HomeLatest Newsಹುಬ್ಬಳ್ಳಿ ವಿಮಾನ ನಿಲ್ದಾಣ ಪ್ರದೇಶದಲ್ಲಿ ಆತಂಕ ಮೂಡಿಸಿದ ಚಿರತೆ

ಹುಬ್ಬಳ್ಳಿ ವಿಮಾನ ನಿಲ್ದಾಣ ಪ್ರದೇಶದಲ್ಲಿ ಆತಂಕ ಮೂಡಿಸಿದ ಚಿರತೆ

ಚಿರತೆ, ಹುಲಿ, ಆನೆ ಹೀಗೆ ಕರ್ನಾಟಕದಲ್ಲಿ ಮಾನವ ಮತ್ತು ಪ್ರಾಣಿಗಳ ಸಂಘರ್ಷ ಪ್ರಕರಣಗಳು ಪ್ರತಿನಿತ್ಯ ವರದಿಯಾಗುತ್ತಿದೆ. ಈಗ ಹುಬ್ಬಳ್ಳಿ ವಿಮಾನ ನಿಲ್ದಾಣ ಹಾಗೂ ಗಾಮನಗಟ್ಟಿ ಕೈಗಾರಿಕಾ ಪ್ರದೇಶದಲ್ಲಿ ಚಿರತೆ ಆತಂಕ ಮೂಡಿಸಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳವನ್ನು ಪರಿಶೀಲನೆ ನಡೆಸಿದ್ದು, ಜನರಿಗೆ ಮುನ್ನೆಚ್ಚರಿಕೆ ಸಂದೇಶವನ್ನು ಸಹ ನೀಡಲಾಗಿದೆ.

ಹುಬ್ಬಳ್ಳಿಯ ಗಾಮನಗಟ್ಟಿ ಕೈಗಾರಿಕಾ ಪ್ರದೇಶ ಹಾಗೂ ವಿಮಾನ ನಿಲ್ದಾಣದ ಸುತ್ತಮುತ್ತಲಿನ ಪ್ರದೇಶದಲ್ಲಿ ಚಿರತೆ ಕಾಣಿಸಿಕೊಂಡ ಬಗ್ಗೆ ಮಾಹಿತಿ ಸಿಕ್ಕಿದೆ. ಡಿಸೆಂಬರ್ 24ರಂದು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ವಸಂತರೆಡ್ಡಿ ಕೆ.ವಿ., ಉಪ ಅರಣ್ಯ ಸಂರಕ್ಷಣಾಧಿಕಾರಿ ವಿವೇಕ ಕವರಿ, ಹುಬ್ಬಳ್ಳಿ ವಿಮಾನ ನಿಲ್ದಾಣದ ನಿರ್ದೇಶಕ ರೂಪೇಶ ಕುಮಾರ, ಸಿಐಎಸ್‌ಎಫ್‌ ಸಿಬ್ಬಂದಿಗಳು ಮತ್ತು ಅರಣ್ಯ ಇಲಾಖೆಯ ಸಿಬ್ಬಂದಿಗಳು ಸ್ಥಳವನ್ನು ಪರಿಶೀಲನೆ ಮಾಡಿದರು.

ಅಧಿಕಾರಿಗಳ ಜಂಟಿ ತಂಡ ಹುಬ್ಬಳ್ಳಿಯ ಗಾಮನಗಟ್ಟಿ ಹಾಗೂ ವಿಮಾನ ನಿಲ್ದಾಣದ ಸುತ್ತಮುತ್ತಲಿನ ಪ್ರದೇಶದ ಸ್ಥಳ ಪರಿಶೀಲನೆ ಮಾಡಿದೆ. ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಚಿರತೆಯನ್ನು ಸೆರೆಹಿಡಿಯಲು ಈಗಾಗಲೇ ಬೋನ್ ಇಡಲು ವ್ಯವಸ್ಥೆ ಮಾಡಲಾಗಿದೆ ಹಾಗೂ ಚಿರತೆಯ ಚಲನವಲನ ಗುರುತಿಸಲು ಕ್ಯಾಮೆರಾ ಟ್ರಾಪ್‌ಗಳನ್ನು ಸಹ ಅಳವಡಿಸಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಅರಣ್ಯ ಇಲಾಖೆ ಸಿಬ್ಬಂದಿಗಳು ಹಗಲು ಮತ್ತು ರಾತ್ರಿ ಗಸ್ತು ತಿರುಗುತ್ತಿದ್ದಾರೆ. ಆದ್ದರಿಂದ ಸಾರ್ವಜನಿಕರ ಹಿತದೃಷ್ಟಿಯಿಂದ ಹಾಗೂ ಮುಂಜಾಗ್ರತಾ ಕ್ರಮವಾಗಿ ಚಿರತೆ ಸಿಗುವವರೆಗೂ ಸ್ಥಳದ ಸುತ್ತಮುತ್ತ ಸಾರ್ವಜನಿಕರು ಹಾಗೂ ವಿಮಾನ ನಿಲ್ದಾಣದ ಸಿಬ್ಬಂದಿಗಳು ಸಂಜೆ 7 ಗಂಟೆಯಿಂದ ಬೆಳಗ್ಗೆ 7 ರವರೆಗೆ ಒಂಟಿಯಾಗಿ ಸಂಚರಿಸದಂತೆ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಚ್ಚರಿಸಿದ್ದಾರೆ.

ಸಾರ್ವಜನಿಕರು ಹಾಗೂ ವಿಮಾನ ನಿಲ್ದಾಣದ ಸಿಬ್ಬಂದಿಗಳು ಅನಿವಾರ್ಯ ಸಂದರ್ಭಗಳಲ್ಲಿ ಗುಂಪಾಗಿ ಓಡಾಡಿ.  ಗಾಮನಗಟ್ಟಿ ಪ್ರದೇಶದ ವ್ಯಾಪ್ತಿಯಲ್ಲಿ ತ್ಯಾಜ್ಯ ಪದಾರ್ಥಗಳನ್ನು ಎಸೆಯುತ್ತಿರುವುದು ಗಮನಕ್ಕೆ ಬಂದಿದ್ದು ಅದನ್ನು ತಿನ್ನಲು ಬರುವ ಬೀದಿ ನಾಯಿಗಳನ್ನು ಹಿಡಿಯಲು ಚಿರತೆ ಬರುವ ಸಂಭವ ಇರುತ್ತದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಅಂದಾಜಿಸಿದ್ದಾರೆ.

ಗಾಮನಗಟ್ಟಿ ಪ್ರದೇಶದ ಸುತ್ತಮುತ್ತಲ ಜನರಿಗೆ ತ್ಯಾಜ್ಯ ವಸ್ತುಗಳನ್ನು ಎಸೆಯದಂತೆ ಮುನ್ನೆಚ್ಚರಿಕೆ ವಹಿಸಲು ಹಾಗೂ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಅಧಿಕಾರಿಗೆ ತಿಳಿಸಲು ಪತ್ರ ಬರೆಯಲು ವಿಮಾನ ನಿಲ್ಯಾಣ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

ಚಿರತೆ ಹುಡುಕುವುದು ಸವಾಲು: ತಾರಿಹಾಳ ಬ್ರಿಡ್ಜ್‌ನಿಂದ ಗಾಮನಗಟ್ಟಿಗೆ ಸಂಪರ್ಕ ಕಲ್ಪಿಸುವ ಹುಬ್ಬಳ್ಳಿ ವಿಮಾನ ನಿಲ್ದಾಣದ ಹಿಂಬದಿಯ ರಸ್ತೆಯಲ್ಲಿ ಚಿರತೆ 4-5 ದಿನದಿಂದ ಓಡಾಟ ನಡೆಸುತ್ತಿದೆ ಎಂಬುದು ಮಾಹಿತಿ. ಚಿರತೆಯ ಸಂಚಾರದ ದೃಶ್ಯಗಳನ್ನು ಗ್ರಾಮಸ್ಥರು ಮೊಬೈಲ್ ಮೂಲಕ ಸೆರೆಹಿಡಿದಿದ್ದಾರೆ.

ನಗರದ ಗೋಕುಲ್ ರೋಡ್ ವ್ಯಾಪ್ತಿಯ ರೇಣುಕಾ ನಗರದಲ್ಲಿಯೂ ಚಿರತೆ ಕಾಣಿಸಿಕೊಂಡಿದೆ ಎಂಬ ಮಾಹಿತಿಯೂ ಅರಣ್ಯ ಇಲಾಖೆಗೆ ಬಂದಿತ್ತು. ಆದ್ದರಿಂದ ಅಧಿಕಾರಿಗಳು, ಸಿಬ್ಬಂದಿ ಹುಡುಕಾಟ ಪ್ರಾರಂಭಿಸಿದ್ದಾರೆ. ಕೆಲವು ಕಡೆ ಚಿರತೆಯ ಹೆಜ್ಜೆ ಗುರುತುಗಳು ಪತ್ತೆಯಾಗಿವೆ.

ಚಿರತೆ ಪದೇ ಪದೇ ಜಾಗ ಬದಲಾವಣೆ ಮಾಡುತ್ತಿದ್ದು, ಅದು ಎಲ್ಲಿದೆ? ಎಂದು ಅಂದಾಜಿಸುವುದು ಅಧಿಕಾರಿಗಳಿಗೆ ಸಹ ಸವಾಲಾಗುತ್ತಿದೆ. ಹುಬ್ಬಳ್ಳಿ ವಿಮಾನ ನಿಲ್ದಾಣ, ಗಾಮನಗಟ್ಟಿ ಸೇರಿ ಸುಮಾರು 500 ಎಕರೆಗೂ ಅಧಿಕ ಪ್ರದೇಶವಿದೆ. ಇಲ್ಲಿ ಚಿರತೆ ಇದ್ದರೆ ಅದನ್ನು ಹುಡುವುದುದು ಕಷ್ಟವಾಗಿದೆ.

ಗಾಮನಗಟ್ಟಿಗೆ ಸಾಗುವ ಪ್ರದೇಶದಲ್ಲಿ ಕೃಷಿ ಭೂಮಿ ಇದೆ. ಇಲ್ಲಿ ಎದೆ ಎತ್ತರಕ್ಕೆ ಬೆಳೆ ಇದೆ. ಆದ್ದರಿಂದ ಇಲ್ಲಿ ಚಿರತೆ ಅವಿತಿರುವ ಸಾಧ್ಯತೆಯೂ ಇದೆ. ಚಿರತೆ ಇದುವರೆಗೂ ಯಾರ ಮೇಲೆ ಸಹ ದಾಳಿ ಮಾಡಿದ ಪ್ರಕರಣದ ವರದಿಯಾಗಿಲ್ಲ.

ಚಿರತೆ ಎಲ್ಲಿ ಅಡಗಿದೆ ಎಂಬ ಖಚಿತ ಮಾಹಿತಿ ಇಲ್ಲದ ಕಾರಣ ಅರಣ್ಯ ಇಲಾಖೆ ಅಧಿಕಾರಿಗಳು ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಚಿರತೆಯನ್ನು ಸೆರೆಹಿಡಿಯಲು ಬೋನ್ ಇಡಲು ವ್ಯವಸ್ಥೆ ಮಾಡುತ್ತಿದ್ದಾರೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular