ಬೆಂಗಳೂರು: ವಾರಾಂತ್ಯದ ಜೊತೆಗೆ ಗಣರಾಜ್ಯೋತ್ಸವ ಹಿನ್ನೆಲೆಯಲ್ಲಿ ಹೆಚ್ಚುವರಿ ರಜೆ ಬಂದಿರುವ ಬೆನ್ನಲ್ಲೇ ಪ್ರಯಾಣಿಕರಿಗೆ ಕೆ.ಎಸ್.ಆರ್.ಟಿ.ಸಿ ಹಾಗೂ ಬಿಎಂಟಿಸಿ ಗುಡ್ ನ್ಯೂಸ್ ನೀಡಿವೆ. ಸುಗಮ ಸಂಚಾರ ಹಾಗೂ ಸಂಚಾರ ದಟ್ಟಣೆ ನಿಯಂತ್ರಿಸಲು ಪ್ರಯಾಣಿಕರಿಗೆ ಹೆಚ್ಚುವರಿ ಬಸ್ ಸೌಲಭ್ಯಗಳನ್ನು ಕಲ್ಪಿಸಿವೆ. ಇದರಿಂದ ಊರುಗಳಿಗೆ ತೆರಳುವವರಿಗೆ ಅನುಕೂಲವಾಗಲಿದೆ.
ಈ ತಿಂಗಳಾಂತ್ಯಕ್ಕೆ ಸಾಲು ಸಾಲು ರಜೆ ಬಂದಿರುವ ಹಿನ್ನಲೆಯಲ್ಲಿ ಬೆಂಗಳೂರಿಗರು ಊರುಗಳಿಗೆ ತೆರಳುವ ಸಾಧ್ಯತೆ ಹೆಚ್ಚು. ಈ ಹಿನ್ನೆಲೆಯಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಸಾರಿಗೆ ನಿಗಮಗಳು ವಿಶೇಷವಾಗಿ ಹೆಚ್ಚುವರಿ ಬಸ್ ಸಂಚಾರಕ್ಕೆ ವ್ಯವಸ್ಥೆ ಮಾಡಿವೆ.
ಕೆ.ಎಸ್.ಆರ್.ಟಿಸಿ, ಬಿಎಂಟಿಸಿ ಬಸ್ ಗಳ ಸಂಚಾರವನ್ನು ತಿಂಗಳಾಂತ್ಯಕ್ಕೆ ಹೆಚ್ಚಿಸಲಾಗಿದೆ. ಜನವರಿ 24ರಿಂದ ಸಾಲು ಸಾಲು ರಜೆ ಆರಂಭವಾಗಲಿದೆ. ಜನವರಿ 24ರಂದು 4ನೇ ಶನಿವಾರ, ಜನವರಿ 25 ಭಾನುವಾರ ಇದರ ಜೊತೆಗೆ ಜನವರಿ 26ರಂದು ಗಣರಾಜೋತ್ಸವ ಹಿನ್ನೆಲೆಯಲ್ಲಿ ಸಾರ್ವತ್ರಿಕ ರಜೆ ಇರುವುದರಿಂದ ಜನವರಿ 23ರ ಸಂಜೆ ಶುಕ್ರವಾರದಿಂದಲೇ ಬೆಂಗಳೂರಿನಿಂದ ಬೇರೆ ಬೇರೆ ಊರುಗಳಿಗೆ ತೆರಳುವವರ ಸಂಖ್ಯೆ ಸಹಜವಾಗಿ ಹೆಚ್ಚಲಿದೆ. ಇದರಿಂದ ಜನದಟ್ಟಣೆಯಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಪ್ರಯಾಣಿಕರಿಗೆ ಆಗುವ ತೊಂದರೆ ತಪ್ಪಿಸಲು ಹೆಚ್ಚುವರಿ ಬಸ್ ಗಳನ್ನು ಓಡಿಸಲು ಕೆ.ಎಸ್.ಆರ್.ಟಿ.ಸಿ ಹಾಗೂ ಬಿಎಂಟಿಸಿ ನಿರ್ಧರಿಸಿವೆ.
ಈ ಹಿನ್ನೆಲೆಯಲ್ಲಿ ಜನವರಿ 23ರರಿಂದಲೇ ಕೆ.ಎಸ್.ಆರ್.ಟಿ.ಸಿ ಬಸ್ ಗಳ ಜೊತೆಗೆ ಬಿಎಂಟಿಸಿ ಬಸ್ ಗಳು ಹೆಚ್ಚುವರಿಯಾಗಿ ಸಂಚರಿಸಲಿವೆ. ಜನವರಿ 23ರಂದು 265 ಬಿಎಂಟಿಸಿ ಬಸ್ ಗಳು, ಜನವರಿ 24ರಂದು 500 ಬಿಎಂಟಿಸಿ ಬಸ್ ಗಳು ಬೆಂಗಳೂರಿನಿಂದ ವಿವಿಧ ಜಿಲ್ಲೆಗಳಿಗೆ ಸಂಚರಿಸಲಿವೆ. ಇದರ ಜೊತೆಗೆ ಬೆಂಗಳೂನಿಂದ ವಿವಿಧ ಜಿಲ್ಲೆಗಳಿಗೆ ಕೆ.ಎಸ್.ಆರ್.ಟಿ.ಸಿ ಬಸ್ ಗಳನ್ನು ಬಿಡಲು ನಿರ್ಧರಿಸಲಾಗಿದೆ ಎಂದು ತಿಳಿದುಬಂದಿದೆ.

