HomeKarnatakaಬೆಳಗಾವಿ ಜಿಲ್ಲೆಗೆ ಇನ್ನೂ ಎರಡು ಸಚಿವ ಸ್ಥಾನಗಳು ದೊರೆಯುವ ನಿರೀಕ್ಷೆಯಿದೆ: ಮಾಜಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್...

ಬೆಳಗಾವಿ ಜಿಲ್ಲೆಗೆ ಇನ್ನೂ ಎರಡು ಸಚಿವ ಸ್ಥಾನಗಳು ದೊರೆಯುವ ನಿರೀಕ್ಷೆಯಿದೆ: ಮಾಜಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿಕೆ

ಬೆಳಗಾವಿ: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಯಾದ ಬಳಿಕ ಮೊದಲ ಬಾರಿಗೆ ಬೆಳಗಾವಿಗೆ ಆಗಮಿಸುತ್ತಿರುವುದು ಉತ್ತರ ಕರ್ನಾಟಕದ ಜನರಲ್ಲಿ ಹೊಸ ನಿರೀಕ್ಷೆ ಮೂಡಿಸಿದೆ ಎಂದು ಮಾಜಿ ಸಚಿವೆ, ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ತಿಳಿಸಿದ್ದಾರೆ.

ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉತ್ತರ ಕರ್ನಾಟಕದ ಅಭಿವೃದ್ಧಿಯ ಬಗ್ಗೆ ಜನರಿಗೆ ಸಾಕಷ್ಟು ನಿರೀಕ್ಷೆಗಳಿದ್ದು, ಮುಖ್ಯಮಂತ್ರಿ ಅವರ ನೇತೃತ್ವದಲ್ಲಿ ಕಿತ್ತೂರು ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕ ಭಾಗಗಳ ಸಮಗ್ರ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ದೊರೆಯಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಗೃಹಲಕ್ಷ್ಮೀ ಯೋಜನೆ ಕುರಿತು ಮಾತನಾಡಿದ ಅವರು, ಮಹಿಳೆಯರ ಆರ್ಥಿಕ ಸ್ವಾವಲಂಬನೆಗಾಗಿ ಜಾರಿಗೆ ತಂದಿರುವ ಈ ಯೋಜನೆ ವಿಶ್ವದಲ್ಲೇ ಮಾದರಿಯಾಗಿದ್ದು, ಅದರ ಯಶಸ್ಸನ್ನು ಗಮನಿಸಿ ಎನ್‌ಡಿಎ ಆಡಳಿತದ ಕೆಲವು ರಾಜ್ಯಗಳೂ ಇದೇ ಮಾದರಿಯ ಯೋಜನೆಗಳನ್ನು ಜಾರಿಗೊಳಿಸಿವೆ ಎಂದು ಹೇಳಿದರು. ಕೇಂದ್ರ ಸರ್ಕಾರದ ಮಟ್ಟದಲ್ಲಿಯೂ ಗೃಹಲಕ್ಷ್ಮೀ ಯೋಜನೆಗೆ ಮೆಚ್ಚುಗೆ ವ್ಯಕ್ತವಾಗಿದೆ ಎಂದ ಅವರು, ಯೋಜನೆ ಕುರಿತು ವಿಪಕ್ಷಗಳು ಮಾಡುತ್ತಿರುವ ಆರೋಪಗಳಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ಸ್ಪಷ್ಟಪಡಿಸಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸಚಿವ ಸಂಪುಟ ವಿಸ್ತರಣೆ ಕುರಿತು ಪ್ರತಿಕ್ರಿಯಿಸಿದ ಹೆಬ್ಬಾಳಕರ್, ಬೆಳಗಾವಿ ರಾಜ್ಯದ ಅತಿದೊಡ್ಡ ಜಿಲ್ಲೆಯಾಗಿದ್ದು, ಇಲ್ಲಿಂದ ಕಾಂಗ್ರೆಸ್‌ನ 11 ಶಾಸಕರು ಆಯ್ಕೆಯಾಗಿದ್ದಾರೆ. ಹೀಗಾಗಿ ಜಿಲ್ಲೆಗೆ ಇನ್ನೂ ಎರಡು ಸಚಿವ ಸ್ಥಾನಗಳು ದೊರೆಯುವ ನಿರೀಕ್ಷೆಯಿದ್ದು, ಈ ಕುರಿತು ಪಕ್ಷದ ನಾಯಕತ್ವ ಸೂಕ್ತ ನಿರ್ಧಾರ ಕೈಗೊಳ್ಳಲಿದೆ ಎಂದು ಹೇಳಿದರು.

ಬೆಳಗಾವಿಯ ಅಭಿವೃದ್ಧಿ ಕುರಿತು ಮಾತನಾಡಿದ ಲಕ್ಷ್ಮೀ ಹೆಬ್ಬಾಳ್ಕರ್, ಬೆಳಗಾವಿ ಕರ್ನಾಟಕದ ಎರಡನೇ ರಾಜಧಾನಿಯಾಗಿದ್ದು, ಗೋವಾ ಹಾಗೂ ಮುಂಬೈಗೆ ಸಮೀಪದಲ್ಲಿರುವ ಕಾರಣ ಕೈಗಾರಿಕಾ ಹೂಡಿಕೆಗೆ ಅತ್ಯಂತ ಸೂಕ್ತ ಪ್ರದೇಶವಾಗಿದೆ. ಹೆಚ್ಚಿನ ಕೈಗಾರಿಕೆಗಳು ಸ್ಥಾಪನೆಯಾದರೆ ಉದ್ಯೋಗಾವಕಾಶಗಳು ಹೆಚ್ಚಲಿದ್ದು, ಜಿಲ್ಲೆಯ ಆರ್ಥಿಕ ಅಭಿವೃದ್ಧಿಗೆ ಮತ್ತಷ್ಟು ವೇಗ ಸಿಗಲಿದೆ ಎಂದು ಅಭಿಪ್ರಾಯಪಟ್ಟರು.

ಜಿಲ್ಲೆ ವಿಭಜನೆ ಕುರಿತು ಪ್ರತಿಕ್ರಿಯಿಸಿದ ಅವರು, ಸದ್ಯಕ್ಕೆ ಆ ವಿಚಾರ ಅಪ್ರಸ್ತುತವಾಗಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮೊದಲ ಬಾರಿಗೆ ಬೆಳಗಾವಿಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಅಭಿವೃದ್ಧಿ ವಿಚಾರಗಳಿಗೆ ಆದ್ಯತೆ ನೀಡಲಾಗುವುದು. ಮುಂದಿನ ದಿನಗಳಲ್ಲಿ ಅಗತ್ಯವಿದ್ದರೆ ಜಿಲ್ಲೆ ವಿಭಜನೆ ಕುರಿತು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಾಗುವುದು ಎಂದು ತಿಳಿಸಿದರು.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular