ಬೆಂಗಳೂರು: ಕೆಪಿಎಸ್‌ಸಿ ಪಶುವೈದ್ಯಾಧಿಕಾರಿ ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿದಂತೆ ದಿನಕ್ಕೊಂದು ಮಾಹಿತಿ, ಬಗೆದಷ್ಟು ಕರ್ಮಕಾಂಡಗಳು ಬಯಲಾಗುತ್ತಿವೆ. ಅಕ್ರಮದ ಬಗ್ಗೆ ದೂರು ನೀಡಿದ್ದ ಅಭ್ಯರ್ಥಿ ಮಂಜುನಾಥ ಅವರಿಗೆ ಅನಾಮಧೇಯ ವ್ಯಕ್ತಿಯೊವ್ಬ ಕರೆ ಮಾಡಿ ಬೆದರಿಕೆ ಹಾಕುತ್ತಿದ್ದಾನಂತೆ.
ಹೀಗೆ ಕರೆ ಮಾಡಿರುವ ಅನಾಮೇಧಯ ವ್ಯಕ್ತಿ, ವೆಟರನರಿ ಆಫೀಸರ್ ಲಿಸ್ಟ್‌ನಲ್ಲಿ ನನ್ನ ಫ್ರೆಂಡ್ ಒಬ್ಬಳ ಹೆಸರು ಕೊಟ್ಟಿದ್ದೀರಿ. ಏನು ಪ್ರೂಫ್ ಇಟ್ಟುಕೊಂಡು ಕೊಟ್ಟಿದ್ದೀರಿ. ಆಕೆ ಕೆಯ ಬಗ್ಗೆ ಯಾಕೆ ದೂರು ನೀಡಿದ್ದು? ಆಕೆ ತಪ್ಪು ಮಾಡಿದ್ದಾಳೆಂದು ಏನಾದ್ರೂ ಪ್ರೂಫ್ ಇದ್ಯಾ? ನೀನು ಎಲ್ಲಿರೋದು? ಯಾಕೆ ದೂರು ಕೊಟ್ಟೆ? ಏನು ಸಾಕ್ಷಿ ಇದೆ ಅಂತಾ ಕೊಟ್ಟೆ? 40% ಸ್ಕ್ಯಾಮ್ ಆಗಿದೆ ಅಂತಿದ್ರಲ್ಲ ಇದಕ್ಕೆಲ್ಲ ಸಾಕ್ಷಿಗಳಿವೆಯೇ? ನೀನು ಎಲ್ಲಿರೋದು ಅಂತಾ ಹೇಳು ಎಂದು ಆವಾಜ್ ಹಾಕಿದ್ದಾನೆ ಎಂದು ತಿಳಿದುಬಂದಿದೆ.
ಇದೇ ವೇಳೆ ಕೆಪಿಎಸ್ ಸಿ ಅಕ್ರಮ ಸಂಬಂಧ ಸಿಐಡಿ ಅಧಿಕಾರಿಗಳು ತನಿಖೆ ಚುರುಕುಗೊಳಿಸಿದ್ದು, ಸಿಐಡಿ ಕಸ್ಟಡಿಯಲ್ಲಿರುವ ಐಎ ಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಸಿಐಡಿ ಮುಂದೆ ತತ್ತೊಪ್ಪಿಕೊಂಡಿದ್ದಾರೆ. ಪಶುವೈದ್ಯಾಧಿಕಾರಿಗಳ ನೇಮಕಾತಿ ಪರೀಕ್ಷಾ ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಿದ್ದು ನಾನೆ. ಆರೋಪಿ ಬಸವರಾಜ್ ಕನ್ನಾಳೆಗೆ ಒಂದು ಪ್ರಶ್ನೆ ಪತ್ರಿಕೆ ನೀಡಿದ್ದಾಗಿ ಬಾಯ್ಬಿಟ್ಟಿದ್ದಾರೆ ಎಂದು ತಿಳಿದುಬಂಧಿದೆ.
ಈ ನಡುವೆ ಬಂಧನ ಭೀತಿಯಲ್ಲಿದ್ದ ಕೆಪಿಎಸ್‌ಸಿ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕರ್ ಗೆ ಸಂಕಷ್ಟ ಎದುರಾಗಿದೆ. ನಿರೀಕ್ಷಣಾ ಜಾಮೀನು ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.
ಶಿವಶಂಕಂರಪ್ಪ ಸಾಹುಕಾರ್ ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, .ನೀಟ್ ಪರೀಕ್ಷೆ ಅಕ್ರಮದಿಂದ ಕೆಲ ವಿದ್ಯಾರ್ಥಿಗಳೇ ಅತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಂತಹ ಕೃತ್ಯಗಳಿಂದಾಗಿಯೇ ಇತ್ತೀಚೆಗೆ ಭಾರೀ ಪ್ರತಿಭಟನೆ ನಡೆದಿದೆ. ಹೀಗಾದರೆ ರಾತ್ರಿ ಹಗಲು ಓದಿದವರ ಕಥೆ ಏನಾಗಬೇಕು? ಕೆಪಿಎಸ್‌ಸಿ ಮೇಲಿನ ಜನರ ವಿಶ್ವಾಸವೇ ನಾಶವಾಗಿದೆ. ನಿಮ್ಮ ಕುಟುಂಬದ ಸದಸ್ಯರೇ ಇದರಲ್ಲಿ ಭಾಗಿಯಾಗಿದ್ದಾರೆ. ಇದು ವ್ಯವಸ್ಥಿತ ಫ್ರಾಡ್ ಎಂದು ತರಾಟೆಗೆ ತೆಗೆದುಕೊಂಡು ಜಾಮೀನು ಅರ್ಜಿಯನ್ನು ವಜಾಗೊಳಿಸಿದೆ.
ಈ ಪ್ರಕರಣದಲ್ಲಿ ಬೇರೆಯವರಿಗೆ ಹೋಲಿಸಿದರೆ ಅರ್ಜಿದಾರರ ಪಾತ್ರ ಗಂಭೀರವಾಗಿದೆ. ಸರ್ಕಾರ ಒದಗಿಸಿರುವ ದಾಖಲೆಗಳು ಅರ್ಜಿದಾರರ ವಿರುದ್ಧವಾಗಿದೆ. ವ್ಯವಸ್ಥೆ ಹೀಗಾದರೆ ಪ್ರತಿಭಾನ್ವಿತ ವಿದ್ಯಾರ್ಥಿಗಳ ಪಾಡೇನಾಗಬೇಕು. ಪರೀಕ್ಷೆ ಬರೆದ ಕುಟುಂಬದವರ ಸ್ಥಿತಿ ಏನಾಗಬೇಕು? ಅಕ್ರಮ ಎಸಗಿದವರನ್ನು ಅಲ್ಲಲ್ಲೇ ಬಂಧಿಸಬೇಕು. ವ್ಯವಸ್ಥಿತ ಫ್ರಾಡ್ನಲ್ಲಿ ಶಿವಶಂಕರಪ್ಪ ಕುಟುಂಬ ಭಾಗಿಯಾಗಿದೆ/ ಪರೀಕ್ಷಾ ನಿಯಂತ್ರಕರು, ಸದಸ್ಯರು ಭಾಗಿಯಾಗಿರುವುದು ಕಾಣುತ್ತಿದೆ ಎಂದು ನ್ಯಾಯಮೂರ್ತಿ ಎಸ್.ವಿಶ್ವಜಿತ್ ಶೆಟ್ಟಿ ಅವರಿದ್ದ ಹೈಕೋರ್ಟ್ ಪೀಠ ಅಭಿಪ್ರಾಯ ಪಟ್ಟಿದೆ.
ನಿರ್ದಿಷ್ಟ ಹುದ್ದೆಗಳ ಅರ್ಜಿದಾರರು ಸಾಹುಕಾರ್ ಸಂಪರ್ಕದಲ್ಲಿದ್ದರು. ಬಂಧಿತ ಕನ್ನಾಳೆ ಕೂಡಾ ಸಾಹುಕಾರ್ ಜೊತೆ ಸಂಪರ್ಕದಲ್ಲಿದ್ದ. ಪರೀಕ್ಷೆಯ ದಿನದಂದು ಖಾಸಗಿ ಫೋನ್‌ನಿಂದ ರಾತ್ರಿ 8 ಗಂಟೆಯವರೆಗೆ ಫಲಾನುಭವಿಗಳ ಜೊತೆ ಮಾತನಾಡಿದ್ದಾರೆ. ಪುತ್ರ, ಪುತ್ರಿಯರು ಕೆಪಿಎಸ್‌ಸಿ ದುರ್ಬಳಕೆಗೆ ಅವಕಾಶ ನೀಡಿದ್ದಾರೆ. ಅಧಿಕಾರಿಗಳು, ಮಧ್ಯವರ್ತಿಗಳ ಜೊತೆ ಸಂಪರ್ಕದಲ್ಲಿದ್ದಾರೆ. ಹೀಗಾಗಿ ಜಾಮೀನು ಅರ್ಜಿ ವಜಾ ಮಾಡುವಂತೆ ಎಸ್‌ಪಿಪಿ ಬಿ.ಎನ್.ಜಗದೀಶ್ ಅವರು ವಾದ ಮಂಡಿಸಿದ್ದರು. ಈ ಎಲ್ಲಾ ವಾದ ಪ್ರತಿವಾದ ಆಲಿಸಿದ ಹೈಕೋರ್ಟ್, ಶಿವಶಂಕರಪ್ಪ ಸಾಹುಕಾರ್ ಅವರ ನಿರೀಕ್ಷಾ ಜಾಮೀನು ಅರ್ಜಿ ವಜಾಗೊಳಿಸಿದೆ.

