ಬೆಂಗಳೂರು: ಕೆಎಸ್ಆರ್ಟಿಸಿ ವಿಭಾಗ, ಘಟಕಗಳಲ್ಲಿ ಸಿಬ್ಬಂದಿಗೆ ರಜೆ ನೀಡುವ ವಿಚಾರದಲ್ಲಿ ಆಗುತ್ತಿರುವ ಕಿರುಕುಳ ತಪ್ಪಿಸಲು ಹೆಚ್.ಆರ್.ಎಂ.ಎಸ್.(ಮಾನವ ಸಂಪನ್ಮೂಲ ನಿರ್ವಹಣಾ ವ್ಯವಸ್ಥೆ) ಜಾರಿಗೆ ತರಲಾಗಿದೆ. ಈ ಮೂಲಕ ಸಿಬ್ಬಂದಿ ಇನ್ನು ಮುಂದೆ ಹಾಜರಾತಿ ಹಾಗೂ ರಜೆ ಪಡೆಯಬಹುದಾಗಿದೆ.
ಇದುವರೆಗೆ ಹಾಜರಾತಿ ನಮೂದು ಮತ್ತು ರಜೆ ನೀಡುವ ವ್ಯವಸ್ಥೆ ಮ್ಯಾನುಯಲ್ ಆಗಿ ನಡೆಯುತ್ತಿತ್ತು. ಇದರಿಂದ ವಿಭಾಗ ಘಟಕಗಳ ಮುಖ್ಯಸ್ಥರು ರಜೆ ನೀಡಲು ಕಿರುಕುಳ ನೀಡುತ್ತಾರೆ. ಈ ವ್ಯವಸ್ಥೆಯನ್ನು ಬದಲಾವಣೆ ಮಾಡಬೇಕೆಂದು ಸಿಬ್ಬಂದಿ ಒತ್ತಾಯಿಸುತ್ತಿದ್ದರು. ಹೀಗಾಗಿ ಕೆಎಸ್ಆರ್ಟಿಸಿಗಾಗಿ ಹೆಚ್.ಆರ್.ಎಂ.ಎಸ್. ತಂತ್ರಾಂಶ ಅಭಿವೃದ್ದಿಪಡಿಸಲಾಗಿದ್ದು, ಇನ್ನು ಮುಂದೆ ಹಾಜರಾತಿ ಹಾಗೂ ರಜೆ ತೆಗೆದುಕೊಳ್ಳುವ ವ್ಯವಸ್ಥೆಯನ್ನು ಹೆಚ್.ಆರ್.ಎಂ.ಎಸ್. ಮೂಲಕ ನಿರ್ವಹಿಸಲಾಗುವುದು.
ಆರಂಭಿಕ ಹಂತದಲ್ಲಿ ಬೆಂಗಳೂರು, ದಾವಣಗೆರೆ, ಶಿವಮೊಗ್ಗ, ಹಾಸನ, ಕೇಂದ್ರೀಯ ವಿಭಾಗ ವ್ಯಾಪ್ತಿಯಲ್ಲಿ ಈ ವ್ಯವಸ್ಥೆ ಕಾರ್ಯನಿರ್ವಹಿಸಲಿದ್ದು, ನಂತರ ಅದನ್ನು ಆಧರಿಸಿ ಉಳಿದ 11 ವಿಭಾಗಗಳಿಗೆ ವಿಸ್ತರಿಸಲು ನಿರ್ಧರಿಸಲಾಗಿದೆ. ಮಾರ್ಚ್ 1ರಿಂದ ಐದು ವಿಭಾಗ ವ್ಯಾಪ್ತಿಯಲ್ಲಿ ಹೆಚ್.ಆರ್.ಎಂ.ಎಸ್. ಕಡ್ಡಾಯಗೊಳಿಸಲಾಗಿದೆ. ಪ್ರತಿದಿನದ ಹಾಜರಾತಿಯನ್ನು ಸಿಬ್ಬಂದಿ ಹೆಚ್.ಆರ್.ಎಂ.ಎಸ್. ತಂತ್ರಾಂಶದಲ್ಲಿ ನಮೂದಿಸಬೇಕಿದೆ. ತಮಗೆ ಯಾವ ದಿನ ರಜೆ ಬೇಕು ಎಂಬುದನ್ನು ಕೂಡ ನಮೂದಿಸಬೇಕಿದ್ದು, ಇದನ್ನು ಆಧರಿಸಿ ವಿಭಾಗ ಮತ್ತು ಘಟಕ ಮುಖ್ಯಸ್ಥರು ಸಿಬ್ಬಂದಿ ರಜೆ ಹಂಚಿಕೆ ಮಾಡಲಿದ್ದಾರೆ.