ತಿರುವನಂತಪುರಂ: ಸರ್ಕಾರಿ ಜಮೀನನ್ನು ದೀರ್ಘಾವಧಿಗೆ ಅಂದರೆ 99 ವರ್ಷಗಳವರೆಗೆ ಗುತ್ತಿಗೆ ನೀಡುವ ಬ್ರಿಟಿಷರ ಕಾಲದ ಪದ್ಧತಿಗೆ ಅಂತ್ಯ ಹಾಡಲು ಸರ್ಕಾರ ಮುಂದಾಗಿದೆ. ಇನ್ನು ಮುಂದೆ ಯಾವುದೇ ಸರ್ಕಾರಿ ಭೂಮಿಯನ್ನು ಗರಿಷ್ಠ 12 ವರ್ಷಗಳ ಅವಧಿಗೆ ಮಾತ್ರ ಗುತ್ತಿಗೆ ನೀಡಲು ಹೊಸ ಕರಡು ಮಸೂದೆಯನ್ನು ಸಿದ್ಧಪಡಿಸಲಾಗಿದೆ. ವಿಶೇಷವೆಂದರೆ, ಈಗಾಗಲೇ ಗುತ್ತಿಗೆ ಪಡೆದಿರುವ ಜಮೀನುಗಳಿಗೂ ಈ ಹೊಸ ನಿಯಮ ಅನ್ವಯವಾಗಲಿದೆ.
ಬದಲಾದ ನಿಯಮಗಳೇನು? ಹೊಸ ನೀತಿಯ ಪ್ರಕಾರ, ಕನಿಷ್ಠ ಒಂದು ದಿನದಿಂದ ಗರಿಷ್ಠ 12 ವರ್ಷಗಳವರೆಗೆ ಮಾತ್ರ ಗುತ್ತಿಗೆ ಅವಧಿ ಇರಲಿದೆ. ಖಾಸಗಿ ಸಂಸ್ಥೆಗಳು ಅಥವಾ ವ್ಯಕ್ತಿಗಳಿಗೆ ಗರಿಷ್ಠ 5 ವರ್ಷಗಳವರೆಗೆ ಗುತ್ತಿಗೆ ನೀಡಲಾಗುವುದು ಮತ್ತು ಅದನ್ನು ಒಟ್ಟು 5 ಬಾರಿ ಮಾತ್ರ ನವೀಕರಿಸಲು ಅವಕಾಶವಿರುತ್ತದೆ. ಗ್ರಾಮೀಣ ಭಾಗದಲ್ಲಿ 1964ರ ಭೂ ನೋಂದಣಿ ಕಾಯ್ದೆ ಹಾಗೂ ನಗರ ಪ್ರದೇಶಗಳಲ್ಲಿ 1995ರ ಕಾಯ್ದೆಯಡಿ ಈ ಹೊಸ ಬದಲಾವಣೆಗಳನ್ನು ತರಲಾಗುತ್ತಿದೆ. ಆದರೆ ರಾಜಮನೆತನದ ಕಾಲದಿಂದ ಗುತ್ತಿಗೆ ಪಡೆದ ದೊಡ್ಡ ತೋಟಗಳಿಗೆ ಇದರಿಂದ ವಿನಾಯಿತಿ ನೀಡಲಾಗಿದೆ.
ಗುತ್ತಿಗೆ ದರ ನಿರ್ಧಾರ ಹೇಗೆ? ಈವರೆಗೆ ಮಾರುಕಟ್ಟೆ ಮೌಲ್ಯದ ಆಧಾರದ ಮೇಲೆ ಗುತ್ತಿಗೆ ಹಣ ನಿಗದಿ ಮಾಡಲಾಗುತ್ತಿತ್ತು. ಇದು ಅತಿ ಹೆಚ್ಚಾದ ಕಾರಣ ಬಾಕಿ ಹಣದ ಮೊತ್ತ 1,000 ಕೋಟಿ ರೂಪಾಯಿ ದಾಟಿದೆ ಎಂದು ಸಿಎಜಿ ವರದಿ ಹೇಳಿತ್ತು. ಹೀಗಾಗಿ, ಇನ್ಮುಂದೆ ಕೇರಳ ಭೂ ಕಂದಾಯ ಕಾಯ್ದೆ 1961ರ ಅನ್ವಯ ಚಾಲ್ತಿಯಲ್ಲಿರುವ ಭೂ ತೆರಿಗೆಯ 50 ಪಟ್ಟು ಮೊತ್ತವನ್ನು ಮೂಲ ಗುತ್ತಿಗೆ ದರವನ್ನಾಗಿ (BLR) ನಿಗದಿಪಡಿಸಲು ತೀರ್ಮಾನಿಸಲಾಗಿದೆ. ಪಂಚಾಯತ್, ಪುರಸಭೆ ಮತ್ತು ಕಾರ್ಪೊರೇಷನ್ ವ್ಯಾಪ್ತಿಯಲ್ಲಿ ತೆರಿಗೆ ದರಗಳು ಬೇರೆ ಇರುವುದರಿಂದ ಗುತ್ತಿಗೆ ದರವೂ ಪ್ರದೇಶದಿಂದ ಪ್ರದೇಶಕ್ಕೆ ಬದಲಾಗಲಿದೆ.
ಬಾಕಿ ವಸೂಲಿಗೆ ಡಿಜಿಟಲ್ ಪೆಟ್ಟು ಗುತ್ತಿಗೆ ಮೊತ್ತದ ವಸೂಲಾತಿಯಲ್ಲಿ ಪಾರದರ್ಶಕತೆ ತರಲು ಸರ್ಕಾರ ಡಿಜಿಟಲ್ ಪಾವತಿ ವ್ಯವಸ್ಥೆಯನ್ನು ಜಾರಿಗೆ ತರುತ್ತಿದೆ. ಎಲ್ಲಾ ಸರ್ಕಾರಿ ಭೂಮಿಗಳ ದಾಖಲೆಗಳು ಈಗ ‘ರೆಲಿಸ್’ (ReLIS) ಪೋರ್ಟಲ್‌ನಲ್ಲಿ ಲಭ್ಯವಿರುವುದರಿಂದ, ಅಧಿಕಾರಿಗಳು ಗುತ್ತಿಗೆ ನವೀಕರಣ ಮತ್ತು ಬಾಕಿ ವಿವರಗಳನ್ನು ಸುಲಭವಾಗಿ ಪತ್ತೆಹಚ್ಚಬಹುದು. ಸರ್ಕಾರಿ ಇಲಾಖೆಗಳು, ಸಹಕಾರಿ ಸಂಸ್ಥೆಗಳು ಮತ್ತು ಖಾಸಗಿ ವ್ಯಕ್ತಿಗಳನ್ನು ಆದಾಯದ ಆಧಾರದ ಮೇಲೆ ವಿವಿಧ ಗುಂಪುಗಳಾಗಿ ವಿಂಗಡಿಸಿ ಅವರಿಂದ ಸಕಾಲಕ್ಕೆ ಹಣ ವಸೂಲಿ ಮಾಡಲು ಈ ಮಸೂದೆ ಸಹಕಾರಿಯಾಗಲಿದೆ.

