ಬೆಂಗಳೂರು: ಬೆಂಗಳೂರಿನ ಹೊರವಲಯದ 8ನೇ ಮೈಲಿ ಸಿಗ್ನಲ್ ಬಾಳಿ ಕೆ.ಎಸ್.ಆರ್.ಟಿ.ಸಿ ಬಸ್ ಚಾಲಕರು ಸಂಜೆಯಾಗುತ್ತಿದ್ದಂತೆ ಹೊಸ ಕಳ್ಳಾಟ ಶುರು ಮಾಡುತ್ತಾರೆ. ಸ್ಥಳೀಯ ಪ್ರಯಾಣಿಕರನ್ನು ಹತ್ತಿಸಿಕೊಳ್ಳದೇ ದೂರದೂರುಗೌಗೆ ಹೋಗುವ ಪ್ರಯಾಣಿಕರನ್ನು ಮಾತ್ರ ಹತ್ತಿಸಿಕೊಳ್ಳುತ್ತಿದ್ದಾರೆ. ಇದರಿಂದ ಸಿಡಿದೆದ್ದ ಮಹಿಳಾ ಪ್ರಯಾಣಿಕರೊಬ್ಬರು ಬಸ್ ಅಡ್ಡಗಟ್ಟಿ ಪ್ರತಿಭಟಿಸಿದ ಘಟನೆ ನಡೆದಿದೆ.
ಬೆಂಗಳೂರಿನ 8ನೇ ಮೈಲಿ ಸಿಗ್ನಲ್ ಬಳಿ ಕೆಎಸ್‌ಆರ್‌ಟಿಸಿ ಬಸ್‌ಗಳು ತುಮಕೂರು, ಚಿತ್ರದುರ್ಗದಂತಹ ಸ್ಥಳೀಯ ಪ್ರಯಾಣಿಕರನ್ನು ಹತ್ತಿಸಿಕೊಳ್ಳದೆ ವಂಚಿಸುತ್ತಿವೆ. ಕೇವಲ ದೂರದ ಊರುಗಳ ಪ್ರಯಾಣಿಕರಿಗೆ ಮಾತ್ರ ಆದ್ಯತೆ ನೀಡುತ್ತಿವೆ. ಇದರಿಂದಾಗಿ ಸಂಜೆ 6 ಗಂಟೆ ಬಳಿಕ ಸ್ಥಳೀಯ ಪ್ರಯಾಣಿಕರು ಬಸ್ ಗಳಿಲ್ಲದೇ ಸಂಕಷ್ಟಕ್ಕೆ ಸಿಲುಕುವಂತಾಗಿದೆ ಎಂಬ ಆರೋಪ ಕೇಳಿಬಂದಿದೆ.
ಕೆ.ಎಸ್.ಆರ್.ಟಿ.ಸಿ ಬಸ್ ಗಳ ಈ ಧೊರಣೆಯಿಂದ ನೊಂದ ಮಹಿಳೆಯೊಬ್ಬರು ಇತ್ತೀಚೆಗೆ ಬಸ್ ಅಡ್ಡಗಟ್ಟಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಸ್‌ಗಳ ಮುಂಭಾಗದಲ್ಲಿ ‘ವಯಾ ತುಮಕೂರು, ಚಿತ್ರದುರ್ಗ’ ಎಂದು ಸ್ಪಷ್ಟವಾಗಿ ಬೋರ್ಡ್ ಹಾಕಿದ್ದರೂ, ಈ ಭಾಗದ ಪ್ರಯಾಣಿಕರನ್ನು ಬಸ್‌ಗೆ ಹತ್ತಿಸಿಕೊಳ್ಳದೆ ನಡುರಸ್ತೆಯಲ್ಲೇ ಬಿಟ್ಟುಹೋಗುತ್ತಿದ್ದಾರೆ.
ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳಿಗೆ ತೆರಳುವ ಬಹುತೇಕ ಬಸ್‌ಗಳು ಕೇವಲ ‘ಲಾಂಗ್ ರೂಟ್’ ಪ್ರಯಾಣಿಕರಿಗೆ ಮಾತ್ರ ಆದ್ಯತೆ ನೀಡುತ್ತಿವೆ. ತುಮಕೂರು, ಸಿರಾ, ಹಿರಿಯೂರು ಹಾಗೂ ಚಿತ್ರದುರ್ಗಕ್ಕೆ ತೆರಳುವ ಪ್ರಯಾಣಿಕರು ಎಷ್ಟೇ ಅಂಗಲಾಚಿದರೂ, ಬಸ್ ಬಾಗಿಲನ್ನೇ ತೆರೆಯದೆ ‘ಸ್ಟಾಪ್ ಕೊಡಲ್ಲ, ಬಸ್ ಹೋಗಲ್ಲ’ ಎಂದು ಸಿಬ್ಬಂದಿ ಉಡಾಫೆಯ ಉತ್ತರ ನೀಡುತ್ತಿದ್ದಾರೆ. ಬಸ್‌ನಲ್ಲಿ ಸೀಟುಗಳು ಸಂಪೂರ್ಣ ಖಾಲಿ ಇದ್ದರೆ ಮಾತ್ರ ಅನಿವಾರ್ಯವಾಗಿ ಸ್ಥಳೀಯರನ್ನು ಹತ್ತಿಸಿಕೊಳ್ಳುತ್ತಾರೆ. ಇಲ್ಲದಿದ್ದರೆ ಹಾಗೆಯೇ ಬಿಟ್ಟು ಹೋಗುತ್ತಾರೆ. ಇದರಿಂದಾಗಿ ಸ್ಥಳೀಯ ಪ್ರಯಾಣಿಕರು ತೀವ್ರ ಸಮಸ್ಯೆ ಎದುರಿಸುವಂತಾಗಿದೆ.
ಇತ್ತೀಚೆಗೆ ಮಹಿಳಾ ಪ್ರಯಾಣಿಕರೊಬ್ಬರು ಸುಮಾರು ಎರಡೂವರೆ ಗಂಟೆಗಳ ಕಾಲ ಬಸ್ ಗಾಗಿ ಕಾದು ಕಾದು ಸುಸ್ತಾದರೂ ಯಾವುದೇ ಬಸ್ ನಿಲ್ಲಿಸದಿದ್ದಾಗ, ರೊಚ್ಚಿಗೆದ್ದು ‘KA 29 F 1653’ ನೋಂದಣಿ ಸಂಖ್ಯೆಯ ಕೆಎಸ್‌ಆರ್‌ಟಿಸಿ ಬಸ್‌ಗೆ ಅಡ್ಡಗಟ್ಟಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಳಿಕ ಅವರನ್ನು ಬಸ್ಸಿಗೆ ಹತ್ತಿಸಿಕೊಳ್ಳಲಾಗಿದೆ. ಪ್ರತಿದಿನ ಸಂಜೆಯಾದರೆ ಇದೇ ಗೋಳು, ಮಹಿಳೆಯರು-ವೃದ್ಧರು ಎನ್ನದೆ ಎಲ್ಲರನ್ನೂ ಸತಾಯಿಸಲಾಗುತ್ತ’ ಎಂದು ಪ್ರಯಾಣಿಕರು ಅಲವತ್ತುಕೊಂಳ್ಳುತ್ತಿದ್ದಾರೆ.
ಈ ಬಗ್ಗೆ ಕೆ.ಎಸ್.ಆರ್.ಟಿ.ಸಿ ಉನ್ನತಾಧಿಕಾರಿಗಳು ತಕ್ಷಣವೇ ಎಚ್ಚೆತ್ತುಕೊಂಡು ಬೆಂಗಳೂರಿನ 8ನೇ ಮೈಲಿ ಸಿಗ್ನಲ್ ಬಳಿ ಪರಿಶೀಲನೆ ನಡೆಸಿ ಪ್ರಯಾಣಿಕರನ್ನು ಹತ್ತಿಸಿಕೊಳ್ಳದ ಬಸ್ ಚಾಲಕರು ಹಾಗೂ ನಿರ್ವಾಹಕರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ವಿದ್ಯಾರ್ಥಿಗಳ ಸ್ಕಾಲರ್ಪ್ ಶಿಪ್ ಹಣಕ್ಕಾಗಿ ನಕಲಿ ಸರ್ಟಿಫಿಕೇಟ್ ಸೃಷ್ಟಿಸಿ ದಾಖಲೆ ಸಲ್ಲಿಕೆ: 50 ಅರ್ಜಿ ತಿರಸ್ಕೃತ; ವಿದ್ಯಾರ್ಥಿಗಳ ಕಳ್ಳಾಟ ಬಯಲು
ಕೊಪ್ಪಳ: ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸಮಾಜ ಕಲ್ಯಾಣ ಇಲಾಖೆಯಿಂದ ನೀಡಲಾಗುವ ಪ್ರೋತ್ಸಾಹ ಧನಕ್ಕಾಗಿ ನಕಲಿ ಸೃಷ್ಟಿಫಿಕೇಟ್ ಸೃಷ್ಟಿಸಿ ದಾಅಖಲೆ ಸಲ್ಲಿಸಿರುವ ಘಟನೆ ಕೊಪ್ಪಳದಲ್ಲಿ ಬೆಳಕಿಗೆ ಬಂದಿದೆ.
ಕೊಪ್ಪಳ ಜಿಲ್ಲೆಯಲ್ಲಿ 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ನಕಲಿ ಅಂಕಪಟ್ಟಿಗಳನ್ನು ಸೃಷ್ಟಿಸಿ ಅರ್ಜಿ ಸಲ್ಲಿಸಿರುವುದು ಬಯಲಾಗಿದೆ. ಝೆರಾಕ್ಸ್ ಅಂಗಡಿಗಳಲ್ಲಿ ಅಂಕಗಳನ್ನು ತಿದ್ದಿ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾದಂತೆ ನಕಲಿ ಪ್ರತಿಗಳನ್ನು ಸಲ್ಲಿಸಿರುವ ಕಳ್ಳಾಟ ಬೆಳಕಿಗೆ ಬಂದಿದೆ. ಎಲ್ಲಾ ನಕಲಿ ಅರ್ಜಿಗಳನ್ನು ತಿರಸ್ಕರಿಸಿ ತಪ್ಪು ಎಸಗಿದ ವಿದ್ಯಾರ್ಥಿಗಳಿಗೆ ಇಲಾಖೆಯಿಂದ ಬುದ್ಧಿವಾದ ಹೇಳಿ ಕಳುಹಿಸಲಾಗಿದೆ.
ಪರಿಶಿಷ್ಟ ಜಾತಿಯ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ 30 ಸಾವಿರ ರೂ., ಸ್ನಾತಕ 25 ಸಾವಿರ ರೂ., ಪಿಯುಸಿ 20 ಸಾವಿರ ರೂ., ಎಸ್ಸೆಸ್ಸೆಲ್ಸಿ 15 ಸಾವಿರ ರೂ. ಗಳನ್ನು ಪ್ರೋತ್ಸಾಹ ಧನವನ್ನಾಗಿ ಇಲಾಖೆ ನೀಡುತ್ತಾ ಬಂದಿದೆ. ಪ್ರತಿಭಾನ್ವಿತ ಬಡ ವಿದ್ಯಾರ್ಥಿಗಳಿಗೆ, ಪ್ರಥಮ ಶ್ರೇಣಿಯಲ್ಲಿ ಪಾಸಾಗುವ ವಿದ್ಯಾರ್ಥಿಗಳಿಗೆ ಮುಂದಿನ ಶೈಕ್ಷಣಿಕ ಜೀವನಕ್ಕೆ ಅನುಕೂಲವಾಗಲಿ ಎಂದು ಸಮಾಜ ಕಲ್ಯಾಣ ಇಲಾಖೆಯ ಮೂಲಕ ಸರ್ಕಾರ ಈ ಸ್ಕಾಲರ್ ಶಿಪ್ ಹಣ ವಿತರಿಸುತ್ತದೆ.
ಆದರೆ, 2025-26ನೇ ಹಾಗೂ ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಪದವಿ ಹಾಗೂ ಸ್ನಾತಕೋತ್ತರ ಪದವಿ ಪರೀಕ್ಷೆಗಳಲ್ಲಿ ಶೇಕಡಾ 60 ಕ್ಕಿಂತ ಹೆಚ್ಚು ಅಂಕಗಳೊಂದಿಗೆ ಉತ್ತೀರ್ಣರಾದಂತೆ ಅಂಕಪಟ್ಟಿ ಗಳನ್ನು ತಿದ್ದಿ, ಹಲವು ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿರುವುದು ಪರಿಶೀಲನೆ ವೇಳೆ ಬೆಳಕಿಗೆ ಬಂದಿದೆ. ನಕಲಿ ಅಂಕಪಟ್ಟಿ ಎಂಬುದು ದೃಢವಾಗುತ್ತಿದ್ದಂತೆಯೇ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಅರ್ಜಿಗಳನ್ನು ತಿರಸ್ಕರಿಸಿದ್ದಾರೆ.
ಪ್ರಥಮ ಶ್ರೇಣಿಯಲ್ಲಿ ಪಾಸಾಗುವ ವಿದ್ಯಾರ್ಥಿಗಳಿಗೆ ಮಾತ್ರ ಪ್ರೋತ್ಸಾಹ ಧನ ನೀಡುವುದರಿಂದ ವಿದ್ಯಾರ್ಥಿಗಳು ಕಡ್ಡಾಯವಾಗಿ ಅರ್ಜಿಯೊಂದಿಗೆ ಅಂಕಪಟ್ಟಿಯ ಝೆರಾಕ್ಸ್ ಪ್ರತಿ ಸಲ್ಲಿಸಿರುತ್ತಾರೆ. ಯುಸಿಎಂಎಸ್‌ನಲ್ಲಿ ವಿದ್ಯಾರ್ಥಿಗಳ ಅಂಕ ಪಟ್ಟಿ ನಂಬರ್ ಹಾಕಿದ ಕೂಡಲೇ ವಾಸ್ತವವಾಗಿ ವಿದ್ಯಾರ್ಥಿ ಪಡೆದಿರುವ ಅಂಕವೆಷ್ಟು ಎಂಬುದು ನಿಖರವಾಗಿ ಗೊತ್ತಾಗಲಿದೆ. ಈ ರೀತಿ ಕಳೆದ ವರ್ಷ ಹಾಗೂ ಪ್ರಸಕ್ತ ಸಾಲಿನಲ್ಲಿ ಬಂದ ಅರ್ಜಿಗಳಲ್ಲಿ ಅಂಕಪಟ್ಟಿ ಪರಿಶೀಲಿಸಿದಾಗ 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ತಾವು ಪ್ರಥಮ ಶ್ರೇಣಿಯಲ್ಲಿ ಪಾಸಾಗದಿದ್ದರೂ ಪಾಸಾದವರಂತೆ ಅಂಕಪಟ್ಟಿ ತಿದ್ದುಪಡಿ ಮಾಡಿ, ಅರ್ಜಿ ಸಲ್ಲಿಸಿದ್ದಾರೆ. 50 ಅರ್ಜಿಗಳನ್ನು ತಿರಸ್ಕರಿಸಲಾಗಿದೆ. ಇಂತಹ ವಿದ್ಯಾಅರ್ಥಿಗಳನ್ನು ಪತ್ತೆ ಮಾಡಿ ಅವರನ್ನು ಕರೆದು ಇನ್ನೊಮ್ಮೆ ಈ ರೀತಿ ತಪ್ಪು ಮಾಡದಂತೆ ಬುದ್ಧಿವಾದ ಹೇಳಿ ಅಧಿಕಾಅರಿಗಳು ಕಳುಹಿಸಿದ್ದಾರೆ.

