HomeKarnatakaಚಾಮರಾಜ ಟಿಕೆಟ್ ಕೇಳಿದ ಪ್ರತಾಪ್ ಸಿಂಹ: ಬಿಜೆಪಿಯಲ್ಲೇ ಭಾರೀ ವಿರೋಧ!

ಚಾಮರಾಜ ಟಿಕೆಟ್ ಕೇಳಿದ ಪ್ರತಾಪ್ ಸಿಂಹ: ಬಿಜೆಪಿಯಲ್ಲೇ ಭಾರೀ ವಿರೋಧ!

“ಎಲ್ಲಾ ದೃಷ್ಟಿಯಿಂದಲೂ ಚಾಮರಾಜ ವಿಧಾನಸಭಾ ಕ್ಷೇತ್ರ ನನಗೆ ಅನುಕೂಲಕರವಾಗಿದೆ. ಹಾಗಾಗಿ ಅದೇ ನನ್ನ ಆಯ್ಕೆಯಾಗಿರುತ್ತದೆ” ಎಂದು ಮೈಸೂರು-ಕೊಡಗು ಕ್ಷೇತ್ರದ ಮಾಜಿ ಸಂಸದ ಪ್ರತಾಪ್ ಸಿಂಹ ಹೇಳಿದ್ದರು.  ಈ ಮೂಲಕ 2028ರ ಚುನಾವಣೆಯಲ್ಲಿ ರಾಜ್ಯ ರಾಜಕೀಯಕ್ಕೆ ಬರುವ ಸೂಚನೆ ನೀಡಿದ್ದರು.

ಆದರೆ ಪ್ರತಾಪ್ ಸಿಂಹ ಹೇಳಿಕೆಗೆ ಬಿಜೆಪಿಯಲ್ಲಿಯೇ ವಿರೋಧ ವ್ಯಕ್ತವಾಗಿದೆ. ಚಾಮರಾಜ  ಟಿಕೆಟ್ ವಿಚಾರವಾಗಿ ಪ್ರತಾಪ್ ಸಿಂಹ ಹೇಳಿಕೆಗೆ ತಿರುಗೇಟು ನೀಡಿರುವ ಮಾಜಿ ಶಾಸಕ, ಮೈಸೂರು ನಗರ ಬಿಜೆಪಿ ಅಧ್ಯಕ್ಷ ಎಲ್. ನಾಗೇಂದ್ರ, “ನಿರ್ಧಾರ ತೆಗೆದುಕೊಳ್ಳುವುದು ಪಕ್ಷದ ಹೈಕಮಾಂಡ್” ಎಂದು ಹೇಳಿದ್ದಾರೆ.

ಮಾಧ್ಯಮಗಳ ಜೊತೆ ಮಾತನಾಡಿದ ಎಲ್.ನಾಗೇಂದ್ರ, “ಯಾವ ನೈತಿಕತೆ ಇಟ್ಟುಕೊಂಡು ಇಲ್ಲಿ ಬಂದು ಟಿಕೆಟ್ ಕೇಳುತ್ತೀರಿ, ಪಾರ್ಲಿಮೆಂಟ್ ಚುನಾವಣೆಯಲ್ಲಿ ಇಲ್ಲಿ ಬಂದು ಕೆಲಸ ಮಾಡಿದ್ರಾ?, ನಾವು ಕೆಲಸ ಮಾಡಿಲ್ವಾ 56 ಸಾವಿರ ಲೀಡ್‌ ಕೊಡಿಸಿಲ್ವಾ?” ಎಂದು ನಾಗೇಂದ್ರ ಪ್ರಶ್ನೆ ಮಾಡಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

“ಇದೇ ಕ್ಷೇತ್ರ ಬೇಕಾ ನಿಮಗೆ ಹಿಂದೂ ಹುಲಿ ಎಂದು ಹೇಳುತ್ತೀರಿ. ಇಡೀ ರಾಜ್ಯದಲ್ಲಿ ಹೋಗಿ ಮಾಡಿ, ತಾಕತ್ ಇಲ್ಲವೇ?, ಎಂಟು ಕ್ಷೇತ್ರಗಳಿವೆ ಎಂಟು ಕಡೆ ನಿಂತುಕೊಳ್ಳಿ. ಬಡವರ ಮಕ್ಕಳು ಬರಬೇಕು ಅಂತೀರಿ. ಕಾರ್ಯಕರ್ತರೇ ಬೇಕಾ ನನ್ನ ಬಲಿ ತೆಗೆದುಕೊಳ್ಳಬೇಕಾ?” ಎಂದು ಖಾರವಾಗಿ ಪ್ರಶ್ನಿಸಿದರು.

“ನನ್ನ ಬಲಿ ತೆಗೆದುಕೊಂಡು ನೀವು ಎಂಎಲ್‌ಎ ಆಗಬೇಕಾ, 30 ವರ್ಷಗಳಿಂದ ಪಕ್ಷಕ್ಕಾಗಿ ನಾನು ಕೆಲಸ ಮಾಡಿಲ್ವಾ?. ಪಕ್ಷಕ್ಕಾಗಿ ಏನು ಮಾಡಿದ್ದೀರಿ?, 30 ವರ್ಷದಿಂದ ನಾನು ಕೆಲಸ ಮಾಡಿಕೊಂಡು ಬಂದಿದ್ದೇನೆ” ಎಂದು ಹೇಳಿದರು.

“ಎಷ್ಟು ಕಾರ್ಯಕರ್ತರನ್ನು ಕರೆತಂದಿದ್ದೀರಿ?, ಎಷ್ಟು ಕಾರ್ಯಕರ್ತರನ್ನು ಗೆಲ್ಲಿಸಿಕೊಂಡು ಬಂದಿದ್ದೀರಿ? ಈ ಕುರಿತು ಬಹಿರಂಗವಾಗಿ ಚರ್ಚೆಯಾಗಲಿ. ನೋಡಿ ಜನರು, ಪಕ್ಷ ನಮ್ಮನ್ನು ಕೈ ಬಿಡುವುದಿಲ್ಲ. 2028ಕ್ಕೆ ಯಾರಿಗೆ ಮುಖಭಂಗವಾಗಲಿದೆ ಎಂದು ನೀವು ಬರೆದಿಟ್ಟುಕೊಳ್ಳಿ” ಎಂದರು.

“ಚಾಮರಾಜದ ಟಿಕೆಟ್ ಯಾರಿಗೆ ಕೊಡಬೇಕು ಎಂಬುದನ್ನು ಹೈಕಮಾಂಡ್ ತೀರ್ಮಾನಿಸುತ್ತದೆ. ಈ ಮೂಲಭೂತ ವಿಚಾರ ಪ್ರತಾಪ್ ಸಿಂಹಗೆ ಗೊತ್ತಿರಬೇಕಿತ್ತು. ಅವರು ಯಾವ ಕಾರಣಕ್ಕೆ ಆ ರೀತಿ ಹೇಳಿಕೆ ನೀಡಿದರು ಗೊತ್ತಿಲ್ಲ. ನಾನು ಪಕ್ಷ ಸಂಘಟನೆಗಾಗಿ ದುಡಿಯುತ್ತಿದ್ದೇನೆ, ನನ್ನ ವಿರುದ್ಧ ಯಾವುದೇ ಆಪಾದನೆಗಳಿಲ್ಲ. ನಾನು ಕೋರ್ಟ್‌ನಿಂದ ಯಾವ ಸ್ಟೇ ಕೂಡ ತಂದಿಲ್ಲ” ಎಂದು ತಿರುಗೇಟು ನೀಡಿದ್ದಾರೆ. 

ಎಲ್. ನಾಗೇಂದ್ರ ಚಾಮರಾಜ ಕ್ಷೇತ್ರದಲ್ಲಿ ಸೋಲು-ಗೆಲುವು ಕಂಡಿದ್ದಾರೆ. ಕ್ಷೇತ್ರದಲ್ಲಿ ಪಕ್ಷ ಸಂಘಟನೆ ಮಾಡುತ್ತಿದ್ದಾರೆ. ಇಂತಹ ಹೊತ್ತಿನಲ್ಲಿ ಅಲ್ಲಿ ಪ್ರತಾಪ್ ಸಿಂಹ ಸ್ಪರ್ಧಿಸಲು ಬಯಸಿರುವುದು ಬಿಜೆಪಿಯಲ್ಲಿಯೇ ವಿರೋಧಕ್ಕೆ ಕಾರಣವಾಗಿದೆ.

ಎಲ್. ನಾಗೇಂದ್ರ 2023ರ ಚುನಾವಣೆಯಲ್ಲಿ 68,837 ಮತಗಳನ್ನು ಪಡೆದು ಸೋತಿದ್ದರು. 2018ರಲ್ಲಿ ಅವರು 51,683 ಮತಗಳನ್ನು ಪಡೆದು ಜಯಗಳಿಸಿದ್ದರು. 2013ರಲ್ಲಿ 26,168 ಮತಗಳನ್ನು ಪಡೆದು ಸೋತಿದ್ದರು.

ಜನವರಿ 5ರಂದು ಮೈಸೂರಿನ ಚಾಮರಾಜ ಕ್ಷೇತ್ರದಲ್ಲಿ ಆಯೋಜಿಸಿದ್ದ ಸ್ನೇಹ ಬಳಗದ ಕಾರ್ಯಕ್ರಮದಲ್ಲಿ ಮಾಜಿ ಸಂಸದ ಪ್ರತಾಪ್ ಸಿಂಹ ಮಾತನಾಡಿದ್ದರು. ಆಗ ರಾಜ್ಯ ರಾಜಕೀಯಕ್ಕೆ ಬರುವ ಸುಳಿವು ನೀಡಿದ್ದರು.

2024ರ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ಕೈ ತಪ್ಪಿದ ಬಳಿಕ ಪ್ರತಾಪ್ ಸಿಂಹ ರಾಜ್ಯ ರಾಜಕೀಯಕ್ಕೆ ಬರಲಿದ್ದಾರೆ ಎಂಬ ಚರ್ಚೆಗಳ ನಡುವೆಯೇ ಅವರು, “ಚಾಮರಾಜ ಕ್ಷೇತ್ರ ಹಣದ ಪ್ಯಾಕೇಟ್ ಕೊಟ್ಟು ಗೆಲ್ಲುವ ಕ್ಷೇತ್ರ ಅಲ್ಲ. ಇಲ್ಲಿ ಮತದಾರರು ಕೆಲಸ ನೋಡಿ ಬೆಂಬಲಿಸುವ ಪ್ರಜ್ಞಾವಂತರು. ಚಾಮರಾಜದಿಂದ ಸ್ಪರ್ಧಿಸುವ ಆಯ್ಕೆ ಹೊಂದಿದ್ದೇನೆ” ಎಂದು ಹೇಳಿದ್ದರು.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

Most Popular