ಬೆಂಗಳೂರು: ರಾಜ್ಯದ ಬರಪೀಡಿತ ಪ್ರದೇಶಗಳ ರೈತರಿಗೆ ನೆರವಾಗಲು ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಬರದಿಂದ ಬೆಳೆ ನಷ್ಟ ಹಾಗೂ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ರೈತರಿಗೆ ಕೃಷಿ ಸಾಲ ಮರುಪಾವತಿಗೆ 12 ತಿಂಗಳ ಹೆಚ್ಚುವರಿ ಕಾಲಾವಕಾಶ ನೀಡಲು ಕ್ರಮ ಕೈಗೊಳ್ಳಲಾಗಿದೆ.
ಬರಪೀಡಿತ ತಾಲೂಕುಗಳಲ್ಲಿ ರೈತರ ಸಾಲದ ಮರುಪಾವತಿ ಅವಧಿಯನ್ನು ವಿಸ್ತರಿಸುವುದರ ಜೊತೆಗೆ, ಬರದ ತೀವ್ರತೆಯನ್ನು ಆಧರಿಸಿ ಹೆಚ್ಚಿನ ಅವಧಿಯ ಸೌಲಭ್ಯವನ್ನೂ ಒದಗಿಸಲಾಗುತ್ತಿದೆ. ಸಾಧಾರಣ ಬರ ಪರಿಸ್ಥಿತಿಯಲ್ಲಿ ಸಾಲ ಮರುಪಾವತಿ ಅವಧಿಯನ್ನು 3 ವರ್ಷಗಳವರೆಗೆ ಹಾಗೂ ತೀವ್ರ ಬರ ಪರಿಸ್ಥಿತಿಯಲ್ಲಿ 5 ವರ್ಷಗಳವರೆಗೆ ವಿಸ್ತರಿಸುವ ಅವಕಾಶವಿದೆ.
ಇದರೊಂದಿಗೆ, ಸಾಲ ಮರುಪಾವತಿ ಮುಂದೂಡಿಕೆಯಿಂದ ಸಂಕಷ್ಟಕ್ಕೆ ಸಿಲುಕುವ ರೈತರಿಗೆ ಅಗತ್ಯವಿದ್ದಲ್ಲಿ ಹೊಸ ಸಾಲ ಸೌಲಭ್ಯ ಕಲ್ಪಿಸುವ ಕ್ರಮಕ್ಕೂ ಅವಕಾಶ ನೀಡಲಾಗಿದೆ. ಬರದ ಸಂದರ್ಭದಲ್ಲಿ ರೈತರ ಮೇಲಿನ ಆರ್ಥಿಕ ಒತ್ತಡ ಕಡಿಮೆ ಮಾಡಿ, ಕೃಷಿ ಚಟುವಟಿಕೆಗಳನ್ನು ಮುಂದುವರಿಸಲು ಈ ಕ್ರಮ ಸಹಕಾರಿಯಾಗಲಿದೆ ಎಂದು ರಾಜ್ಯ ಸರ್ಕಾರ ಪ್ರಕಟಣೆ ಹೊರಡಿಸಿದೆ.
ಸಾಲ ಮರುಪಾವತಿಗೆ ಹೆಚ್ಚುವರಿ ಕಾಲಾವಕಾಶ ಹಾಗೂ ಅಗತ್ಯವಿರುವ ರೈತರಿಗೆ ಹೊಸ ಸಾಲ ಸೌಲಭ್ಯ ನೀಡುವ ಮೂಲಕ ಬರಪೀಡಿತ ಅನ್ನದಾತರಿಗೆ ಸರ್ಕಾರ ಆರ್ಥಿಕ ನೆರವು ನೀಡಲು ಮುಂದಾಗಿದೆ.
ಸರ್ಕಾರದ ಮಹತ್ವದ ನಿರ್ಧಾರ
· ಬರಪೀಡಿತ ತಾಲೂಕುಗಳ ರೈತರಿಗೆ ಬ್ಯಾಂಕಿಂಗ್ ಸಾಲ ಮರುಪಾವತಿಯಲ್ಲಿ ವಿನಾಯಿತಿ
· ಸಾಲ ಮರುಪಾವತಿಸಲು ಅನ್ನದಾತರಿಗೆ 12 ತಿಂಗಳ ಕಾಲಾವಕಾಶ
· ಕಿಸಾನ್ ಕ್ರೆಡಿಟ್ ಕಾರ್ಡ್ (KCC), ಹೈನುಗಾರಿಕೆ, ರೇಷ್ಮೆ, ಮೀನುಗಾರಿಕೆ ಸೇರಿದಂತೆ ಕೃಷಿ ಸಾಲಗಳಿಗೆ ಮರುಪಾವತಿ ಅವಧಿ ವಿಸ್ತರಣೆ
· ಸಾಮಾನ್ಯ ಬರವಿನಲ್ಲಿ 3 ವರ್ಷ, ತೀವ್ರ ಬರವಿನಲ್ಲಿ 5 ವರ್ಷ ಸಾಲ ಮರುಪಾವತಿ ಅವಧಿ ವಿಸ್ತರಣೆ
· ರೈತರ ತುರ್ತು ಅಗತ್ಯಕ್ಕೆ ಅನುಗುಣವಾಗಿ ಬ್ಯಾಂಕುಗಳಿಂದ ಹೊಸ ಸಾಲ ಸೌಲಭ್ಯ
ಗೃಹಲಕ್ಷ್ಮಿ ಅರ್ಹ ಫಲಾನುಭವಿಗಳಿಗೆ ಬಯೋಮೆಟ್ರಿಕ್ ಮರುಪರಿಶೀಲನೆ
ಧಾರವಾಡ : ರಾಜ್ಯ ಸರ್ಕಾರವು ಗೃಹಲಕ್ಷ್ಮಿ ಯೋಜನೆಯಡಿ ಅರ್ಹ ಫಲಾನುಭವಿಗಳ ಬಯೋಮೆಟ್ರಿಕ್ ದೃಢೀಕರಿಸುವ ಮೂಲಕ ಮರುಪರಿಶೀಲನೆ ನಡೆಸಲು ಪ್ರಮಾಣಿತ ಕಾರ್ಯಾಚರಣಾ ವಿಧಾನ ಜಾರಿಗೆ ತರಲಾಗುವುದು ಎಂದು ಜಿಲ್ಲಾಧಿಕಾರಿ ಸ್ನೇಹಲ್ ಆರ್. ಅವರು ಹೇಳಿದರು.
ಅವರು ಜಿಲ್ಲಾಧಿಕಾರಿಗಳ ಕಚೇರಿಯ ನೂತನ ಸಭಾಭವನದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ ಜರುಗಿಸಿ, ಮಾತನಾಡಿದರು.
ಗೃಹಲಕ್ಷ್ಮಿ ಫಲಾನುಭವಿಗಳ ವಿವರಗಳನ್ನು ಪರಿಶೀಲಿಸಿ, ಅವರ ಪ್ರಸ್ತುತ ಸ್ಥಿತಿಯನ್ನು ದೃಢಿಕರಿಸುವ ಉದ್ದೇಶದಿಂದ ಫಲಾನುಭವಿಗಳ ಮರುಪರಿಶೀಲನಾ ಕಾರ್ಯವನ್ನು ನಿಯೋಜಿತ ಗಣತಿದಾರರು (Enumerators) ಹಾಗೂ ಗ್ಯಾರಂಟಿ ಸಮಿತಿ (GC) ಸದಸ್ಯರು ಕಡ್ಡಾಯವಾಗಿ ಮನೆ-ಮನೆಗೆ ಭೇಟಿ ನೀಡುವರು. ಮೊಬೈಲ್ ಅಪ್ಲಿಕೇಶನ್ ಜಿಪಿಎಸ್ ಗುರುತಿನೊಂದಿಗೆ ಛಾಯಾಚಿತ್ರದ ಸಾಕ್ಷ್ಯ ಆಧಾರ್ ಆಧಾರಿತ ಮುಖದ ದೃಢಿಕರಣ ಹಾಗೂ ಪರ್ಯಾಯ ಸಹಾಯಕ ವ್ಯವಸ್ಥೆಯಾಗಿ ಬೆಂಗಳೂರು ಒನ್, ಕರ್ನಾಟಕ ಒನ್, ಗ್ರಾಮ ಒನ್ ಇತರೆ ನಿಗದಿತ ಕೇಂದ್ರಗಳ ಸೇವೆಯನ್ನು ಬಳಸಲಾಗುವುದು ಎಂದು ಹೇಳಿದರು.
ಗೃಹಲಕ್ಷ್ಮಿ ಯೋಜನೆಯ ಅರ್ಹ ಫಲಾನುಭವಿಗಳ ಮರುಪರಿಶೀಲನೆ ಕಾರ್ಯವನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕೈಗೊಂಡಿದ್ದು, ಕಾರ್ಯಾರಂಭವಾದ ದಿನಾಂಕದಿಂದ ಒಂದು ತಿಂಗಳೊಳಗೆ ಪೂರ್ಣಗೊಳಿಸಲು ಸೂಚಿಸಲಾಗಿದೆ ಎಂದರು.
ಮರುಪರಿಶೀಲನೆ ಪ್ರಕ್ರಿಯೆಯ ತಾಂತ್ರಿಕ ಪಾಲುದಾರ ಸಂಸ್ಥೆಯಾಗಿ ಪ್ರಜಾಸೇವಾ ಇಲಾಖೆಯ ಅಧೀನದಲ್ಲಿರುವ ವಿದ್ಯುನ್ಮಾನ ನಾಗರಿಕ ಸೇವಾ ವಿತರಣಾ ನಿರ್ದೇಶನಾಲಯ (EDCS) ಕಾರ್ಯನಿರ್ವಹಿಸಲಿದೆ. ಈ ಪ್ರಕ್ರಿಯೆಯಲ್ಲಿ ಮನೆ-ಮನೆಗೆ ಭೇಟಿ ನೀಡುವುದು ಕಡ್ಡಾಯವಾಗಿದ್ದು, ಬೆಂಗಳೂರು ಒನ್, ಕರ್ನಾಟಕ ಒನ್, ಗ್ರಾಮ ಒನ್ ಹಾಗೂ ಇತರೆ ನಿಗದಿತ ಸೇವಾ ಕೇಂದ್ರಗಳು ಕೇವಲ ಸಹಾಯಕ ಅಥವಾ ಪರ್ಯಾಯ ವ್ಯವಸ್ಥೆಯಾಗಿ ಮಾತ್ರ ಬಳಸಲಾಗುತ್ತದೆ.
ಮರುಪರಿಶೀಲನೆ ಈಗಾಗಲೇ ಗುರುತಿಸಲ್ಪಟ್ಟಿರುವ ಅಸ್ತಿತ್ವದಲ್ಲಿರುವ ಫಲಾನುಭವಿಗಳಿಗೆ ಮಾತ್ರ ಸೀಮಿತವಾಗಿದ್ದು, ಹೊಸ ನೋಂದಣಿಯನ್ನು ಈ ಕಾರ್ಯಾಚರಣೆಯ ವ್ಯಾಪ್ತಿಗೆ ಒಳಪಡಿಸಲಾಗುವುದಿಲ್ಲ ಎಂದು ತಿಳಿಸಿದರು.
ನಂತರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವಿವಿಧ ಯೋಜನೆಗಳಾದ ಸಖಿ ಒನ್ ಸ್ಟಾಪ್ ಸೆಂಟರ್ ಯೋಜನೆ, ಬೇಟಿ ಬಚಾವೋ ಬೇಟಿ ಪಡವೋ ಯೋಜನೆ, ಶಕ್ತಿ ಸದನ ಯೋಜನೆ, ಜಿಲ್ಲಾ ಮಹಿಳಾ ಸಬಲೀಕರಣ ಘಟಕ ಯೋಜನೆ, ಸಖಿ ನಿವಾಸ ಯೋಜನೆ, ಪ್ರಧಾನಮಂತ್ರಿ ಮಾತೃ ವಂದನಾ ಯೋಜನೆ, ಅಂಗನವಾಡಿ ಕಂ. ಕ್ರಶ್ ಯೋಜನೆ, ಉದ್ಯೋಗಸ್ಥ ಮಹಿಳೆಯರ ವಸತಿ ನಿಲಯ, ಸಾಂತ್ವಾನ ಯೋಜನೆ, ಕೌಟುಂಬಿಕ ಹಿಂಸೆಯಿಂದ ಮಹಿಳೆಯರ ಸಂರಕ್ಷಣಾ ಕಾಯ್ದೆ, ಮಹಿಳೆಯರ ಮತ್ತು ಮಕ್ಕಳ ಅನೈತಿಕ ಸಾಗಾಣಿಕೆ ತಡೆಗಟ್ಟುವಿಕೆ ಹಾಗೂ ರಾಜ್ಯ ಮಹಿಳಾ ನಿಲಯ, ಸ್ತೀ ಶಕ್ತಿ ಯೋಜನೆಗಳ ಕುರಿತು ಪ್ರಗತಿ ಪರಿಶೀಲನೆ ನಡೆಸಿದರು.
ಸಭೆಯಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾ ಮಟ್ಟದ ಅಧ್ಯಕ್ಷರಾದ ಎಸ್. ಆರ್. ಪಾಟೀಲ, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಪ್ರಕಾಶ ಹಳಿಯಾಳ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಂiÀೂಧೀಶ ಅಲ್ಲಪ್ಪ ಎಂ. ಬಡಿಗೇರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ವೀರಣ್ಣಗೌಡ ಪಾಟೀಲ ಸೇರಿದಂತೆ ವಿವಿಧ ಯೋಜನೆಗಳ ಅಧಿಕಾರಿಗಳು, ಸಿಬ್ಬಂದಿಗಳು ಉಪಸ್ಥಿತರಿದ್ದರು.

