ಶ್ರೀಕೃಷ್ಣ ಜನ್ಮಾಷ್ಟಮಿಯ ಶುಭ ಸಂದರ್ಭದಲ್ಲಿ ಭಕ್ತರು ಶ್ರೀಕೃಷ್ಣನಿಗೆ ನೆಚ್ಚಿನ ತಿನಿಸುಗಳನ್ನು ನೈವೇದ್ಯವಾಗಿ ಅರ್ಪಿಸುತ್ತಾರೆ. ಬೆಣ್ಣೆ ಮತ್ತು ಮಿಶ್ರಿಯ ಜೊತೆಗೆ ಕೊತ್ತಂಬರಿ ಬೀಜದಿಂದ ತಯಾರಿಸುವ ಧನಿಯಾ ಪಂಜಿರಿಯನ್ನು ಕೃಷ್ಣನಿಗೆ ಪ್ರಸಾದವಾಗಿ ನೀಡುವುದು ವಿಶೇಷ. ಧನಿಯಾ, ತುಪ್ಪ, ಒಣ ಹಣ್ಣುಗಳು ಮತ್ತು ಸಕ್ಕರೆಯನ್ನು ಬಳಸಿ ಮಾಡುವ ಈ ಪ್ರಸಾದವು ಜನ್ಮಾಷ್ಟಮಿ ಆಚರಣೆಯ ಪ್ರಮುಖ ಭಾಗವಾಗಿದೆ.
ಧನಿಯಾ ಪಂಜಿರಿ ಮಾಡುವುದು ಕಷ್ಟ ಅಥವಾ ಹೆಚ್ಚು ಸಮಯ ಹಿಡಿಯುತ್ತದೆ ಎಂದು ಭಾವಿಸಿದ್ದರೆ, ಕೇವಲ 10 ನಿಮಿಷಗಳಲ್ಲಿ ಸುಲಭವಾಗಿ ತಯಾರಿಸಬಹುದಾದ ಸರಳ ವಿಧಾನ ಇಲ್ಲಿದೆ.
ಧನಿಯಾ ಪಂಜಿರಿ ತಯಾರಿಸುವ ವಿಧಾನ:
ಮೊದಲು ಒಂದು ಕಪ್ ಇಡೀ ಕೊತ್ತಂಬರಿ ಬೀಜಗಳನ್ನು ಸ್ವಚ್ಛಗೊಳಿಸಿ, ಬಾಣಲೆಯಲ್ಲಿ ಹಾಕಿ ಹಸಿ ವಾಸನೆ ಹೋಗುವವರೆಗೆ ಡ್ರೈ ರೋಸ್ಟ್ ಮಾಡಿ ತಣಿಯಲು ಬಿಡಿ.
ನಂತರ ಅದೇ ಬಾಣಲೆಗೆ ಸ್ವಲ್ಪ ತುಪ್ಪ ಹಾಕಿ ಬಾದಾಮಿ, ಗೋಡಂಬಿ ಮತ್ತು ಕಮಲದ ಬೀಜಗಳನ್ನು (ಮಖಾನಾ) ಹೊಂಬಣ್ಣ ಬರುವವರೆಗೆ ಹುರಿದುಕೊಳ್ಳಿ. ಬಳಿಕ ಸ್ವಲ್ಪ ತುಪ್ಪದಲ್ಲಿ ಕಲ್ಲಂಗಡಿ ಬೀಜ ಮತ್ತು ತುರಿದ ಒಣ ಕೊಬ್ಬರಿಯನ್ನು ಲಘುವಾಗಿ ಹುರಿದು ಪಕ್ಕಕ್ಕೆ ಎತ್ತಿಟ್ಟುಕೊಳ್ಳಿ.
ಈಗ ತಣ್ಣಗಾದ ಕೊತ್ತಂಬರಿ ಬೀಜಗಳನ್ನು ಮಿಕ್ಸಿ ಜಾರ್‌ನಲ್ಲಿ ಹಾಕಿ ನುಣ್ಣಗೆ ಪುಡಿ ಮಾಡಿಕೊಳ್ಳಿ. ಬಾಣಲೆಯಲ್ಲಿ ಮತ್ತೊಂದು ಚಮಚ ತುಪ್ಪ ಕಾಯಿಸಿ, ಈ ಕೊತ್ತಂಬರಿ ಪುಡಿಯನ್ನು ಹಾಕಿ ಸುಮಾರು ಎರಡು ನಿಮಿಷಗಳ ಕಾಲ ಸಣ್ಣ ಉರಿಯಲ್ಲಿ ಹುರಿಯಿರಿ.
ಹುರಿದ ಕೊತ್ತಂಬರಿ ಪುಡಿಯನ್ನು ಒಂದು ಪಾತ್ರೆಗೆ ಹಾಕಿ ತಣಿಯಲು ಬಿಡಿ. ಪುಡಿ ಸಂಪೂರ್ಣ ತಣ್ಣಗಾದ ಮೇಲೆ ಅದಕ್ಕೆ ಸಕ್ಕರೆ ಪುಡಿ, ಹುರಿದಿಟ್ಟುಕೊಂಡ ಒಣ ಹಣ್ಣುಗಳು ಮತ್ತು ಏಲಕ್ಕಿ ಪುಡಿಯನ್ನು ಸೇರಿಸಿ ಚೆನ್ನಾಗಿ ಬೆರೆಸಿದರೆ ರುಚಿಕರವಾದ ಧನಿಯಾ ಪಂಜಿರಿ ಪ್ರಸಾದ ಸಿದ್ಧವಾಗುತ್ತದೆ.

