ತುಮಕೂರು- ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿರುವ ಬೆಳವಣಿಗೆಯೊಂದರಲ್ಲಿ, ಸಿಎಂ ಹಾಗೂ ಡಿಸಿಎಂ ನೇತೃತ್ವದ ಸಂಪುಟದಲ್ಲಿ ತಮಗೆ ಸಚಿವ ಸ್ಥಾನ ಕೈತಪ್ಪಿರುವ ಹಿನ್ನೆಲೆಯಲ್ಲಿ ಗುಬ್ಬಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಎಸ್‌ಆರ್ ಶ್ರೀನಿವಾಸ್ (ವಾಸಣ್ಣ) ಅವರು ತೀವ್ರ ಬೇಸರ ವ್ಯಕ್ತಪಡಿಸಿದ್ದು, ತಮ್ಮ ಕೆಎಸ್‌ಆರ್‌ಟಿಸಿ (KSRTC) ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಬಹಿರಂಗವಾಗಿ ಘೋಷಿಸಿದ್ದಾರೆ.
ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಕೀಯ ವ್ಯವಸ್ಥೆ ಮತ್ತು ಪಕ್ಷದ ವರಿಷ್ಠರ ಧೋರಣೆಯ ವಿರುದ್ಧ ತಮ್ಮ ಆಕ್ರೋಶ ಹಾಗೂ ಹತಾಶೆಯನ್ನು ಹೊರಹಾಕಿದರು.
ರಾಜಕೀಯದಲ್ಲಿ ನಮ್ಮಂಥ ಸಾಮಾನ್ಯ ರೈತರ ಮಗ ಮೇಲೆ ಬರುವುದು ಬಹಳ ಕಷ್ಟ. ನಮ್ಮ ಹಿಂದೆ ಯಾವುದೇ ‘ಗಾಡ್ ಫಾದರ್’ ಇರಲಿಲ್ಲ, ಹಾಗಾಗಿ ನಮಗೆ ಸಚಿವ ಸ್ಥಾನ ತಪ್ಪಿದೆ. ಯಾರದೋ ತಲೆ ಹೊಡೆದು ಹಣ ಸಂಪಾದನೆ ಮಾಡಿದವರು ಮಾತ್ರ ಮೇಲಕ್ಕೆ ಬರುತ್ತಾರೆ,” ಎಂದು ಅಳಲು ತೋಡಿಕೊಂಡರು.
ರಾಜಕೀಯವೆಂಬುದು ಸಂಪೂರ್ಣವಾಗಿ ಮೋಸದಿಂದ ಕೂಡಿದೆ ಮತ್ತು ಇಲ್ಲಿ ‘ಡಬಲ್ ಗೇಮ್’ ನಡೆಯುತ್ತದೆ. ಪ್ರಾಮಾಣಿಕತೆಗೆ ಈಗಿನ ರಾಜಕೀಯದಲ್ಲಿ ಎಷ್ಟes ಬೆಲೆ ಇದೆ ಎಂಬುದು ಜಿಜ್ಞಾಸೆಗೆ ಒಳಪಟ್ಟಿದೆ. ಗುರುತಿಸುತ್ತಾರೆ ಎಂದು ಅಂದುಕೊಂಡಿದ್ದೆ, ಆದರೆ ಎಲ್ಲವೂ ಮೀರಿ ಹೋಗಿದೆ” ಎಂದರು.
ನಿಗಮ ಮಂಡಳಿ ಹುದ್ದೆ ತ್ಯಾಗ:
ಕೆಎಸ್‌ಆರ್‌ಟಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಘೋಷಣೆ
“ಕೆಎಸ್‌ಆರ್‌ಟಿಸಿ ಈಗಾಗಲೇ ನಷ್ಟದಲ್ಲಿದೆ, ಅಲ್ಲಿ ಕುಳಿತು ಏನು ಸಾಧನೆ ಮಾಡಲು ಸಾಧ್ಯ? ನಮ್ಮ ಜಿಲ್ಲೆಗೆ (ತುಮಕೂರು) ಇನ್ನೊಂದು ಸಚಿವ ಸ್ಥಾನ ಸಿಗಬೇಕಿತ್ತು. ಬಡವನ ಕೋಪ ದವಡೆಗೆ ಮೂಲ ಎಂಬಂತೆ, ಕಾರ್ಯಕರ್ತರ ಅಭಿಪ್ರಾಯದಂತೆ ನಾನು ನಾಳೆಯೇ ಹೋಗಿ ಕೆಎಸ್‌ಆರ್‌ಟಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುತ್ತೇನೆ,” ಎಂದು ಸ್ಪಷ್ಟಪಡಿಸಿದರು.
ಕಾಂಗ್ರೆಸ್ ಒಳಗೆ ಮತ್ತಷ್ಟು ಅಸಮಾಧಾನ
ಕಾಂಗ್ರೆಸ್ ಸರ್ಕಾರದಲ್ಲಿ ಸಚಿವ ಸ್ಥಾನಾಕಾಂಕ್ಷಿಗಳಾಗಿದ್ದು ವಂಚಿತರಾಗಿರುವ ಹಿರಿಯ ಹಾಗೂ ಪ್ರಮುಖ ನಾಯಕರ ಸಾಲಿಗೆ ಈಗ ಎಸ್‌ಆರ್ ಶ್ರೀನಿವಾಸ್ ಕೂಡ ಸೇರಿದ್ದಾರೆ. ಈಗಾಗಲೇ ಸಂಪುಟ ವಿಸ್ತರಣೆ ಮತ್ತು ನಿಗಮ ಮಂಡಳಿ ಹುದ್ದೆಗಳ ಹಂಚಿಕೆ ವಿಚಾರವಾಗಿ ಆಡಳಿತ ಪಕ್ಷದೊಳಗೆ ಭುಗಿಲೆದ್ದಿರುವ ಅಸಮಾಧಾನ ಹಾಗೂ ಅತೃಪ್ತಿಯು ಈ ಬೆಳವಣಿಗೆಯೊಂದಿಗೆ ಮತ್ತಷ್ಟು ಸ್ಫೋಟಗೊಂಡಂತಾಗಿದೆ. ಮುಂಬರುವ ದಿನಗಳಲ್ಲಿ ಅಸಮಾಧಾನಿತ ಶಾಸಕರ ಮುಂದಿನ ಹೆಜ್ಜೆ ಏನು ಎಂಬುದು ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ.

