ಬೆಂಗಳೂರು: ಕೆಪಿಎಸ್‌ಸಿ ಪಶುವೈದ್ಯಾಧಿಕಾರಿ ನೇಮಕಾತಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ತನಿಖೆ ಚುರುಕುಗೊಂಡಿದ್ದು, ವಿಚಾರಣೆ ವೇಳೆ ಆರು ಅಭ್ಯರ್ಥಿಗಳು ತಪ್ಪೊಪ್ಪಿಕೊಂಡಿದ್ದಾರೆ.
ಪಶುವೈದ್ಯಾಧಿಕಾರಿಗಳ ನೇಮಕಾತಿ ಹಗರಣ ಸಂಬಂಧ ಸಿಐಡಿ ತನಿಖೆಯ ವೇಳೆ ಮೊಹಮ್ಮದ್ ಸುಹೇಲ್ ಸೇರಿದಂತೆ ಒಟ್ಟು 6 ಜನ ಅಭ್ಯರ್ಥಿಗಳು ಹಣ ನೀಡಿ ಅಕ್ರಮವಾಗಿ ಪರೀಕ್ಷೆ ಬರೆದಿರುವುದಾಗಿ ಸಿಐಡಿ ಮುಂದೆ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ.
ಸುಮಾರು 400 ಹುದ್ದೆಗಳಿಗೆ ನಡೆದಿದ್ದ ಈ ನೇಮಕಾತಿ ಪರೀಕ್ಷೆಯಲ್ಲಿ, ಒಂದು ಹುದ್ದೆಗೆ ಬರೋಬ್ಬರಿ 40 ಲಕ್ಷ ರೂಪಾಯಿಗೆ ಡೀಲ್ ಕುದುರಿಸಲಾಗಿತ್ತು. ಬೆಂಗಳೂರಿನ ರಾಜಾಜಿನಗರದಲ್ಲಿದ್ದ ಕಚೇರಿಯೊಂದರಲ್ಲಿ ಈ ಡೀಲ್ ನಡೆದಿದ್ದು, ವಾಟ್ಸಾಪ್ ಮೂಲಕ ವ್ಯವಹಾರ ನಡೆಸಿ ಮುಂಗಡವಾಗಿ 20 ಲಕ್ಷ ರೂ. ಹಣ ಪಾವತಿಸಲಾಗಿತ್ತು ಎಂದು ಅಭ್ಯರ್ಥಿಗಳು ಬಾಯಿಬಿಟ್ಟಿದ್ದಾರೆ.
ಪರೀಕ್ಷೆಗೂ ಮುಂಚೆಯೇ ಅಭ್ಯರ್ಥಿಗಳ ಕೈಗೆ ಪ್ರಶ್ನೆಪತ್ರಿಕೆ ತಲುಪಿತ್ತು. ಅಭ್ಯರ್ಥಿಗಳು ಸಾಮಾನ್ಯ ಪರೀಕ್ಷಾ ಕೇಂದ್ರಗಳ ಬದಲಾಗಿ ಬೆಂಗಳೂರಿನ ರೆಸಾರ್ಟ್, ತುಮಕೂರಿನ ದೇವರಾಯನದುರ್ಗ ಹಾಗೂ ಆಂಧ್ರಪ್ರದೇಶದ ರೆಸಾರ್ಟ್‌ಗಳಲ್ಲಿ ಕುಳಿತು ಪರೀಕ್ಷೆ ಬರೆದಿರುವುದಾಗಿ ಬಾಯ್ಬಿಟ್ಟಿದ್ದಾರೆ ಎಂದು ತಿಳಿದುಬಂದಿದೆ.

