ತುಮಕೂರು: ನೈರುತ್ಯ ರೈಲ್ವೆ ಇಲಾಖೆ ರೈಲ್ವೆ ಹಳಿ ನಿರ್ಮಾಣ ಕಾಮಗಾರಿಗಾಗಿ ಭೂಮಿ ವಶಪಡಿಸಿಕೊಂಡಿದ್ದು, ಜಮೀನು ಕಳೆದುಕೊಂಡವರಿಗೆ ಪರಿಹಾರ ನೀಡದ ಹಿನ್ನೆಲೆಯಲ್ಲಿ ರೈಲ್ವೆ ನಿಲ್ದಾಣದ ಕಚೇರಿಯನ್ನೇ ಜಪ್ತಿ ಮಾಡಿರುವ ಘಟನೆ ತುಮಕೂರಿನ ಕುಣಿಗಲ್ ನಲ್ಲಿ ನಡೆದಿದೆ.
ಕುಣಿಗಲ್ ರೈಲು ನಿಲ್ದಾಣದ ಸ್ಟೇಷನ್ ಮಾಸ್ಟರ್ ಕಚೇರಿಯನ್ನು ಜಪ್ತಿ ಮಾಡಲಾಗಿದ್ದು, ಕಚೇರಿಯ ಪೀಠೋಪಕರಣ, ವಸ್ತುಗಳನ್ನು ಸಂತ್ರಸ್ತರು ಕೊಂಡೊಯ್ದಿದ್ದಾರೆ.
ರೈಲ್ವೆ ಹಳಿ ನಿರ್ಮಾಣ ಕಾಮಗಾರಿಯಿಂದಾಗಿ ಮಲ್ಲಾಘಟ್ಟದ ಮೂಡಲಗಿರಿ ಹಾಗೂ ಲಕ್ಕಯ್ಯ ಎಂಬುವವರು ಮನೆ ಹಾಗೂ ನಿವೇಶನ ಕಳೆದುಕೊಂಡಿದ್ದರು. 2020ರಲ್ಲಿ ಇಬ್ಬರು ಸಂತ್ರಸ್ತರಿಗೂ 20 ಲಕ್ಷ ಪರಿಹಾರ ನೀಡುವಂತೆ ಕೋರ್ಟ್ ಆದೇಶ ನೀಡಿತ್ತು. ಕೋರ್ಟ್ ಆದೇಶದ ಬಳಿಕವೂ ರೈಲ್ವೆ ಇಲಾಖೆ ಸಂತ್ರಸ್ತರಿಗೆ ಪರಿಹಾರ ನೀಡದೇ ನಿರ್ಲಕ್ಷ್ಯ ವಹಿಸಿತ್ತು.
ಈ ಹಿನ್ನೆಲೆಯಲ್ಲಿ ಸಂತ್ರಸ್ತರು ಮತ್ತೆ ನ್ಯಾಯಾಲಯದ ಮೊರೆ ಹೋಗಿದ್ದರು. ಕುಣಿಗಲ್ ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಲಯ ರೈಲ್ವೆ ನಿಲ್ದಾಣದ ಸ್ಟೇಷನ್ ಮಾಸ್ಟರ್ ಕಚೇರಿ ಜಪ್ತಿ ಮಾಡಿ ಸಂತ್ರಸ್ತರಿಗೆ ಪರಿಹಾರ ನೀಡಲು ಆದೇಶ ನೀಡಿತ್ತು. ಕೋರ್ಟ್ ಆದೇಶದ ಮೇರೆಗೆ ರೈಲ್ವೆ ನಿಲ್ದಾಣದ ಸ್ಟೇಷನ್ ಮಾಸ್ಟರ್ ಕಚೇರಿಗೆ ಬಂದ ಕೋರ್ಟ್ ಸಿಬ್ಬಂದಿಗಳು ಕಚೇರಿಯ ಪೀಠೋಪಕರಣಗಳನ್ನು, ವಸ್ತುಗಳನ್ನು ಜಪ್ತಿ ಮಾಡಿ ಬೀಗ ಜಡಿದಿದ್ದಾರೆ. ಜಪ್ತಿ ಮಾಡಿದ ಪೀಠೋಪಕರಣಗಳನ್ನು ಸಂತ್ರಸ್ತರಿಗೆ ನೀಡಲಾಗಿದ್ದು, ಸಂತ್ರಸ್ತರು ಕೊಂಡೊಯ್ದಿದ್ದಾರೆ.

