ರಾಜಸ್ಥಾನದ ಗ್ರಾಮೀಣ ಭಾಗದ್ದೆಂದು ಹೇಳಲಾದ ಆಘಾತಕಾರಿ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸಂಚಲನ ಮೂಡಿಸುತ್ತಿದೆ. 12 ವರ್ಷದ ಬಾಲಕಿಯೊಬ್ಬಳ ಮೂಗಿನಿಂದ ವೈದ್ಯರು ಬರೋಬ್ಬರಿ 3 ಇಂಚು ಉದ್ದದ ಬದುಕಿರುವ ಜಿಗಣೆಯನ್ನು (Leech) ಹೊರತೆಗೆಯುತ್ತಿರುವ ದೃಶ್ಯಗಳನ್ನು ಕಂಡು ನೆಟ್ಟಿಗರು ಬೆಚ್ಚಿಬಿದ್ದಿದ್ದಾರೆ.
ಘಟನೆಯ ವಿವರ: ವರದಿಗಳ ಪ್ರಕಾರ, ಈ ಬಾಲಕಿ ಕಳೆದ ಎರಡು ತಿಂಗಳಿಂದ ಮೂಗಿನ ನೋವು ಮತ್ತು ಪದೇ ಪದೇ ರಕ್ತಸ್ರಾವದಿಂದ ಬಳಲುತ್ತಿದ್ದಳು. ಯಾವುದೇ ಪೆಟ್ಟು ಬೀಳದಿದ್ದರೂ ರಕ್ತ ಬರುತ್ತಿರುವುದನ್ನು ಕಂಡು ಪೋಷಕರು ಕಂಗಾಲಾಗಿದ್ದರು. ಆರಂಭದಲ್ಲಿ ಇದನ್ನು ಸಾಮಾನ್ಯ ಸಮಸ್ಯೆ ಎಂದು ನಿರ್ಲಕ್ಷಿಸಿದ್ದ ಕುಟುಂಬಸ್ಥರು, ನೋವು ಉಲ್ಬಣಗೊಂಡಾಗ ಆಸ್ಪತ್ರೆಗೆ ದಾಖಲಿಸಿದ್ದರು.
ವೈದ್ಯರು ಪರೀಕ್ಷಿಸಿದಾಗ ಬಾಲಕಿಯ ಬಲ ಹೊಳ್ಳೆಯಲ್ಲಿ ಜಿಗಣೆಯೊಂದು ವಾಸವಾಗಿರುವುದು ಪತ್ತೆಯಾಗಿದೆ. ವಿಡಿಯೋದಲ್ಲಿ ಕಾಣುವಂತೆ, ವೈದ್ಯರು ಬಾಲಕಿಯ ಮೂಗಿಗೆ ನೀರನ್ನು ಹಾಕಿದಾಗ ಜಿಗಣೆಯು ಹೊರಬರಲು ಪ್ರಯತ್ನಿಸಿದೆ, ತಕ್ಷಣ ವೈದ್ಯರು ಫೋರ್ಸ್‌ಪ್ಸ್ ಬಳಸಿ ಜೀವಂತ ಜಿಗಣೆಯನ್ನು ಹೊರತೆಗೆದಿದ್ದಾರೆ.
ಮೂಗಿನೊಳಗೆ ಜಿಗಣೆ ಸೇರಿದ್ದು ಹೇಗೆ? ಬಾಲಕಿಯು ಪ್ರತಿದಿನ ಕಾಡು ಮತ್ತು ಗದ್ದೆಗಳಲ್ಲಿ ಜಾನುವಾರುಗಳನ್ನು ಮೇಯಿಸಲು ಹೋಗುತ್ತಿದ್ದಳು. ಅಶುದ್ಧವಾದ ನೀರಿನ ಸಂಪರ್ಕಕ್ಕೆ ಬಂದಾಗ ಅಥವಾ ಅಂತಹ ನೀರನ್ನು ಕುಡಿದಾಗ ಜಿಗಣೆಯ ಮೊಟ್ಟೆಗಳು ಮೂಗಿನೊಳಗೆ ಸೇರಿರಬಹುದು ಎಂದು ಶಂಕಿಸಲಾಗಿದೆ. ಈ ಮೊಟ್ಟೆಗಳು ಒಳಗೆ ಬೆಳೆದು, ರಕ್ತವನ್ನು ಹೀರಲು ಆರಂಭಿಸಿದಾಗ ನೋವು ಮತ್ತು ರಕ್ತಸ್ರಾವ ಶುರುವಾಗುತ್ತದೆ. ಸಕಾಲಕ್ಕೆ ಚಿಕಿತ್ಸೆ ನೀಡದಿದ್ದರೆ ಇದು ಗಂಭೀರ ಸೋಂಕಿಗೆ ಕಾರಣವಾಗಬಹುದು ಎಂದು ವೈದ್ಯರು ಎಚ್ಚರಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ವೈರಲ್ ಆಗುತ್ತಿದ್ದಂತೆ, ಜನರು ಇದನ್ನು ‘ನ್ಯೂ ಫಿಯರ್ ಅನ್ಲಾಕ್ಡ್’ (New Fear Unlocked) ಅಂದರೆ ಹೊಸ ಭಯವೊಂದು ಸೃಷ್ಟಿಯಾಗಿದೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ.

