂದು ವಾದಿಸಿದರು. ಆದರೆ ಸುಪ್ರೀಂ ಕೋರ್ಟ್ ಈ ವಾದಗಳನ್ನು ತಿರಸ್ಕರಿಸಿತು.
“ಈ ಯೋಜನೆಯನ್ನು ಖಂಡಿತವಾಗಿ ಜಾರಿಗೊಳಿಸಬೇಕು” ಎಂದು ನ್ಯಾಯಪೀಠ ಸ್ಪಷ್ಟಪಡಿಸಿದ್ದು, ಮೊದಲು ದೇಶದ ರಾಜಧಾನಿ ದೆಹಲಿಯಲ್ಲಿ ಪೈಲಟ್ ಯೋಜನೆ ಆರಂಭಿಸಬಹುದು ಎಂದು ಸೂಚಿಸಿದೆ. ಈ ಸಂಬಂಧ ತೈಲ ಕಂಪನಿಗಳು ಹಾಗೂ ಪೆಟ್ರೋಲ್ ಬಂಕ್ ಡೀಲರ್ಗಳೊಂದಿಗೆ ಚರ್ಚಿಸಿ ಜಾರಿಗೆ ಕ್ರಮ ಕೈಗೊಳ್ಳುವಂತೆ ಕೇಂದ್ರಕ್ಕೆ ನಿರ್ದೇಶನ ನೀಡಿದೆ.
ಆಗಸ್ಟ್ 21ಕ್ಕೆ ಮುಂದಿನ ವಿಚಾರಣೆ
ಈ ಆದೇಶದ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಸ್ಪಷ್ಟ ಯೋಜನೆ ಮತ್ತು ನಿಗದಿತ ಕಾಲಮಿತಿಯನ್ನು ಮುಂದಿನ ವಿಚಾರಣೆಯ ವೇಳೆಗೆ ನ್ಯಾಯಾಲಯಕ್ಕೆ ಸಲ್ಲಿಸುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಸೂಚಿಸಿದೆ.
ವಾಹನ ವಿಮೆ ನಿಯಮಗಳನ್ನು ಪಾಲಿಸದ ವಾಹನ ಸವಾರರಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಈ ಕ್ರಮ ಮಹತ್ವದ್ದಾಗಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.ಈ ಪ್ರಕರಣದ ಮುಂದಿನ ವಿಚಾರಣೆಯನ್ನು ಆಗಸ್ಟ್ 21ಕ್ಕೆ ಸುಪ್ರೀಂ ಕೋರ್ಟ್ ಮುಂದೂಡಿದೆ.

