ಕರ್ನಾಟಕ ಸರ್ಕಾರ ಮಹತ್ವದ ಬೆಳವಣಿಗೆಯೊಂದರಲ್ಲಿ ಕರ್ನಾಟಕ ರೇಷ್ಮೆ ಮಾರಾಟ ಮಂಡಳಿ ನಿಯಮಿತವನ್ನು ವಿಲೀನಗೊಳಿಸುವ ತೀರ್ಮಾನ ಕೈಗೊಂಡಿದೆ. ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮ ನಿಯಮಿತದೊಂದಿಗೆ ಇದು ವಿಲೀನವಾಗಲಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ತೀರ್ಮಾನ ಕೈಗೊಳ್ಳಲಾಗಿದೆ. ಕರ್ನಾಟಕ ರೇಷ್ಮೆ ಮಾರಾಟ ಮಂಡಳಿಯನ್ನು ರೇಷ್ಮೆ ನೂಲು ಬೆಲೆಯ ಏರಿಳಿತ ಸ್ಥಿರತೆ ಕಾಪಾಡುವ ಉದ್ದೇಶದಿಂದ ಸ್ಥಾಪಿಸಲಾಗಿತ್ತು.
ಆದರೆ, 2006 ನೇ ಸಾಲಿನಿಂದ ಕೇಂದ್ರ ಸರ್ಕಾರವು ರೇಷ್ಮೆ ನೂಲನ್ನು ಮುಕ್ತ ಮಾರುಕಟ್ಟೆ ವ್ಯವಸ್ಥೆಗೆ ತಂದಿರುವುದರಿಂದ ಮಂಡಳಿಯ ಮೂಲಕ ಮಾರಾಟವಾಗುತ್ತಿದ್ದ ರೇಷ್ಮೆ ನೂಲು ನೇರವಾಗಿ ರೇಷ್ಮೆ ನೂಲು ಬಳಕೆದಾರರಿಗೆ ಮಾರಾಟವಾಗುತ್ತಲಿದೆ. ಇದರಿಂದ ಮಂಡಳಿಯ ವಹಿವಾಟು ಕುಂಠಿತಗೊಂಡು ನಷ್ಟವಾಗಿತ್ತು.
ಆರ್ಥಿಕ ಇಲಾಖೆಯು ಕರ್ನಾಟಕ ರೇಷ್ಮೆ ಮಾರಾಟ ಮಂಡಳಿಯ ಆರ್ಥಿಕ ಪರಿಸ್ಥಿತಿಯನ್ನು ಪರಿಗಣಿಸಿ ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮ ನಿಯಮಿತದೊಂದಿಗೆ ವಿಲೀನಗೊಳಿಸಲು ಪ್ರಸ್ತಾವನೆ ಸಲ್ಲಿಕೆ ಮಾಡಿತ್ತು.
ಅಲ್ಲದೇ ಆಡಳಿತ ಸುಧಾರಣಾ ಆಯೋಗವು ಈ ಸಂಸ್ಥೆಯನ್ನು ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮ ನಿಯಮಿತದೊಂದಿಗೆ ವಿಲೀನಗೊಳಿಸಲು ಶಿಫಾರಸ್ಸು ಮಾಡಿತ್ತು ಎಂದು ಪ್ರಸ್ತಾವನೆಯಲ್ಲಿ ತಿಳಿಸಿತ್ತು.
ಆದ್ದರಿಂದ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಸಿ ಈ ಕೆಳಕಂಡ ತೀರ್ಮಾನ ಕೈಗೊಳ್ಳಲಾಗಿದೆ.
* ಕರ್ನಾಟಕ ರೇಷ್ಮೆ ಮಾರಾಟ ಮಂಡಳಿಯನ್ನು ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮ ನಿಯಮಿತಕ್ಕೆ ವಿಲೀನ
* ಕರ್ನಾಟಕ ರೇಷ್ಮೆ ಮಾರಾಟ ಮಂಡಳಿಯಲ್ಲಿ ಹಾಲಿ ಕರ್ತವ್ಯ ನಿರ್ವಹಿಸುತ್ತಿರುವ 9 ಖಾಯಂ ಸಿಬ್ಬಂದಿಗಳನ್ನು ಹುದ್ದೆ ಸಮೇತ ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮ ನಿಯಮಿತಕ್ಕೆ ವಿಲೀನಗೊಳಿಸಿ ವೇತನ ಹಾಗೂ ಇತರೆ ಭತ್ಯೆಗಳನ್ನು ಪಾವತಿ.
* ಕರ್ನಾಟಕ ರೇಷ್ಮೆ ಮಾರಾಟ ಮಂಡಳಿ ನಿಯಮಿತದಲ್ಲಿರುವ ರೂ.10.00 ಕೋಟಿ ಮೊತ್ತವನ್ನು ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮದಲ್ಲಿ ಠೇವಣಿ ಇಟ್ಟುಕೊಂಡು ಮಾರುಕಟ್ಟೆ ಪ್ರವೇಶಿಸಿ ಬೆಲೆ ನಿಯಂತ್ರಣ ಚಟುವಟಿಕೆಯನ್ನು ನಿರ್ವಹಿಸಲು ಹಾಗೂ ಈಗಾಗಲೇ ಸಿಬ್ಬಂದಿಗಳಿಗೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಬಾಕಿಯಿರುವ ಪ್ರಕರಣಗಳಲ್ಲಿ ಕಂಪನಿಯ ವಿರುದ್ಧವಾಗಿ ತೀರ್ಪು ಬಂದಲ್ಲಿ ಹೊಣೆಗಾರಿಕೆಯನ್ನು ಕೆ.ಎಸ್.ಐ.ಸಿ ಯಿಂದ ಪಾವತಿಸಲು ಕ್ರಮ.
* ಕರ್ನಾಟಕ ರೇಷ್ಮೆ ಮಾರಾಟ ಮಂಡಳಿಯು ನಿರ್ವಹಿಸಿರುವ ಕರ್ತವ್ಯಗಳು ಮತ್ತು ಜವಾಬ್ದಾರಿಗಳನ್ನು ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮವು ಮುಂದುವರೆಸುವುದು ಎಂದು ಸಚಿವ ಸಂಪುಟ ನಿರ್ಣಯಿಸಿದೆ.
ಕರ್ನಾಟಕ ರೇಷ್ಮೆ ಮಾರಾಟ ಮಂಡಳಿ ನಿಯಮಿತ: ಕರ್ನಾಟಕ ರೇಷ್ಮೆ ಮಾರಾಟ ಮಂಡಳಿಯು ಭಾರತ ಸರ್ಕಾರದ ಕೇಂದ್ರ ರೇಷ್ಮೆ ಮಂಡಳಿಯ ತಾಂತ್ರಿಕ ಪರೀಕ್ಷೆಯ ಆಧಾರದ ಮೇಲೆ ಉತ್ತಮ ಗುಣಮಟ್ಟದ ಫಿಲೇಚರ್ ರೇಷ್ಮೆಯನ್ನು ಖರೀದಿಸುವುದಲ್ಲದೆ, ಚರಕಾ ರೇಷ್ಮೆಯನ್ನು ಕಣ್ಣೋಟ ಪರೀಕ್ಷೆಯಿಂದ ಉತ್ತಮ ಗುಣಮಟ್ಟದ ರೇಷ್ಮೆಯನ್ನು ಮಾತ್ರ ಖರೀದಿಸುವುದು ಕೆಎಸ್‌ಎಂಬಿಯ ಉದ್ದೇಶವಾಗಿತ್ತು.
ನೇಕಾರರು, ಹುರಿಕಾರರು, ವರ್ತಕರು, ಸಹಕಾರಿ ಸಂಸ್ಥೆಗಳು, ಮತ್ತು ರಾಜ್ಯ ಸರ್ಕಾರದ ಸಂಘ ಸಂಸ್ಥಗಳು ಗ್ರಾಹಕರಾಗಿರುತ್ತಾರೆ. ಟೆಂಡರ್ ಮೂಲಕ ಭಾಗವಹಿಸಿ ರಾಜ್ಯ ಸರ್ಕಾರದ ಸಂಸ್ಥಯಾದ ಕೈಮಗ್ಗ ಅಭಿವೃದ್ಧಿ ನಿಗಮ ರೇಷ್ಮೆಯನ್ನು ಮಾರಾಟ ಮಾಡುತ್ತಿತ್ತು ಹಾಗೂ ಕೈಮಗ್ಗ ಹೊಂದಿರುವ ನೇಕಾರರಿಗೆ ಭಾರತ ಸರ್ಕಾರದ ಸಂಸ್ಥೆಯಾದ ಎನ್. ಹೆಚ್.ಡಿ.ಸಿ ರವರ ಮುಖಾಂತರ ರೇಷ್ಮೆ ಸರಬರಾಜು ಯೋಜನೆ ಅಡಿಯಲ್ಲಿ ರೇಷ್ಮೆಯನ್ನು ಮಾರಾಟ ಮಾಡಲಾಗುತ್ತಿತ್ತು. ಉತ್ತರ ಭಾರತದ ಮರಾಠಿ ಪೈತಾನಿ ಸೆಂಟರ್, ಎಂ.ಎಸ್.ಎಸ್.ಐ.ಡಿ.ಸಿ ಲಿಮಿಟೆಡ್ ರವರು ಗ್ರಾಹಕರಾಗಿದ್ದರು.
ಖರೀದಿ ಮತ್ತು ಮಾರಾಟ ನೀತಿ
- ನಿರ್ದೇಶಕರ ಮಂಡಳಿಯಿಂದ ಖರೀದಿ ಬೆಲೆ ನಿಗದಿಪಡಿಸಲಾಗುವುದು.
- ರೀಲರ್ ಗಳಿಂದ ಖರೀದಿಸಿದ ರೇಷ್ಮೆಯ ಮೌಲ್ಯದ ಮೇಲೆ ರೇಷ್ಮೆ ಇಲಾಖೆಗೆ ಮಾರುಕಟ್ಟೆ ಶುಲ್ಕ ಶೇ.0.5 ಅನ್ನು ಪಾವತಿಸಲಾಗುವುದು.
- ಕೇಂದ್ರ ರೇಷ್ಮೆ ಮಂಡಳಿಯ ಗುಣಮಟ್ಟದ ವರದಿಯ ಮೇಲೆ ರೇಷ್ಮೆ ಬೆಲೆಯನ್ನು ನಿಗದಿಪಡಿಸಲಾಗುವುದು.
- ನಗದು ಮಾರಾಟ ನೀತಿ
- ಬ್ಯಾಂಕ್ ಗ್ಯಾರಂಟಿ, ನಿಶ್ಚಿತ ಠೇವಣಿ ಆಧಾರದ ಸಾಲ

