ಕಲಬುರಗಿ: 12 ಸಾವಿರ ರೂಪಾಯಿ ಲಂಚ ಪಡೆಯುತ್ತಿದ್ದ ಪಿಡಿಒ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಸರ್ಕಾರಿ ಜಾಗದ ಒಂದು ಭಾಗವನ್ನು ವ್ಯಕ್ತಿಯೊಬ್ಬರಿಗೆ ಮ್ಯುಟೇಶನ್ ಮಾಡಿಕೊಡಲು 12 ಸಾವಿರ ರೂಪಾಯಿ ಲಂಚದ ಹಣವನ್ನು ಯುಪಿಐ ಮೂಲಕ ಪಡೆದುಕೊಂಡಿದ್ದ ಹಿನ್ನೆಲೆಯಲ್ಲಿ ಜೇವರ್ಗಿ ತಾಲೂಕಿನ ಬಿರಾಳ ಗ್ರಾಮ ಪಂಚಾಯಿತಿ ಪಿಡಿಒ ಮೈಬೂಬ್ ಪಟೇಲ್ ಅವರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.
ಜೇವರ್ಗಿ ತಾಲೂಕಿನ ಮಲ್ಲಾ(ಬಿ) ಗ್ರಾಮದಲ್ಲಿರುವ 60*40 ಅಳತೆಯ ಜಾಗದಲ್ಲಿ 20*30 ಅಳತೆ ಜಾಗವನ್ನು ಮರೆಪ್ಪ ತಳವಾರ ಎಂಬುವರಿಗೆ ಮ್ಯುಟೇಶನ್ ಮಾಡಿಕೊಡಬೇಕಿತ್ತು. ಇದಕ್ಕಾಗಿ ಪಿಡಿಒ 18 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ಶಿವಾರೆಡ್ಡಿ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದು, ಕಾರ್ಯಾಚರಣೆ ನಡೆಸಿದ ಲೋಕಾಯುಕ್ತ ಪೊಲೀಸರು ಪಿಡಿಒ ಮೈಬೂಬ್ ಪಟೇಲ್ ಅವರನ್ನು ಬಂಧಿಸಿದ್ದಾರೆ.

