ಮೈಸೂರು: ರೈತರ ಆದಾಯ ಹೆಚ್ಚಿಸುವ ನಿಟ್ಟಿನಲ್ಲಿ ತೇಗದ ಸಿರಿ ಯೋಜನೆ ರೂಪಿಸಿ ಜಾರಿಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಘೋಷಿಸಿದ್ದಾರೆ.
ಸುತ್ತೂರು ಮಠದ ಮೈಸೂರು ಶಾಖೆಯಲ್ಲಿ ಶನಿವಾರ ಆಯೋಜಿಸಿದ್ದ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ 111 ನೇ ಜಯಂತಿ ಮಹೋತ್ಸವದಲ್ಲಿ ಅವರು ಮಾತನಾಡಿದರು.
ರಾಜ್ಯದಲ್ಲಿ ಪ್ರತಿ ವರ್ಷ ಒಂದು ಕೋಟಿ ಗಿಡ ನೆಡಬೇಕೆಂಬ ಉದ್ದೇಶವಿದೆ. ಯಾವುದೋ ಗಿಡ, ಮರ ನೆಡುವ ಬದಲಿಗೆ ತೇಗದ ಮರಗಳನ್ನು ನೆಟ್ಟರೆ ಮುಂದಿನ 20 ರಿಂದ 25 ವರ್ಷಕ್ಕೆ ಒಳ್ಳೆಯ ಆರ್ಥಿಕ ಸಂಪತ್ತು ಆಗಲಿದೆ. ರಸ್ತೆ ಬದಿಗಳಲ್ಲಿ ತೇಗದ ಮರ ಬೆಳೆಸಿದರೆ ಪಕ್ಕದಲ್ಲಿರುವ ಜಮೀನಿನವರು ಅವುಗಳ ಪೋಷಣೆ ಮಾಡಬೇಕು. ಮರಗಳ ಮಾರಾಟದ ಹಣದಲ್ಲಿ ರೈತರಿಗೆ ಶೇಕಡ 70ರಷ್ಟು ಮತ್ತು ಸರ್ಕಾರಕ್ಕೆ ಶೇಕಡ 30ರಷ್ಟು ಹೋಗಬೇಕು ಎನ್ನುವ ಚಿಂತನೆ ಇದೆ ಎಂದು ಹೇಳಿದ್ದಾರೆ.
ರಾಜ್ಯಾದ್ಯಂತ ಪ್ರಮುಖ ರಸ್ತೆಗಳ ಬದಿಯಲ್ಲಿ ತೇಗದ ಗಿಡಗಳನ್ನು ನೆಡುವ ಉದ್ದೇಶದಿಂದ ತೇಗಶ್ರೀ ಯೋಜನೆ ಜಾರಿಗೆ ಅರಣ್ಯ ಇಲಾಖೆಗೆ ಸೂಚನೆ ನೀಡಲಾಗಿದೆ. ಈ ಯೋಜನೆಯಿಂದ ಪರಿಸರ ಉಳಿಯುವ ಜೊತೆಗೆ ನಾಡಿನ ಸಂಪತ್ತು ಕೂಡ ಹೆಚ್ಚಾಗುತ್ತದೆ ಎಂದು ಹೇಳಿದ್ದಾರೆ.
ಈ ಯೋಜನೆ ಬಗ್ಗೆ ಜಮೀನಿನ ಮಾಲೀಕರೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗುವುದು. ಪ್ರಸ್ತುತ ತೇಗದ ಮರಕ್ಕೆ ಒಂದು ಚದರ ಅಡಿಗೆ 7500 ರೂ. ದರ ಇದೆ. ಹೀಗಾಗಿ ತೇಗದ ಗಿಡ ನೆಟ್ಟು ಘೋಷಿಸಲಾಗುವುದು ಎಂದು ತಿಳಿಸಿದ್ದಾರೆ.
“ಪೂಜ್ಯರು ತ್ರಿವಿಧ ದಾಸೋಹಗಳಲ್ಲಿ ಸಾರ್ಥಕತೆ ಕಂಡವರು”
ಕಿರಿಯ ವಯಸ್ಸಿನಲ್ಲಿಯೇ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಯನ್ನು ಮಾಡಿ ತ್ರಿವಿಧ ದಾಸೋಹಗಳಲ್ಲಿ ಸಾರ್ಥಕತೆ ಕಂಡವರು ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳು. ಸಾಂಸ್ಕೃತಿಕ ಹಾಗೂ ಸಾಮಾಜಿಕ ಸೇವೆಯಲ್ಲಿ ನಿರತರಾದ ಮಹನೀಯರನ್ನು ನೆನೆಯುವುದು ನಮ್ಮೆಲ್ಲರ ಕರ್ತವ್ಯ ಎಂದು ಸಿಎಂ ತಿಳಿಸಿದ್ದಾರೆ.
ಜಾತಿ,ವರ್ಗಗಳ ಭೇದವಿಲ್ಲದೆ ಮಠಗಳಿಂದ ಜನರಿಗೆ ಅನುಕೂಲವಾಗುತ್ತಿದೆ. ದಕ್ಷಿಣ ಭಾರತದಲ್ಲಿನ ಶಿಕ್ಷಣ ಕ್ರಾಂತಿಗೆ ಮಠಮಾನ್ಯಗಳು ಮಹತ್ತರ ಕೊಡುಗೆ ನೀಡಿವೆ. ರಾಜ್ಯದಲ್ಲಿ 46,302 ಸರ್ಕಾರಿ ಪ್ರಾಥಮಿಕ ಶಾಲೆಗಳು ಹಾಗೂ 24,000 ಖಾಸಗಿ ಶಾಲೆಗಳಿದ್ದು, 36 ಲಕ್ಷ ವಿದ್ಯಾರ್ಥಿಗಳು ಸರ್ಕಾರಿ ಶಾಲೆಯಲ್ಲಿ ಹಾಗೂ 57 ಲಕ್ಷ ವಿದ್ಯಾರ್ಥಿಗಳು ಖಾಸಗಿ ಶಾಲೆಗಳಲ್ಲಿ ಓದುತ್ತಿದ್ದಾರೆ. ಖಾಸಗಿ ಶಿಕ್ಷಣ ಸಂಸ್ಥೆಗಳು ಹಾಗೂ ಮಠಮಾನ್ಯಗಳು ಸರ್ಕಾರದ ಶಿಕ್ಷಣ ಕ್ರಾಂತಿಗೆ ಕೈಜೋಡಿಸದಿದ್ದರೆ, ಕರ್ನಾಟಕವನ್ನು ಅಭಿವೃದ್ಧಿಶೀಲ ರಾಜ್ಯವಾಗಿಸಲು ಸಾಧ್ಯವಾಗುತ್ತಿರಲಿಲ್ಲ. ಸರ್ಕಾರವೊಂದರಿಂದಲೇ ಸಾಧ್ಯವಾಗದ ಕೆಲಸದಲ್ಲಿ ಮಠಮಾನ್ಯಗಳೂ ಕೈಜೋಡಿಸಿವೆ ಎಂದರು.
ಕೆಪಿಸಿಸಿ ಅಧ್ಯಕ್ಷನಾದಾಗ ಸುತ್ತೂರು ಮಠಕ್ಕೆ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದಿದ್ದೆ. ‘ನಮ್ಮ ನೀರು ನಮ್ಮ ಹಕ್ಕು’ ಹೋರಾಟಕ್ಕೆ ಸುತ್ತೂರು ಶ್ರೀಗಳು ಬೆಂಬಲ ಸೂಚಿಸಿದ್ದರು. ಈ ಹೋರಾಟ ಯಶಸ್ವಿಯಾಯಿತು. ಸುತ್ತೂರಿನ ಶಿವರಾತ್ರಿ ದೇಶಿಕೇಂದ್ರ ಶ್ರೀಗಳು ನನ್ನ ಕಷ್ಟ-ಸುಖಗಳಲ್ಲಿ ನನಗೆ ಮಾರ್ಗದರ್ಶನ ನೀಡಿದ್ದಾರೆ. ಶ್ರೀಮಠಗಳು ಸಮಾಜದ ಋಣವನ್ನು ತೀರಿಸುತ್ತಿವೆ. ಮನುಷ್ಯನು ತನ್ನ 4 ಋಣಗಳನ್ನು ತೀರಿಸುವಂತೆ, ಶ್ರೀಗಳು ಈ ಋಣಗಳನ್ನು ಧರ್ಮಕಾರ್ಯಗಳ ಮೂಲಕ ತೀರಿಸುತ್ತಿದ್ದಾರೆ ಎಂದು ಹೇಳಿದ್ದಾರೆ.

