ಬೆಂಗಳೂರು: ಬೆಂಗಳೂರು ಟರ್ಫ್ ಕ್ಲಬ್ ಅನ್ನು ತುಮಕೂರು ಜಿಲ್ಲೆಯ ಕುಣಿಗಲ್ ಸ್ಟಡ್ ಫಾರ್ಮ್ ಗೆ ಶಿಫ್ಟ್ ಮಾಡಲಾಗುವುದು. ಕ್ಲಬ್ ಜಾಗವನ್ನು ಹಾಗೆಯೇ ಉಳಿಸಿಕೊಳ್ಳಲು ಸಂಪುಟ ಸಭೆ ನಿರ್ಧಾರ ಕೈಗೊಂಡಿದೆ. ಹೀಗಾಗಿ ಬೆಂಗಳೂರಿನಿಂದ ರೇಸ್ ಕೋರ್ಸ್ ಸ್ಥಳಾಂತರ ಮಾಡಲು ನಿರ್ಧಾರ ಕೈಗೊಳ್ಳಲಾಗಿದೆ.
ಬೆಂಗಳೂರು ಟರ್ಫ್ ಕ್ಲಬ್ ಅನ್ನು ಕುಣಿಗಲ್ ಸ್ಟಡ್ ಫಾರ್ಮ್ ಗೆ ಸ್ಥಳಾಂತರ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಗುರುವಾರ ವಿಧಾನಸೌಧದಲ್ಲಿ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. ಬೆಂಗಳೂರು ಟರ್ಫ್ ಕ್ಲಬ್ ಸ್ಥಳಾಂತರಕ್ಕೆ ಸಂಪುಟ ಸಭೆ ತೀರ್ಮಾನಿಸಿದ್ದು, ಕುಣಿಗಲ್ ನ ಸ್ಟಡ್ ಫಾರ್ಮ್ ನಲ್ಲಿ 110 ಎಕರೆ ಜಮೀನು ನೀಡಲಾಗುವುದು. ಸ್ಥಳಾಂತರಕ್ಕೆ ಸಂಬಂಧಿಸಿದಂತೆ ಆದೇಶ ಹೊರಡಿಸಲಾಗುವುದು. ಎಷ್ಟು ಅವಧಿಯೊಳಗೆ ಸ್ಥಳಾಂತರಿಸಬೇಕು ಎನ್ನುವ ಮಾಹಿತಿ ಅದರಲ್ಲಿ ಇರಲಿದೆ ಎಂದು ಸಂಪುಟ ಸಭೆಯ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಸಚಿವ ಹೆಚ್.ಕೆ. ಪಾಟೀಲ್ ಮಾಹಿತಿ ನೀಡಿದ್ದಾರೆ.
ನಗರದ ಲಂಗ್ ಸ್ಪೇಸ್ ಪ್ರದೇಶವನ್ನಾಗಿ ಹಾಲಿ ಟರ್ಫ್ ಕ್ಲಬ್ ಜಾಗ ಉಳಿಸಿಕೊಳ್ಳಲಾಗುತ್ತದೆ. ಕಟ್ಟಡ ಮತ್ತು ಇತರೆ ಕ್ಲಬ್ ಹೌಸ್ ಗಳನ್ನು ಪಾರಂಪರಿಕ ಕಟ್ಟಡವನ್ನಾಗಿ ಉಳಿಸಿಕೊಳ್ಳಲಾಗುತ್ತದೆ. ಕಟ್ಟಡಗಳು ಒಟ್ಟು ನಾಲ್ಕು ಎಕರೆಯಲ್ಲಿದ್ದು ಅದನ್ನು ಟರ್ಫ್ ಕ್ಲಬ್ ನವರಿಗೆ ನೀಡಲಾಗುವುದು.
2010ರ ಜನವರಿ 1ರಿಂದ ಟರ್ಫ್ ಕ್ಲಬ್ ಬಾಡಿಗೆಯನ್ನು ಪರಿಷ್ಕರಿಸಿಲ್ಲ. ಈ ಬಗ್ಗೆ ಆಡಿಟ್ ಆಕ್ಷೇಪಣೆ ಜೊತೆಗೆ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಕೂಡ ಆಕ್ಷೇಪಣೆ ವ್ಯಕ್ತಪಡಿಸಿತ್ತು. ಟರ್ಫ್ ಕ್ಲ್ಬ್ ಸ್ಥಳಾಂತರಗೊಳಿಸುವಂತೆ ಸೂಚನೆ ನೀಡಿತ್ತು. ಹೀಗಾಗಿ 2010 ರಿಂದ ಹಿಡಿದು ಸ್ಥಳಾಂತರಗೊಳ್ಳುವ ಅವಧಿಯವರೆಗೆ ವಾರ್ಷಿಕ ಆದಾಯದಲ್ಲಿ ಶೇಕಡ 2ರಷ್ಟನ್ನು ಲೋಕೋಪಯೋಗಿ ಇಲಾಖೆಗೆ ಪಾವತಿಸಬೇಕು. ಸ್ಥಳಾಂತರಕ್ಕೆ ಸಂಬಂಧಿಸಿದ ಆದೇಶವನ್ನು ಶೀಘ್ರವೇ ಹೊರಡಿಸಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.

