ಬೆಂಗಳೂರು: ರಾಜ್ಯ ಜಲಸಂಪನ್ಮೂಲ ಇಲಾಖೆಯಲ್ಲಿ 300ಕ್ಕೂ ಹೆಚ್ಚು ಜೂನಿಯರ್ ಎಂಜಿನಿಯರ್ ಗಳ ನೇಮಕಾತಿಗೆ ಕರ್ನಾಟಕ ಲೋಕಸೇವಾ ಆಯೋಗ(KPSC) ಕೈಗೊಂಡಿರುವ ಪ್ರಕ್ರಿಯೆಗೆ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ.
ನೇಮಕಾತಿಯಲ್ಲಿ ಭಾರಿ ಅಕ್ರಮ ನಡೆದಿದೆ ಎನ್ನುವ ಆರೋಪ ಮೇಲ್ನೋಟಕ್ಕೆ ಕಂಡು ಬಂದಿರುವುದರಿಂದ ಕೆಪಿಎಸ್ಸಿ ಈಗಾಗಲೇ ಪ್ರಕಟಿಸಿರುವ ಆಯ್ಕೆ ಪಟ್ಟಿಯಲ್ಲಿರುವ ಅಭ್ಯರ್ಥಿಗಳಿಗೆ ನೇಮಕಾತಿ ಪತ್ರ ವಿತರಿಸಬಾರದು ಎಂದು ಹೈಕೋರ್ಟ್ ಆದೇಶಿಸಿದೆ.
ರಾಜೇಶ್ ಡೆಂಗಿ ಮತ್ತಿತರರು ಸಲ್ಲಿಸಿರುವ ಅರ್ಜಿ ಪರಿಶೀಲನೆ ನಡೆಸಿದ ನ್ಯಾಯಮೂರ್ತಿ ಅಶೋಕ್ ಎಸ್. ಕಿಣಗಿ ನೇತೃತ್ವದ ನ್ಯಾಯಪೀಠ ಈ ಆದೇಶ ನೀಡಿದ್ದು, ವಿಚಾರಣೆ ಮುಂದೂಡಲಾಗಿದೆ. ಅರ್ಜಿದಾರರ ವಾದ ಆಲಿಸಿದ ನಂತರ ಸರ್ಕಾರ ಮತ್ತು ಕರ್ನಾಟಕ ಲೋಕಸೇವಾ ಆಯೋಗ ಪರ ವಕೀಲರಿಗೆ ನೋಟಿಸ್ ಜಾರಿಗೊಳಿಸಲಾಗಿದೆ.
ಅರ್ಜಿದಾರರ ಪರ ವಕೀಲರು, ಮಧ್ಯಂತರ ಆದೇಶ ಕೋರಿದ್ದು ಕೆಲವು ಗಂಭೀರ ಆರೋಪ ಮಾಡಿದ್ದಾರೆ. ಜಲಸಂಪನ್ಮೂಲ ಇಲಾಖೆಯಲ್ಲಿ 300ಕ್ಕೂ ಹೆಚ್ಚು ಜೂನಿಯರ್ ಎಂಜಿನಿಯರ್ ಗಳ ನೇಮಕಾತಿ ಆಯ್ಕೆ ಪ್ರಕ್ರಿಯೆಯಲ್ಲಿ ಹಗರಣ ನಡೆದಿದೆ. ಅರ್ಹರ ಪಟ್ಟಿ ಪ್ರಕಟಣೆ ಸಂಬಂಧ ಕೆಲವು ಮಾಹಿತಿ ಸೋರಿಕೆಯಾಗಿದೆ. ಕೆಪಿಎಸ್ಸಿಯ ಕೆಲವು ಅಧಿಕಾರಿಗಳು ಮತ್ತು ನಾಲ್ವರು ಮಧ್ಯವರ್ತಿಗಳನ್ನು ಬಂಧಿಸಲಾಗಿದೆ. ಹೀಗಾಗಿ ವಿಚಾರವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಕೋರಿದ್ದಾರೆ.
ಮೇಲ್ನೋಟಕ್ಕೆ ಅರ್ಜಿದಾರರ ವಾದದಲ್ಲಿ ಹುರುಳಿದೆ ಎನಿಸುತ್ತಿದೆ. ಹೀಗಾಗಿ ಕೆಪಿಎಸ್ಸಿ ಮುಂದಿನ ಆದೇಶದವರೆಗೆ ಅಭ್ಯರ್ಥಿಗಳಿಗೆ ನೇಮಕಾತಿ ಪತ್ರ ವಿತರಿಸಬಾರದು ಎಂದು ಹೈಕೋರ್ಟ್ ಆದೇಶದಲ್ಲಿ ತಿಳಿಸಿದೆ.

