ಬೆಂಗಳೂರು: ಕೆಪಿಎಸ್ಸಿ ಪಶುವೈದ್ಯಾಧಿಕಾರಿಗಳ ನೇಮಕಾತಿ ಹಗರಣ ಬಗೆದಷ್ಟು ಬಯಲಾಗುತ್ತಲೇ ಇದೇ. ಸಿಐಡಿ ತನಿಖೆ ವೇಳೆ ದಿನಕ್ಕೊಂದು ಸ್ಫೋಟಕ ಮಾಹಿತಿಗಳು ಬೆಳಕಿಗೆ ಬರುತ್ತಿವೆ.
ಕೆಪಿಎಸ್ಸಿ ಅಕ್ರಮಕ್ಕೆ ಸಂಬಂಧಿಸಿದಂತೆ ಸಿಐಡಿ ಅಧಿಕಾರಿಗಳು ತನಿಖೆ ಚುರುಕುಗೊಳಿಸಿದ್ದು, 5 ಕೋಟಿ ರೂಪಾಯಿ ವಹಿವಾಟು ನಡೆದಿರೋದು ಪ್ರಾಥಮಿಕ ತನಿಖೆ ವೇಳೆ ಬೆಳಕಿಗೆ ಬಂದಿದೆ. 85 ಲಕ್ಷ ಹಣ ವಿವಿಧ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆ ಆಗಿರೋದು ಪತ್ತೆಯಾಗಿದೆ.
ಹಗರಣ ಸಂಬಂಧ ಇದುವರೆಗೂ ಪ್ರಕರಣದಲ್ಲಿ 273 ಮಂದಿ ವಿಚಾರಣೆ ನಡೆಸಲಾಗಿದ್ದು, ಈ ವೇಳೆ 15 ಅಭ್ಯರ್ಥಿಗಳು ಸೇರಿ ಕೆಲ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ ಎನ್ನಲಾಗಿದೆ.
ನಗದು ಮೂಲಕವೇ ಹೆಚ್ಚು ವ್ಯವಹಾರವಾಗಿರೋದು ತನಿಖೆ ವೇಳೆ ಪತ್ತೆಯಾಗಿದ್ದು, ಬೀದರ್ ಸೌಹಾರ್ದ ಬ್ಯಾಂಕ್ ಮ್ಯಾನೇಜರ್ ವಿಚಾರಣೆ ಸಂದರ್ಭದಲ್ಲಿ ಬಸವರಾಜ್ ಕನ್ನಾಳೆ ಜೊತೆಗಿನ ವ್ಯವಹಾರದ ಬಗ್ಗೆ ಅವರು ತಪ್ಪೊಪ್ಪಿಕೊಂಡಿದ್ದಾರೆ.
ಉಳಿದಂತೆ ಶಾಂತ ಹೊಸಮನಿ ವಿಚಾರಣೆಗೆ ಬಾರದ ಹಿನ್ನಲೆಯಲ್ಲಿ ಅವರಿಗೆ ಮತ್ತೊಮ್ಮೆ ನೋಟಿಸ್ ಕೊಡಲು ಸಿಐಡಿ ಅಧಿಕಾರಿಗಳು ತಯಾರಿ ನಡೆಸಿದ್ದಾರೆ. ಪ್ರಕರಣ ಸಂಬಂಧ ಈಗಾಗಲೇ ಐಎಎಸ್ ಅಧಿಕಾರಿ ಜ್ಞಾನೇಂದ್ರ ವಿಚಾರಣೆ ನಡೆಸಿರೋ ಅಧಿಕಾರಿಗಳು, ಅವರ ಜೊತೆಗಿದ್ದ ಯುವತಿ ಬಳಿಯಿದ್ದ 23 ಲಕ್ಷದ ಚಿನ್ನಾಭರಣ ವಶಕ್ಕೆ ಪಡೆದಿದ್ದಾರೆ. ಮತ್ತೋರ್ವ ಆರೋಪಿ ಬಸವರಾಜ್ ಕನ್ನಾಳೆ ಸಹಚರರಿಗೂ ಬಲೆ ಬೀಸಿರುವ ಸಿಐಡಿ, ಪ್ರಕರಣ ಸಂಬಂಧ ಇನ್ನೂ ಹಲವರನ್ನು ಬಂಧಿಸುವ ಸಾಧ್ಯತೆ ಇದೆ.
ಕೆಪಿಎಸ್ಸಿಯ 3 ನೇಮಕಾತಿಯಲ್ಲೂ ಕೆಪಿಎಸ್ಸಿ ಸದಸ್ಯೆ ಶಾಂತ ಹೊಸಮನಿ ಅಕ್ರಮ ನಡೆಸಿದ್ದು, RWD ಇಲಾಖೆ AEE ಅಕ್ರಮದಲ್ಲೂ ಶಾಂತಾ ಹೆಸರು ತಳಕುಹಾಕಿಕೊಂಡಿದೆ. 2023ರಲ್ಲಿ AEE ಅಕ್ರಮ ತನಿಖೆಗೆ ಉಪ ಸಮಿತಿ ನೇಮಿಸಲಾಗಿತ್ತು. ಆದರೆ ಸದಸ್ಯರಿಗೆ ತಿಳಿಸಿದೆ ಆಯ್ಕೆ ಪಟ್ಟಿ ಪ್ರಕಟಿಸಲು ಶಾಂತ ಹೊಸಮನಿ ಮುಂದಾಗಿದ್ದರು.
ಅಂದಿನ ಕಾರ್ಯದರ್ಶಿ ಲತಾ ಕುಮಾರಿ ಮೂಲಕ ಪ್ರಕಟಣೆಗೆ ಮುಂದಾಗಿದ್ದರು. ಆದರೆ ಕೆಲ ಸದಸ್ಯರ ಆಕ್ಷೇಪದಿಂದ ಪಟ್ಟಿ ಪ್ರಕಟವಾಗಿರಲಿಲ್ಲ. ಬಳಿಕ ಉಪ ಸಮಿತಿಯಿಂದ ಶಾಂತ ಹೊಸಮನಿ ಹೊರಗಿಡಲಾಗಿತ್ತು ಎಂದು ತನಿಖೆಯಲ್ಲಿ ಬಯಲಾಗಿದೆ.
ಸಚಿವ ಸತೀಶ್ ಜಾರಕಿಹೊಳಿ ನಿವಾಸದಲ್ಲಿ 3.3 ಕೋಟಿ ರೂ. ನಗದು, ವಿದೇಶಿ ಕರೆನ್ಸಿ ಪತ್ತೆ ಪ್ರಕರಣ: ಇಡಿ ತಾಂತ್ರಿಕ ಸಮಿತಿ ತಂಡ ಎಂಟ್ರಿ: ಕುತೂಹಲ ಮೂಡಿಸಿದ ಪರಿಶೀಲನೆ
ಬೆಂಗಳೂರು: ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ಅದಿಕಾರಿಗಳು ದಾಳಿ ನಡೆಸಿದ ಪ್ರಕರಣ ಸಂಬಂಧ ಇಡಿ ನಿರ್ದೇಶಕ ರಾಹುಲ್ ನವೀನ್ ಖುದ್ದಾಗಿ ಪರಿಶೀಲನೆ ನಡೆಸುತ್ತಿದ್ದು, ಇಡಿ ಅಧಿಕಾರಿಗಳ ಈ ನಡೆ ತೀವ್ರ ಕುತೂಹಲ ಮೂಡಿಸಿದೆ.
ದೆಹಲಿಯಿಂದ ಬೆಂಗಳೂರಿಗೆ ಇಡಿಯ ನಿರ್ದೇಶಕ ರಾಹುಲ್ ನೇತೃತ್ವದ ತಾಂತ್ರಿಕ ಸಮಿತಿ ತಂಡ ಆಗಮಿಸಿದೆ. ಇವರು 2 ದಿನ ಬೆಂಗಳೂರಿನಲ್ಲೇ ಉಳಿಯಲಿದ್ದು, ಹಿರಿಯ ಅಧಿಕಾರಿಗಳಿಂದ ಇಂದು ಮತ್ತು ನಾಳೆ ದಾಖಲೆಗಳ ಪರಿಶೀಲನೆ ನಡೆಸಲಿದ್ದಾರೆ.
ಸತೀಶ್ ಜಾರಕಿಹೊಳಿ ನಿವಾಸದಲ್ಲಿ ಇಡಿ ದಾಳಿ ವೇಳೆ 3.3 ಕೋಟಿ ರೂಪಾಯಿ ನಗದು ಮತ್ತು ವಿದೇಶಿ ಕರೆನ್ಸಿ ಪತ್ತೆಯಾಗಿದ್ದ ಹಿನ್ನೆಲೆ ಯಾವುದೇ ಕ್ಷಣದಲ್ಲಿ ಇಡಿಯಿಂದ ನೋಟಿಸ್ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.
ಇಡಿ ತನಿಖೆ ನಡೆಸುತ್ತಿರುವ ಪ್ರಕರಣಗಳ ಪರಿಶೀಲನೆ ಸಂಬಂಧ ಸ್ವತಃ ಇಡಿ ನಿರ್ದೇಶಕರೇ ಕರ್ನಾಟಕಕ್ಕೆ ಬಂದಿರುವುದು ಭಾರಿ ಕುತೂಹಲ ಮೂಡಿಸಿದೆ. ಸತೀಶ್ ಜಾರಕೊಹೊಳಿ ಪ್ರಕರಣ ಸಂಬಂಧ ವಿದೇಶಿ ಹೂಡಿಕೆ, ಗಣಿ ಕಂಪನಿಗಳಲ್ಲಿ ಪಾಲುದಾರಿಕೆಯ ಬಗ್ಗೆ ತಾಂತ್ರಿಕ ತಂಡ ಮಾಹಿತಿ ಕಲೆಹಾಕಲಿದೆ.
ಫೆಮಾ ಕಾಯ್ದೆ ಉಲ್ಲಂಘನೆ ಸ್ವರೂಪದ ಬಗ್ಗೆಯೂ ಕಡತಗಳ ಪರಿಶೀಲನೆ ನಡೆಯಲಿದೆ. ಇವುಗಳ ಜೊತೆಗೆ ಲೋಕೋಪಯೋಗಿ ಇಲಾಖೆಯಿಂದ ಕಿಕ್ ಬ್ಯಾಕ್, ಗುತ್ತಿಗೆ ಕಂಪನಿಯಿಂದ ಹಣ ಪಡೆದ ಆರೋಪಗಳ ಸಂಬಂಧವೂ ದಾಖಲೆಗಳ ಪರಿಶೀಲನೆ ನಡೆಸಲಿದೆ. ಜೊತೆಗೆ ಕೆಪಿಎಸ್ಸಿ ಹಗರಣ, ಮೂಡಾ ಕೇಸ್ ಮತ್ತು ವಾಲ್ಮೀಕಿ ಪ್ರಕರಣಗಳ ಪ್ರಗತಿಯನ್ನೂ ಸಹ ರಾಹುಲ್ ನವೀನ್ ಖುದ್ದಾಗಿ ಪರಿಶೀಲಿಸಲಿದ್ದಾರೆ ಎನ್ನಲಾಗಿದೆ.
ಈ ಹಿಂದೆ ವಾಲ್ಮೀಕಿ ನಿಗಮ ಹಗರಣ ಸಂಬಂಧ ರಾಜ್ಯ ಸರ್ಕಾರದ ಎಸ್‌ಐಟಿ ವರದಿಯಲ್ಲಿ ನಾಗೇಂದ್ರ ಅವರಿಗೆ ಕ್ಲೀನ್ ಚಿಟ್ ಸಿಕ್ಕಿತ್ತಾದರೂ, ಕೇಂದ್ರ ತನಿಖಾ ಸಂಸ್ಥೆಗಳಾದ ಸಿಬಿಐ ಮತ್ತು ಜಾರಿ ನಿರ್ದೇಶನಾಲಯ ನಡೆಸಿದ ಪ್ರತ್ಯೇಕ ತನಿಖೆಗಳಲ್ಲಿ ನಾಗೇಂದ್ರ ಅವರೇ ಈ ಹಗರಣದ ಮುಖ್ಯ ಸೂತ್ರಧಾರಿ ಎಂದು ಆರೋಪಿಸಿ, ಅವರ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಸಚಿವ ಸತೀಶ್ ಜಾರಹೊಳಿ ಅವರ ಪ್ರಕರಣ ಸಂಬಂಧ ಇಡಿ ಅಧಿಕಾರಿಗಳ ನಡೆ ಭಾರಿ ಕುತೂಹಲ ಮೂಡಿಸಿದೆ. ಮುಂದಿನ ದಿನಗಳಲ್ಲಿ ಸತೀಶ್ ಜಾರಕಿಹೊಳಿಗೂ ಮತ್ತಷ್ಟು ಸಂಕಷ್ಟ ಎದುರಾಗುವ ಸಾಧ್ಯ ಇದೆ.

