ಗೃಹಲಕ್ಷ್ಮಿ ಯೋಜನೆ ಫಲಾನುಭವಿಗಳಿಗೆ ಮುಖ್ಯ ಮಾಹಿತಿ ಇಲ್ಲಿದೆ. ಗೃಹಲಕ್ಷ್ಮಿ ಯೋಜನೆಯಿಂದ ನಿಮ್ಮ ಜೀವನದಲ್ಲಿ ಆದ ಸಕಾರಾತ್ಮಕ ಬದಲಾವಣೆಗಳ ಕುರಿತಾದ ಸಣ್ಣ ವಿಡಿಯೋವನ್ನು ಹಂಚಿಕೊಳ್ಳಿ, ಇಲ್ಲಿ ನೀಡಿರುವ ಅಧಿಕೃತ ಸಾಮಾಜಿಕ ಜಾಲತಾಣಗಳ ಖಾತೆಗಳಿಗೆ ಟ್ಯಾಗ್ ಮಾಡಿ.
ಯಶೋಗಾಥೆಗಳನ್ನು ಹಂಚಿಕೊಂಡ ಆಯ್ದ ಫಲಾನುಭವಿಗಳನ್ನು ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರು ಖುದ್ದಾಗಿ ಭೇಟಿಯಾಗಿ, ಅಭಿನಂದಿಸಲಿದ್ದಾರೆ.
ಈ ಕುರಿತಾಗಿ ಮಾಹಿತಿ ಹಂಚಿಕೊಂಡಿರುವ ಸಿಎಂ, ನಾಡಿನ ಒಡತಿಯರ ಬದುಕಿಗೆ ಆಸರೆಯಾಗಿ ನಿಂತ ಗೃಹಲಕ್ಷ್ಮಿ ಯೋಜನೆಯು ಯಶಸ್ವಿಯಾಗಿ ಮೂರು ವರ್ಷಗಳನ್ನು ಪೂರೈಸಿ, ಪ್ರತಿಯೊಂದು ಮನೆಯಲ್ಲೂ ಹಬ್ಬದ ಕಳೆ ತಂದಿದೆ. 1.2 ಕೋಟಿಗೂ ಮೀರಿದ ಮಹಿಳೆಯರ ಮಡಿಲಿಗೆ ಆರ್ಥಿಕ ಭದ್ರತೆಯ ಫಲವನ್ನು ನೀಡಿ, ಅವರ ಮೊಗದಲ್ಲಿ ನೆಮ್ಮದಿಯ ನಗೆಯನ್ನು ಅರಳಿಸಿದೆ. ಇದುವರೆಗೆ 76,500 ಕೋಟಿ ರೂ.ಗೂ ಅಧಿಕ ನೆರವನ್ನು ಧಾರೆರೆದು, ನಾಡಿನ ನಾರಿಯರ ಸಬಲೀಕರಣದ ಸುವರ್ಣ ಕನಸನ್ನು ನನಸಾಗಿಸಿದ ಹೆಮ್ಮೆ ನಮ್ಮದಾಗಿದೆ ಎಂದು ತಿಳಿಸಿದ್ದಾರೆ.
ನಾಡಿನ ಕೋಟ್ಯಂತರ ತಾಯಂದಿರ ಬದುಕಿನಲ್ಲಿ ಸ್ವಾಭಿಮಾನದ ಬೆಳಕು ಚೆಲ್ಲಿರುವ ‘ಗೃಹಲಕ್ಷ್ಮಿ’ ಯೋಜನೆ ಯಶಸ್ವಿ 3 ವರ್ಷಗಳನ್ನು ಪೂರೈಸಿದೆ. ಗೃಹಲಕ್ಷ್ಮಿ ಯೋಜನೆಯು ನಿಮ್ಮ ಮತ್ತು ನಿಮ್ಮ ಕುಟುಂಬದ ಬದುಕಿನಲ್ಲಿ ತಂದಿರುವ ಸಕಾರಾತ್ಮಕ ಬದಲಾವಣೆ, ಆರ್ಥಿಕ ಸ್ವಾವಲಂಬನೆಯ ಯಶೋಗಾಥೆಗಳನ್ನು ವಿಡಿಯೋ ಮೂಲಕ ಹಂಚಿಕೊಳ್ಳಿ, ಇಲ್ಲಿ ನೀಡಿರುವ ಅಧಿಕೃತ ಸಾಮಾಜಿಕ ಜಾಲತಾಣಗಳ ಖಾತೆಗೆ ಟ್ಯಾಗ್ ಮಾಡಿ. ಆಯ್ದ ಫಲಾನುಭವಿಗಳನ್ನು ಡಿ.ಕೆ. ಶಿವಕುಮಾರ್ ಅವರು ಖುದ್ದಾಗಿ ಭೇಟಿಯಾಗಲಿದ್ದಾರೆ.

