ಬೆಂಗಳೂರು: ಕೇರಳದ ಪ್ರಸಿದ್ಧ ಪುಣ್ಯಕ್ಷೇತ್ರ ಕೊಟ್ಟಿಯೂರು ಮಹಾದೇವ ದೇವಸ್ಥಾನದಲ್ಲಿ (Kottiyoor Temple) ವಾರ್ಷಿಕ ವೈಶಾಖ ಮಹೋತ್ಸವ ಆರಂಭವಾಗಿದ್ದು, ದರ್ಶನಕ್ಕೆ ಹೋದ ಕರ್ನಾಟಕದ ಭಕ್ತರ ಮೇಲೆ ದೇವಸ್ಥಾನದ ಸಿಬ್ಬಂದಿ ಹಾಗೂ ಭದ್ರತಾ ಸಿಬ್ಬಂದಿ ದುರ್ವರ್ತನೆ ತೋರುತ್ತಿರುವ ಗಂಭೀರ ಆರೋಪ ಕೇಳಿಬಂದಿದೆ. ಕಳೆದ ವರ್ಷ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡಿದ್ದರಿಂದ ಈ ಬಾರಿ ಸಾವಿರಾರು ಕನ್ನಡಿಗರು ಇಲ್ಲಿಗೆ ಭೇಟಿ ನೀಡುತ್ತಿದ್ದಾರೆ. ಆದರೆ ಅಲ್ಲಿನ ಕಹಿ ಅನುಭವದಿಂದ ಬೇಸತ್ತ ಭಕ್ತರು, ಯಾರೂ ಈ ದೇವಸ್ಥಾನಕ್ಕೆ ಬರಬೇಡಿ ಎಂದು ವಿಡಿಯೋ ಮಾಡಿ ಆಕ್ರೋಶ ಹೊರಹಾಕುತ್ತಿದ್ದಾರೆ.
ಕಣ್ಣೂರಿನ ಬಾವಲಿ ನದಿಯ ದಂಡೆಯ ಮೇಲಿರುವ ಈ ಕ್ಷೇತ್ರವನ್ನು ದಕ್ಷಿಣ ಕಾಶಿ ಎಂದೂ ಕರೆಯಲಾಗುತ್ತದೆ. ಸದ್ಯ ಇಲ್ಲಿ 27 ದಿನಗಳ ಕಾಲ ನಡೆಯುವ ವೈಶಾಖ ಮಹೋತ್ಸವಕ್ಕೆ ಲಕ್ಷಾಂತರ ಜನರು ಲಗ್ಗೆ ಇಡುತ್ತಿದ್ದಾರೆ.
https://www.instagram.com/reel/DZRzr3xzpoO/?utm_source=ig_web_copy_link&igsh=NTc4MTIwNjQ2YQ==
ದೇವಸ್ಥಾನದಲ್ಲಿ ಆಗ್ತಿರೋ ಅವ್ಯವಸ್ಥೆ ಮತ್ತು ವಸೂಲಿ ದಂಧೆ ಏನು?
ಕರ್ನಾಟಕದ ಭಕ್ತರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ವಿಡಿಯೋಗಳ ಪ್ರಕಾರ, ದೇವಸ್ಥಾನದಲ್ಲಿ ಭಾರೀ ಅವ್ಯವಸ್ಥೆ ಮತ್ತು ಭಕ್ತರ ಶೋಷಣೆ ನಡೆಯುತ್ತಿದೆ:
ಹಣ ಕೊಟ್ಟರೂ ದರ್ಶನವಿಲ್ಲ: ವಿಶೇಷ ದರ್ಶನಕ್ಕಾಗಿ ಬರೋಬ್ಬರಿ 1,000 ರೂಪಾಯಿ ಕೊಟ್ಟು ಟಿಕೆಟ್ ಪಡೆದರೂ ಭಕ್ತರು ಕನಿಷ್ಠ 3 ಗಂಟೆಗಳ ಕಾಲ ಸರತಿ ಸಾಲಿನಲ್ಲಿ ನಿಲ್ಲಬೇಕಾಗಿದೆ.
ಗಂಟೆಗಟ್ಟಲೆ ಕಾಯುವಿಕೆ: ಉಚಿತ ದರ್ಶನ ಪಡೆಯಲು ಭಕ್ತರು ಬರೋಬ್ಬರಿ 7 ರಿಂದ 8 ಗಂಟೆಗಳ ಕಾಲ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ.
ಸಿಬ್ಬಂದಿಯ ವಿಕೃತಿ ಮತ್ತು ದರ್ಪ: ದೇವಸ್ಥಾನದ ಆಡಳಿತ ಮಂಡಳಿ ಮತ್ತು ಭದ್ರತಾ ಸಿಬ್ಬಂದಿ ಕನ್ನಡಿಗರೊಂದಿಗೆ ಗೂಂಡಾಗಳಂತೆ ವರ್ತಿಸುತ್ತಿದ್ದಾರೆ. ಮಹಿಳೆಯರನ್ನು ಜೋರಾಗಿ ತಳ್ಳುವುದು ಹಾಗೂ ಸಾಲಿನಲ್ಲಿ ನಿಂತ ಭಕ್ತರ ಮೇಲೆ ಕಾಲಿನಿಂದ ನೀರು ಎರಚಿ ವಿಕೃತಿ ಮೆರೆಯುತ್ತಿರುವ ದೃಶ್ಯಗಳು ವಿಡಿಯೋದಲ್ಲಿ ಸೆರೆಯಾಗಿವೆ.
ಭದ್ರತೆಯ ಕೊರತೆ: “ಎಲ್ಲಿ ನೋಡಿದರೂ ನೂಕುನುಗ್ಗಲು, ಸರಿಯಾದ ವ್ಯವಸ್ಥೆಯೂ ಇಲ್ಲ, ಮಾನವೀಯತೆಯೂ ಇಲ್ಲ, ಇಲ್ಲಿ ಭಕ್ತರಿಗೆ ಯಾವುದೇ ಸೇಫ್ಟಿ ಇಲ್ಲ” ಎಂದು ಕನ್ನಡಿಗರು ಕಣ್ಣೀರು ಹಾಕಿದ್ದಾರೆ.
ದಕ್ಷ ಯಜ್ಞ ನಡೆದ ಪೌರಾಣಿಕ ಹಿನ್ನೆಲೆ
ಈ ಕ್ಷೇತ್ರಕ್ಕೆ ಇಷ್ಟೊಂದು ಮಹತ್ವ ಇರಲು ಕಾರಣ ಇದರ ಪೌರಾಣಿಕ ಹಿನ್ನೆಲೆ. ಇದು ದಕ್ಷ ಪ್ರಜಾಪತಿಯು ಶಿವನನ್ನು ಅವಮಾನಿಸಲು ಹಮ್ಮಿಕೊಂಡಿದ್ದ ‘ದಕ್ಷ ಯಜ್ಞ’ ನಡೆದ ಸ್ಥಳ ಎನ್ನಲಾಗುತ್ತದೆ. ಇಲ್ಲಿಯೇ ಸತೀದೇವಿಯು ಯಜ್ಞಕುಂಡಕ್ಕೆ ಹಾರಿ ಪ್ರಾಣತ್ಯಾಗ ಮಾಡಿದ್ದಳು. ಇದರಿಂದ ಕ್ರುದ್ಧನಾದ ಪರಮಶಿವನು ದಕ್ಷನ ತಲೆ ಕಡಿದನು ಎಂಬ ಇತಿಹಾಸವಿದೆ.
ವರ್ಷಕ್ಕೆ ಕೇವಲ 27 ದಿನ ಮಾತ್ರ ಪೂಜೆ
ಕೊಟ್ಟಿಯೂರಿನಲ್ಲಿ ನದಿಯ ಎರಡೂ ದಂಡೆಗಳ ಮೇಲೆ ಎರಡು ದೇವಸ್ಥಾನಗಳಿವೆ:
ಇಕ್ಕರೆ ಕೊಟ್ಟಿಯೂರು: ಇದು ನದಿಯ ಒಂದು ದಂಡೆಯ ಮೇಲಿದ್ದು, ವರ್ಷದ ಬಹುಪಾಲು ದಿನಗಳಲ್ಲಿ ಇಲ್ಲಿಯೇ ಪೂಜೆ ನಡೆಯುತ್ತದೆ.
ಅಕ್ಕರೆ ಕೊಟ್ಟಿಯೂರು: ಇದು ನದಿಯ ಇನ್ನೊಂದು ದಂಡೆಯಲ್ಲಿದೆ. ಇಲ್ಲಿ ಯಾವುದೇ ಶಾಶ್ವತ ಕಟ್ಟಡ ಅಥವಾ ಗರ್ಭಗುಡಿ ಇಲ್ಲ. ಕೇವಲ ಮೇ-ಜೂನ್ ತಿಂಗಳಿನ 27 ದಿನಗಳ ವೈಶಾಖ ಮಹೋತ್ಸವದಲ್ಲಿ ಮಾತ್ರ ಹುಲ್ಲಿನ ಪೆಂಡಾಲ್ ಹಾಕಿ, ನದಿಯ ಮಧ್ಯದಲ್ಲಿರುವ ಸ್ವಯಂಭೂ ಶಿವಲಿಂಗಕ್ಕೆ (ಮಣಿತ್ತರ) ಪೂಜೆ ಸಲ್ಲಿಸಲಾಗುತ್ತದೆ. ಉತ್ಸವ ಮುಗಿದ ತಕ್ಷಣ ಪೆಂಡಾಲ್ ತೆರವುಗೊಳಿಸಲಾಗುತ್ತದೆ.
ಓಡಪೂವು ಪ್ರಸಾದದ ನಂಬಿಕೆ: ಬಿದಿರಿನಿಂದ ಮಾಡುವ ವಿಶೇಷ ಕರಕುಶಲ ಹೂವು ಓಡಪೂವು ಇಲ್ಲಿನ ಮುಖ್ಯ ಪ್ರಸಾದವಾಗಿದೆ. ಈ ಉತ್ಸವದ ದರ್ಶನ ಪಡೆದರೆ ಜೀವನದ ಕಷ್ಟಗಳು ದೂರವಾಗುತ್ತವೆ ಮತ್ತು ಓಡಪೂವು ಹೂವನ್ನು ಮನೆಯಲ್ಲಿ ಇಟ್ಟರೆ ಐಶ್ವರ್ಯ ವೃದ್ಧಿಯಾಗುತ್ತದೆ ಎಂಬ ಬಲವಾದ ನಂಬಿಕೆ ಭಕ್ತರಲ್ಲಿದೆ.
ಆದರೆ, ಇಷ್ಟೊಂದು ಪವಿತ್ರವಾದ ಜಾಗದಲ್ಲಿ ಕನ್ನಡಿಗರನ್ನು ವಿಚಿತ್ರವಾಗಿ ನೋಡುವುದು ಹಾಗೂ ಕಠಿಣವಾಗಿ ವರ್ತಿಸುತ್ತಿರುವುದು ಸದ್ಯ ಕರ್ನಾಟಕದ ಭಕ್ತರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

