HomeKarnataka'ನ್ಯಾಯದಾನಕ್ಕೆ ತಂತ್ರಜ್ಞಾನ ಪೂರಕವಾಗಲಿ, ಆದರೆ ಮನುಷ್ಯನ ಆತ್ಮಸಾಕ್ಷಿಗೆ ಪರ್ಯಾಯವಲ್ಲ' : CM ಸಿದ್ದರಾಮಯ್ಯ

‘ನ್ಯಾಯದಾನಕ್ಕೆ ತಂತ್ರಜ್ಞಾನ ಪೂರಕವಾಗಲಿ, ಆದರೆ ಮನುಷ್ಯನ ಆತ್ಮಸಾಕ್ಷಿಗೆ ಪರ್ಯಾಯವಲ್ಲ’ : CM ಸಿದ್ದರಾಮಯ್ಯ

ನಾವು ಇಂದು ಕೃತಕ ಬುದ್ಧಿಮತ್ತೆಯ ಕಾಲಘಟ್ಟಕ್ಕೆ ಅಡಿಯಿಟ್ಟಿದ್ದೇವೆ. ಕೃತಕ ಬುದ್ಧಿಮತ್ತೆಯ ತಾಂತ್ರಿಕ ಬದಲಾವಣೆಯಿಂದಾಗಿ ಪ್ರಪಂಚದಾದ್ಯಂತ ಸಂಸ್ಥೆಗಳು ಮರುರೂಪಿಸಲ್ಪಡುತ್ತಿರುವ ಪ್ರಸ್ತುತ ಸಮಯದಲ್ಲಿ, “ಕೃತಕ ಬುದ್ಧಿಮತ್ತೆಯ ಯುಗದಲ್ಲಿ ನ್ಯಾಯಾಂಗವನ್ನು ಮರುರೂಪಿಸುವುದು” ಎಂಬ ವಿಷಯದ ಕುರಿತ ಈ ಸಮ್ಮೇಳನವು ಬಹಳ ಮಹತ್ವದ್ದಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ಬೆಂಗಳೂರಿನ ಜಿಕೆವಿಕೆಯ ಡಾ. ಬಾಬು ರಾಜೇಂದ್ರ ಪ್ರಸಾದ್ ಅಂತರರಾಷ್ಟ್ರೀಯ ಸಭಾಂಗಣದಲ್ಲಿ ನಡೆದ ನ್ಯಾಯಾಂಗ ಅಧಿಕಾರಿಗಳ 22ನೇ ದ್ವೈವಾರ್ಷಿಕ ರಾಜಮಟ್ಟದ ಸಮ್ಮೇಳನದಲ್ಲಿ ಸಿಎಂ ಸಿದ್ದರಾಮಯ್ಯ ಮಾತನಾಡಿದರು.

ಪ್ರಸಕ್ತ ಕಾಲಘಟ್ಟದಲ್ಲಿ ಕಾನೂನು ಮತ್ತು ತಂತ್ರಜ್ಞಾನವು ಪ್ರತ್ಯೇಕ ಕ್ಷೇತ್ರಗಳಾಗಿ ಉಳಿದಿಲ್ಲ. ಈಗ ಮುಂದುವರೆದು ನ್ಯಾಯಾಂಗ ಕ್ಷೇತ್ರಕ್ಕೆ ಕೃತಕ ಬುದ್ಧಿಮತ್ತೆಯ ಪ್ರವೇಶವಾಗಿದೆ. ಅದರಿಂದಾಗಿ ಆಡಳಿತ, ಹಕ್ಕುಗಳು ಮತ್ತು ನ್ಯಾಯದ ಸ್ವರೂಪವನ್ನು ರೂಪಿಸುವ ಪರಸ್ಪರ ಸಂಬಂಧ ಹೊಂದಿರುವ ಶಕ್ತಿಗಳ ನಡುವೆ ನಿರ್ಣಾಯಕ ಹಂತದಲ್ಲಿ ನಾವು ಇಂದು ನಿಂತಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ನಾವು ಸಾಕ್ಷಿಗಳನ್ನು ಹೇಗೆ ಅರ್ಥೈಸಿಕೊಳ್ಳುತ್ತೇವೆ, ಸತ್ಯಗಳನ್ನು ಹೇಗೆ ಅರ್ಥಮಾಡಿಕೊಳ್ಳುತ್ತೇವೆ ಮತ್ತು ನಿರ್ಧಾರಗಳನ್ನು ಹೇಗೆ ತಲುಪುತ್ತೇವೆ ಎಂಬುದನ್ನು ಪ್ರಶ್ನಿಸುವ ಪರಿವರ್ತನಾ ಶಕ್ತಿಯಾಗಿ ಕೃತಕ ಬುದ್ಧಿಮತ್ತೆ ಹೊರಹೊಮ್ಮುತ್ತಿದೆ. ಕೃತಕ ಬುದ್ಧಿಮತ್ತೆಯ ಸಹಾಯದಿಂದ ತ್ವರಿತ ಕಾನೂನು ಸಂಶೋಧನೆ, ಪ್ರಕರಣಗಳ ಇತ್ಯರ್ಥಕ್ಕೆ ಸಂಬಂಧಿಸಿದಂತೆ ಸುಧಾರಿತ ನಿರ್ವಹಣೆ ವ್ಯವಸ್ಥೆಗಳ ಮೂಲಕ ಬಾಕಿ ಇರುವ ಪ್ರಕರಣಗಳನ್ನು ಕಡಿಮೆ ಮಾಡುವ ಸಾಧ್ಯತೆ ಇದೆ.ಆದರೂ, ಇದೇ ಸಮಯದಲ್ಲಿ ನ್ಯಾಯಾಂಗ ವ್ಯವಸ್ಥೆಯಲ್ಲಿ ಕೃತಕ ಬುದ್ಧಿಮತ್ತೆಯನ್ನು ಅಳವಡಿಸಿಕೊಳ್ಳುವುದರ ಕುರಿತು ಆಳವಾದ ಕಳವಳಗಳು ಮೂಡದೇ ಇರಲಾರದು.

ಅಲ್ಗಾರಿದಮಿಕ್ ಪಕ್ಷಪಾತವು ಕಾನೂನಿನ ಮುಂದೆ ಸಮಾನತೆಯ ಖಾತರಿಯನ್ನು ಹಾಳುಮಾಡಬಹುದು. ಅಪಾರದರ್ಶಕ ವ್ಯವಸ್ಥೆಗಳು ನಮ್ಮ ನ್ಯಾಯಾಂಗ ವ್ಯವಸ್ಥೆಯ ತಾರ್ಕಿಕ ನಿರ್ಧಾರಗಳ ಸಿದ್ಧಾಂತವನ್ನು ದುರ್ಬಲಗೊಳಿಸುವ ಆತಂಕವನ್ನು ಅಲ್ಲಗಳೆಯುವಂತಿಲ್ಲ.ನಮ್ಮ ಪ್ರಜಾಪ್ರಭುತ್ವದ ಮೂಲಾಧಾರವಾಗಿರುವ ನ್ಯಾಯಾಂಗ ಸ್ವಾತಂತ್ರ್ಯವನ್ನು ಬಾಹ್ಯ ಒತ್ತಡಗಳಿಂದ ಮಾತ್ರವಲ್ಲದೆ ಸೂಕ್ಷ್ಮ ತಾಂತ್ರಿಕ ಅವಲಂಬನೆಯಿಂದಲೂ ಸಂರಕ್ಷಿಸುವ ಹೊಣೆಗಾರಿಕೆ ನಮ್ಮ ಮೇಲಿದೆ.

ನ್ಯಾಯಾಧೀಶರ ಅಧಿಕಾರವನ್ನು ಎಂದಿಗೂ ಅಲ್ಗಾರಿದಮ್‌ನ ಅಧಿಕಾರವು ಮರೆಮಾಚಬಾರದು. ಸಾಂವಿಧಾನಿಕ ನೈತಿಕತೆಯು ನೈಸರ್ಗಿಕ ಭಾವನೆಯಲ್ಲ, ಅದನ್ನು ಬೆಳೆಸಿಕೊಳ್ಳಬೇಕು ಎಂದು ಡಾ. ಬಿ.ಆರ್. ಅಂಬೇಡ್ಕರ್ ನಮಗೆ ನೆನಪಿಸಿದ್ದರು. ಸಾಂವಿಧಾನಿಕ ಮೌಲ್ಯಗಳು ತಾಂತ್ರಿಕ ಅಳವಡಿಕೆಗೆ ಮಾರ್ಗದರ್ಶನ ನೀಡುತ್ತವೆಯೇ ಹೊರತು ಅದೇ ಪರ್ಯಾಯವಲ್ಲ ಎಂಬುದನ್ನು ಮನಗಾಣಬೇಕು.

ಕೃತಕ ಬುದ್ಧಿಮತ್ತೆಯ ಸಾಕ್ಷಿ, ಪುರಾವೆಗಳು ನಮ್ಮ ಕಾನೂನು ವ್ಯವಸ್ಥೆಗೆ ಹೊಸ ಸವಾಲುಗಳನ್ನು ಒಡ್ಡುತ್ತಿವೆ.ಡೀಪ್‌ಫೇಕ್‌ಗಳು, ಸಂಶ್ಲೇಷಿತ ಡೇಟಾ, ಪುರಾವೆಗಳ ದೃಢೀಕರಣ ಸವಾಲಾಗಿ ಪರಿಣಮಿಸಿದೆ.ಡಿಜಿಟಲ್ ಯುಗದಲ್ಲಿ ವಿಶ್ವಾಸಾರ್ಹ ಸಾಕ್ಷಿಗಳು ಯಾವುವು ಎಂಬುದನ್ನು ನಿರ್ಧರಿಸಲು ನ್ಯಾಯಾಲಯಗಳ ಅಗತ್ಯ ಹೆಚ್ಚುತ್ತಿದೆ. ಹಾಗೆ ಮಾಡುವಾಗ, ಸತ್ಯವು ಕೇವಲ ತಾಂತ್ರಿಕ ಅತ್ಯಾಧುನಿಕತೆಯಲ್ಲಿ ಅಲ್ಲ, ಪರಿಶೀಲನೆ ಮತ್ತು ಸಮಗ್ರತೆಯ ಮೇಲೆ ಆಧಾರಿತವಾಗಿದೆ ಎಂದು ನಾವು ಖಚಿತಪಡಿಸಿಕೊಳ್ಳಬೇಕು.ಭಾರತದಲ್ಲಿ ಕೃತಕ ಬುದ್ಧಿಮತ್ತೆಗಾಗಿ ನಿಯಂತ್ರಕ ಚೌಕಟ್ಟನ್ನು ರೂಪಿಸುವಲ್ಲಿ ನ್ಯಾಯಾಂಗವು ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ಸರಿಯಾದ ಪ್ರಕ್ರಿಯೆ, ಅನುಪಾತ ಮತ್ತು ಗೌಪ್ಯತೆಯ ಹಕ್ಕಿನ

ಸಂರಕ್ಷಣೆಯಂತಹ ಸುಸ್ಥಾಪಿತ ಸಾಂವಿಧಾನಿಕ ಸಿದ್ಧಾಂತಗಳ ಮೂಲಕ ಕೃತಕ ಬುದ್ಧಿಮತ್ತೆಯ ಪರಿಧಿಯನ್ನು ನಿರ್ಧರಿಸಬೇಕಿದೆ. ನ್ಯಾಯಾಂಗವು ತಂತ್ರಜ್ಞಾನದ ಬಳಕೆದಾರ ಮಾತ್ರವಲ್ಲದೆ ಸಮಾಜದಲ್ಲಿ ಅದರ ನಿಯೋಜನೆಗೆ ಮಾರ್ಗದರ್ಶನ ನೀಡುವ ನೈತಿಕ ದಿಕ್ಸೂಚಿಯೂ ಆಗಿದೆ.ನ್ಯಾಯಾಂಗ ಪ್ರಕ್ರಿಯೆಗಳನ್ನು ಬಲಪಡಿಸಲು ತಂತ್ರಜ್ಞಾನವು ಅರ್ಥಪೂರ್ಣ ಅವಕಾಶಗಳನ್ನು ನೀಡುತ್ತದೆ. ಕೃತಕ ಬುದ್ಧಿಮತ್ತೆಯ ನೆರವಿನಿಂದ ಕಾನೂನು ನಿರ್ವಹಣಾ ವ್ಯವಸ್ಥೆಯನ್ನು ಸುಧಾರಿಸಬಹುದು, ಸವಾಲಿನ ಪ್ರಕರಣಗಳ ನಿರ್ವಹಣೆಯನ್ನು ಸುಗಮಗೊಳಿಸಬಹುದು, ಆಗಬಹುದಾದ ವಿಳಂಬವನ್ನು ತಪ್ಪಿಸಬಹುದು. ಆದರೆ ಈ ಎಲ್ಲಾ ನಾವಿನ್ಯತೆಗಳನ್ನು ಜಾಗರೂಕತೆಯಿಂದ ಅಳವಡಿಸಿಕೊಳ್ಳಬೇಕು ಎಂಬುದನ್ನು ಮರೆಯಬಾರದು.

ಈ ರೂಪಾಂತರದಲ್ಲಿ, ನಮ್ಮ ನ್ಯಾಯಾಂಗ ಸಂಸ್ಥೆಗಳ ಸಾಮರ್ಥ್ಯವು ನಿರ್ಣಾಯಕವಾಗುತ್ತದೆ. ಭವಿಷ್ಯದ ನ್ಯಾಯಾಧೀಶರು ಕಾನೂನು ಕುಶಾಗ್ರಮತಿಗಳುಮಾತ್ರವಲ್ಲದೆ ತಾಂತ್ರಿಕ ವ್ಯವಸ್ಥೆಗಳ ಸ್ಪಷ್ಟ ತಿಳುವಳಿಕೆಯೊಂದಿಗೆ ಸಜ್ಜಾಗಬೇಕಿರುವ ಅವಶ್ಯಕತೆ ಹೆಚ್ಚಿದೆ.ಸಾಮಾಜಿಕ ನ್ಯಾಯ ಮತ್ತು ಸಮಾನತೆಯ ಮೂಲಭೂತ ತತ್ವಗಳನ್ನು ಕೃತಕ ಬುದ್ಧಿಮತ್ತೆ ಹೇಗೆ ಸಂಧಿಸಲಿದೆ ಎನ್ನುವುದು ನಮ್ಮ ಮುಂದಿರುವ ಬಹು ಮುಖ್ಯ ಪ್ರಶ್ನೆಯಾಗಿದೆ. ಸೂಕ್ತ ರೀತಿಯಲ್ಲಿ ವಿನ್ಯಾಸಗೊಳಿಸಿ ನಿಯಂತ್ರಿಸದಿದ್ದರೆ, ಎ ಐ ವ್ಯವಸ್ಥೆಗಳು ಈಗಾಗಲೇ ಅಸ್ತಿತ್ವದಲ್ಲಿರುವ ಸಾಮಾಜಿಕ ಅಸಮಾನತೆಗಳನ್ನು ಪುನರಾವರ್ತಿಸಬಹುದು ಹಾಗೂ ವೃದ್ಧಿಸಲೂ ಸಾಧ್ಯವಿದೆ.

ಜಾತಿ, ವರ್ಗ ಮತ್ತು ಪ್ರವೇಶಕ್ಕೆ ಸಂಬಂಧಿಸಿದಂತೆ ಇರುವ ಪಕ್ಷಪಾತವನ್ನು ಭದ್ರಪಡಿಸುವ ಮೂಲಕ ಒಂದು ರೀತಿಯ ಡಿಜಿಟಲ್ ಸೋಶಿಯಲ್ ಡಾರ್ವಿನಿಸಂ ಸೃಷ್ಟಿಸಬಹುದು. ಈಗಾಗಲೇ ಅಸ್ತಿತ್ವದಲ್ಲಿರುವ ಅಸಮಾನತೆಗಳನ್ನು ಆಲ್ಗೊರಿದಂ ಮೂಲಕ ಬಲಪಡಿಸಿ, ನ್ಯಾಯದ ಬುನಾದಿಯನ್ನೇ ದುರ್ಬಲಗೊಳಿಸಲಿದೆ. ಬುದ್ಧನ ಕರುಣೆ ಮತ್ತು ಬಸವಣ್ಣನವರ ಸಮಾನತೆಯ ದೃಷ್ಟಿಯ ನೈತಿಕ ನೆಲೆಗಟ್ಟಿನಿಂದ ಸ್ಪೂರ್ತಿಗೊಂಡಿರುವ ನಮ್ಮ ನ್ಯಾಯದ ಅನ್ವೇಷಣೆ ಮಾನವೀಯ ಮತ್ತು ಸಾಮಾಜಿಕವಾಗಿ ಪರಿವರ್ತನೆಯನ್ನು ತರುವಂಥದ್ದಾಗಿರಬೇಕು. ರಾಜಕೀಯ ಪ್ರಜಾಪ್ರಭುತ್ವವು ಸಾಮಾಜಿಕ ಪ್ರಜಾಪ್ರಭುತ್ವವಿಲ್ಲದೆ ದೀರ್ಘಕಾಲ ಬಾಳಲಾರದು ಎಂದು ಡಾ. ಬಿ.ಆರ್. ಅಂಬೇಡ್ಕರ್ ನಮ್ಮನ್ನು ಎಚ್ಚರಿಸಿದ್ದರು.

ಈ ಹೊಸ ಗಡಿಗಳನ್ನು ನಾವು ಅನ್ವೇಷಿಸುತ್ತಿರುವಾಗಲೇ, ನ್ಯಾಯಾಂಗ ಎದುರಿಸುವ ಸವಾಲುಗಳ ಬಗ್ಗೆ ನಾವು ಎಚ್ಚರವಹಿಸಬೇಕಿದೆ. ಬಾಕಿ ಉಳಿದ ಪ್ರಕರಣಗಳು ಗಂಭೀರ ಸಮಸ್ಯೆಯಾಗಿ ಉಳಿದಿದ್ದು, ಸಮಯಕ್ಕೆ ಸರಿಯಾಗಿ ನ್ಯಾಯ ಒದಗಿಸುವುದರ ಮೇಲೆ ಇದು ಪರಿಣಾಮ ಬೀರುತ್ತದೆ. ತಂತ್ರಜ್ಞಾನ ಈ ಸಮಸ್ಯೆಯನ್ನು ಪರಿಹರಿಸಲು ಸಾಧನವನ್ನು ನೀಡುತ್ತದೆಯಾದರೂ, ಅದಕ್ಕೆ ಪೂರಕವಾಗಿ ಮೂಲಭೂತ ಸೌಕರ್ಯಗಳ ಬಲಪಡಿಸುವಿಕೆ, ನ್ಯಾಯಾಂಗದ ಸಾಮರ್ಥ್ಯ ವರ್ಧನೆ, ಹಾಗೂ ಆಧುನಿಕ ನ್ಯಾಯಾಲಯ ಪ್ರಕ್ರಿಯೆಗಳನ್ನು ಜಾರಿಗೆ ತರಬೇಕು.

ರಾಜ್ಯದ ಉಚ್ಚ ನ್ಯಾಯಾಲಯಕ್ಕೆ ಪ್ರವೇಶವನ್ನು ಸುಧಾರಿಸಬೇಕೆನ್ನುವ ಬಲವಾದ ಅಗತ್ಯವಿದೆ. ದಕ್ಷಿಣ ಭಾರತದಲ್ಲಿ ಸರ್ವೋಚ್ಛ ನ್ಯಾಯಾಲಯದಪೀಠ ಸ್ಥಾಪನೆಯಾದರೆ ನ್ಯಾಯವನ್ನು ಖಾತ್ರಿಪಡಿಸುವ ನಿಟ್ಟಿನಲ್ಲಿ ಬಹು ದೊಡ್ಡ ಹೆಜ್ಜೆಯನ್ನು ಇರಿಸಿದಂತಾಗುತ್ತದೆ.ಈ ಪಯಣದಲ್ಲಿ ನ್ಯಾಯಾಂಗಕ್ಕೆ ಅದರ ಸ್ವಾತಂತ್ರ್ಯವನ್ನು ಸಂಪೂರ್ಣವಾಗಿ ಗೌರವಿಸುತ್ತಲೇ ಅದಕ್ಕೆ ಬೆಂಬಲ ನೀಡುವುದು, ಸಕ್ರಿಯಗೊಳಿಸುವುದು ಮತ್ತು ಬಲಪಡಿಸುವುದು ಆಡಳಿತದ ಪಾತ್ರ.ನ್ಯಾಯಾಂಗ ಮೂಲಭೂತ ಸೌಕರ್ಯ, ಡಿಜಿಟಲ್ ಪರಿವರ್ತನೆ, ನಾವೀನ್ಯತೆ ಹಾಗೂ ನ್ಯಾಯದಾನವು ಒಟ್ಟಾಗಿ ಪ್ರಗತಿ ಹೊಂದಲು ಸೂಕ್ತವಾದ ಪರಿಸರ ವ್ಯವಸ್ಥೆಯನ್ನು ಸೃಷ್ಟಿಸಲು ಕರ್ನಾಟಕ ಸರ್ಕಾರವು ಬದ್ಧವಾಗಿದೆ. ನ್ಯಾಯದಾನ ವ್ಯವಸ್ಥೆಗೆ ವೇಗ ಮತ್ತು ಪ್ರವೇಶವನ್ನು ಒದಗಿಸಲು ಕರ್ನಾಟಕದಲ್ಲಿ ನಾವು ಖಚಿತ ಸುಧಾರಣೆಗಳನ್ನು ಕೈಗೊಂಡಿದ್ದೇವೆ. ಕಾಲಬದ್ಧ ಪ್ರಕರಣ ನಿರ್ವಹಣೆ, ಸರಹದ್ದುಗಳ ಪುನರ್ ರಚನೆಯ ಮೂಲಕ ಉಚ್ಚ ನ್ಯಾಯಾಲಯಗಳ ಹೊರೆಯನ್ನು ತಗ್ಗಿಸುವುದು

ಹಾಗೂ ಸರ್ಕಾರಿ ವ್ಯಾಜ್ಯ ಅಭ್ಯಾಸಗಳನ್ನು ಬಲಪಡಿಸಲಾಗುತ್ತಿದೆ. ಕಾನೂನು ನೆರವನ್ನು ವಿಸ್ತರಿಸುತ್ತಲೇ ಹೆಚ್ಚು ನ್ಯಾಯಾಲಯಗಳ ಸ್ಥಾಪನೆ ಮಾಡುವತ್ತ ಗಮನ ನೀಡಲಾಗಿದೆ. ಶಾಸಕಾಂಗದ ವ್ಯಾಪಕ ಶ್ರಮ ಜವಾಬ್ದಾರಿಯುತ, ದಕ್ಷ ಮತ್ತು ಜನಕೇಂದ್ರಿಯ ನ್ಯಾಯ ವ್ಯವಸ್ಥೆಯನ್ನು ನಿರ್ಮಿಸಲು ನಮ್ಮ ಬದ್ಧತೆಯನ್ನು ಎತ್ತಿಹಿಡಿದಿದೆ.ಸಧೃಡ ನ್ಯಾಯಾಂಗ ಮೂಲಭೂತ ಸೌಕರ್ಯ, ಖಾಲಿ ಹುದ್ದೆಗಳನ್ನು ಸಕಾಲಕ್ಕೆ ಭರ್ತಿ ಮಾಡುವುದು, ಸ್ಥಳೀಯ ಭಾಷೆಗಳಲ್ಲಿ ತೀರ್ಪು ಒದಗಿಸಲು ವ್ಯವಸ್ಥೆ, ಹಾಗೂ ದಕ್ಷವಾಗಿ ನ್ಯಾಯ ಒದಗಿಸಲು ಹೆಚ್ಚುವರಿ ವಿಶೇಷ ನ್ಯಾಯಾಲಯಗಳ ಸ್ಥಾಪನೆ ಮಾಡುವತ್ತ ನಮ್ಮ ಸರ್ಕಾರ ಗಮನ ಹರಿಸಲಿದೆ.

ನ್ಯಾಯ ದಾನ ವ್ಯವಸ್ಥೆಯನ್ನು ಬಲಪಡಿಸಲು ಆಡಳಿತವು ಪಾಲುದಾರನಾಗಿ ಕೆಲಸ ಮಾಡಬೇಕೇ ಹೊರತು ಅದನ್ನು ಒತ್ತುವರಿ ಮಾಡುವಂತಾಗಬಾರದು.ನ್ಯಾಯ ಎನ್ನುವುದು ಕೇವಲ ಹೊಂದುವುದಲ್ಲ, ಬದಲಿಗೆ ಎತ್ತಿ ಹಿಡಿಯಬೇಕಾದ ನೈತಿಕ ಜವಾಬ್ದಾರಿ ಎಂಬ ಮೂಲಭೂತ ಸತ್ಯವನ್ನು ನಾವು ಎಂದಿಗೂ ಮರೆಯಬಾರದು.ಯಾವುದೇ ಆಲ್ಗೊರಿದಂ ಸಹಾನುಭೂತಿ, ಅನುಭವಗಳ ಜ್ಞಾನ ಅಥವಾ ನಿರ್ಣಯಗಳನ್ನು ಕೈಗೊಳ್ಳುವಾಗಿನ ನೈತಿಕ ತರ್ಕವನ್ನು ಬದಲಾಯಿಸಲು ಸಾಧ್ಯವಿಲ್ಲ. ತಂತ್ರಜ್ಞಾನ ನೆರವು ಒದಗಿಸಬಹುದು, ಆದರೆ ನ್ಯಾಯದ ಹೃದಯವಾದ ಮಾನವ ಆತ್ಮಸಾಕ್ಷಿಯನ್ನು ಬದಲಾಯಿಸಲು ಸಾಧ್ಯವಿಲ್ಲ.

ಈ ಸಮ್ಮೇಳನವು ನ್ಯಾಯಾಂಗದ ಭವಿಷ್ಯದ ಬಗ್ಗೆ ಯೋಚಿಸಲು ಮಾತ್ರವಲ್ಲದೆ ಸ್ಪಷ್ಟತೆ, ದೂರದೃಷಿ ಹಾಗೂ ಜವಾಬ್ದಾರಿಯಿಂದ ರೂಪಿಸಲು ಅವಕಾಶ ಒದಗಿಸಿದೆ.ತಾಂತ್ರಿಕವಾಗಿ ಮುಂದುವರೆದ, ಸಾಂವಿಧಾನಿಕ ತಳಹದಿಯನ್ನು ಹೊಂದಿದ ಮತ್ತು ಸಾಮಾಜಿಕವಾಗಿ ನ್ಯಾಯಯುತವಾದ ನ್ಯಾಯಾಂಗ ವ್ಯವಸ್ಥೆಯನ್ನು ನಿರ್ಮಿಸಲು ಇಲ್ಲಿನ ಚರ್ಚೆ ಅರ್ಥಪೂರ್ಣವಾದ ಕೊಡುಗೆ ನೀಡಲಿದೆ ಎಂದು ನಂಬಿದ್ದೇನೆ ಎಂದರು.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular