ಕರ್ನಾಟಕದ ಕರಾವಳಿ ಭಾಗದ ಜನರ ವಿರೋಧದ ನಡುವೆಯೂ ರೈಲ್ವೆ ಇಲಾಖೆ ಕೆಎಸ್‌ಆರ್ ಬೆಂಗಳೂರು-ಕಣ್ಣೂರು ಎಕ್ಸ್‌ಪ್ರೆಸ್ (16511/ 16512) ರೈಲನ್ನು ಕೋಯಿಕ್ಕೋಡ್‌ಗೆ ವಿಸ್ತರಣೆ ಮಾಡಿದೆ. ಮಾರ್ಚ್ 15, 2026 ರಿಂದಲೇ ಜಾರಿಗೆ ಬರುವಂತೆ ರೈಲು ಕೋಯಿಕ್ಕೋಡ್‌ಗೆ ವಿಸ್ತರಣೆಯಾಗಿದೆ.
ಈ ರೈಲು ಸೇವೆಯಿಂದ ಮಂಗಳೂರು-ಬೆಂಗಳೂರು ನಡುವಿನ ಸಂಚಾರ ಸುಲಭವಾಗುವುದಿಲ್ಲ. ಕರ್ನಾಟಕಕ್ಕಿಂತ ಈ ರೈಲು ಕೇರಳ ರಾಜ್ಯಕ್ಕೆ ಹೆಚ್ಚು ಅನುಕೂಲವಾಗಲಿದೆ. ಮಂಗಳೂರು ನಗರಕ್ಕೆ ಪ್ರಯಾಣಿಸುವ ಜನರಿಗೆ ಸೀಟು ಸಿಗುವುದಿಲ್ಲ ಎಂಬುದು ಪ್ರಯಾಣಿಕರ ದೂರು.
ಆದ್ದರಿಂದಲೇ ಈ ರೈಲು ಸೇವೆ ವಿಸ್ತರಣೆಗೆ ವಿರೋಧ ವ್ಯಕ್ತವಾಗುತ್ತಿತ್ತು. ಆದರೆ ಈಗ ಕೆಎಸ್ಆರ್ ಬೆಂಗಳೂರು–ಕಣ್ಣೂರು ಎಕ್ಸ್‌ಪ್ರೆಸ್ ರೈಲನ್ನು ಕೋಯಿಕ್ಕೋಡ್ (ಕ್ಯಾಲಿಕಟ್) ತನಕ ವಿಸ್ತರಿಸಲಾಗಿದೆ.
ಕೇರಳದ ಮಲಬಾರ್ ಭಾಗದ ಪ್ರಯಾಣಿಕರು ಬೆಂಗಳೂರು ನಗರದೊಂದಿಗೆ ಉತ್ತಮ ಸಂಪರ್ಕ ಸಾಧಿಸಲು ಅನುಕೂಲವಾಗುತ್ತದೆ. ಆದರೆ ಕರಾವಳಿ ಕರ್ನಾಟಕದ ರೈಲು ಬಳಕೆದಾರರು ಸೀಟು ಸಿಗುವುದಿಲ್ಲ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಮಂಗಳೂರು ಮತ್ತು ಸುತ್ತಮುತ್ತಲ ಕರಾವಳಿ ಜಿಲ್ಲೆಗಳಿಗೆ ಪ್ರಯಾಣಿಸುವವರಿಂದ ಈ ರೈಲು ಈಗಾಗಲೇ ಕಿಕ್ಕಿರಿದು ತುಂಬಿರುತ್ತದೆ. ರೈಲಿಗೆ ಹೆಚ್ಚುವರಿ ಬೋಗಿಗಳನ್ನು ಸೇರಿಸದ ಹೊರತು, ಈ ವಿಸ್ತರಣೆಯಿಂದ ಸೀಟುಗಳ ಕಾಯ್ದಿರಿಸುವಿಕೆ ಮತ್ತಷ್ಟು ಕಷ್ಟವಾಗಬಹುದು ಎಂದು ಆತಂಕಗೊಂಡಿದ್ದಾರೆ.
ರೈಲು ಸೇವೆ ವಿಸ್ತರಣೆ ಮಾಡಲಾಗಿದೆ. ಆದರೆ, ಬೆಂಗಳೂರು ಮತ್ತು ಪಯ್ಯನ್ನೂರು ನಡುವಿನ ರೈಲಿನ ಸಂಮಯದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ಇಷ್ಟು ದಿನ ರೈಲು ಸಂಖ್ಯೆ 16511/ 16512 ಬೆಂಗಳೂರು ನಗರ (ಕೆಎಸ್‌ಆರ್ ಬೆಂಗಳೂರು)-ಕಣ್ಣೂರು ನಡುವೆ ಸಂಚರಿಸುತ್ತಿತ್ತು. ಈ ಪ್ರತಿದಿನದ ಎಕ್ಸ್‌ಪ್ರೆಸ್ ರೈಲು ಇನ್ನುಮುಂದೆ ಕೋಯಿಕ್ಕೋಡ್‌ವರೆಗೆ ವಿಸ್ತರಣೆಗೊಂಡು ಸಂಚರಿಸಲಿದೆ ಎಂದು ದಕ್ಷಿಣ ರೈಲ್ವೆ ಹೇಳಿದೆ.
ಮಾರ್ಚ್ 15, 2026ರಿಂದ ಬೆಂಗಳೂರು ನಗರದಿಂದ ಹೊರಡುವ 16511 ಎಕ್ಸ್‌ಪ್ರೆಸ್ ರೈಲು ಕೋಯಿಕ್ಕೋಡ್‌ವರೆಗೆ ಸಂಚರಿಸಲಿದೆ. ಹಾಗೆಯೇ ಮಾರ್ಚ್ 16 ರಿಂದ ಕೋಯಿಕ್ಕೋಡ್‌ನಿಂದ 16512 ಎಕ್ಸ್‌ಪ್ರೆಸ್ ರೈಲು ಬೆಂಗಳೂರು ನಗರಕ್ಕೆ ಪ್ರಯಾಣ ಆರಂಭಿಸಲಿದೆ.
ರೈಲು ಇನ್ನುಮುಂದೆ ಕಣ್ಣೂರಿನ ಬಳಿಕ ತಲಸ್ಸೇರಿ, ವಡಕರ ಮತ್ತು ಕೊಯಿಲಾಂಡಿ ನಿಲ್ದಾಣಗಳಲ್ಲಿ ನಿಲುಗಡೆ ಪಡೆಯಲಿದೆ. ಕೋಯಿಕ್ಕೋಡ್ ನಿಲ್ದಾಣಕ್ಕೆ ಮಧ್ಯಾಹ್ನ ಸುಮಾರು 12.40ಕ್ಕೆ ತಲುಪಲಿದ್ದು, ಮರಳಿ ಕೋಯಿಕ್ಕೋಡ್‌ನಿಂದ ಮಧ್ಯಾಹ್ನ 3.30ಕ್ಕೆ ಹೊರಟು ಬೆಂಗಳೂರು ನಗರಕ್ಕೆ ಆಗಮಿಸಲಿದೆ.
ಬೆಂಗಳೂರು ನಗರದಿಂದ ಪಯ್ಯನ್ನೂರುವರೆಗೆ ಇರುವ ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ವಿಸ್ತರಣೆಗೊಂಡ ರೈಲು ಸೇವೆಗೆ ಈಗಿರುವ ಬೋಗಿ ಸಂಯೋಜನೆಯನ್ನೇ ಬಳಸಲಾಗುತ್ತದೆ.
ಈ ಕುರಿತು ಸಂಬಂಧಪಟ್ಟ ಎಲ್ಲಾ ರೈಲು ವಿಭಾಗಗಳಿಗೆ ಸೂಚನೆ ನೀಡಲಾಗಿದ್ದು, ನಿಲ್ದಾಣಗಳ ಸೂಚನಾ ಫಲಕ, ಮುದ್ರಣ ಮಾಧ್ಯಮ, ಎಲೆಕ್ಟ್ರಾನಿಕ್ ಹಾಗೂ ಸಾಮಾಜಿಕ ಜಾಲತಾಣಗಳ ಮೂಲಕ ಜನರಿಗೆ ಈ ಕುರಿತು ಮಾಹಿತಿ ನೀಡಬೇಕು ಎಂದು ದಕ್ಷಿಣ ರೈಲ್ವೆ ಹೇಳಿದೆ.

