HomeKarnatakaಬೆಳೆ ವಿಮೆ; ಮಧ್ಯವರ್ತಿಗಳ ಹಾವಳಿಗೆ ಕಡಿವಾಣ ಹಾಕಲು ಸೂಚನೆ

ಬೆಳೆ ವಿಮೆ; ಮಧ್ಯವರ್ತಿಗಳ ಹಾವಳಿಗೆ ಕಡಿವಾಣ ಹಾಕಲು ಸೂಚನೆ

ಕೊಪ್ಪಳ: ಕೊಪ್ಪಳ ಹಾಗೂ ರಾಯಚೂರು ಜಿಲ್ಲೆಗಳಲ್ಲಿ ಅಕ್ಟೋಬರ್ 8 ರಂದು ಪ್ರವಾಸ ಕೈಗೊಂಡು ರೈತರ ಜಮೀನಿಗೆ ಖುದ್ದು ಭೇಟಿ ನೀಡಿ ಬೆಳೆಹಾನಿ ವೀಕ್ಷಿಸಿದ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಅವರು ನಂತರ ಕೊಪ್ಪಳ ಹಾಗೂ ರಾಯಚೂರು ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಸಿಇಓ. ಕೃಷಿ, ತೋಟಗಾರಿಕೆ, ಪಶುಪಾಲನಾ, ರೇಷ್ಮೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಬಿತ್ತನೆ ಪ್ರಮಾಣ, ಮಳೆಯ ವಿವರ, ಬೆಳೆ ಹಾನಿ ಪ್ರಮಾಣ ಸೇರಿದಂತೆ ನಾನಾ ವಿಷಯಗಳ ಬಗ್ಗೆ ಅಧಿಕಾರಿಗಳಿಂದ ನಿಖರ ಅಂಕಿಅಂಶಗಳ ಮಾಹಿತಿ ಪಡೆದುಕೊಂಡರು.

ಬರ ಪರಿಸ್ಥಿತಿಯ ಹಿನ್ನೆಲೆಯಲ್ಲಿ, ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ, ಕುಷ್ಟಗಿ ವಿಧಾನಸಭಾ ಕ್ಷೇತ್ರದ ಶಾಸಕ ದೊಡ್ಡನಗೌಡ ಪಾಟೀಲ, ಕೊಪ್ಪಳ ವಿಧಾನಸಭಾ ಕ್ಷೇತ್ರದ ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಅವರ ಸಮ್ಮುಖದಲ್ಲಿ ಜಿಲ್ಲಾ ಪಂಚಾಯತ್ ಕಚೇರಿ ಸಭಾಂಗಣದಲ್ಲಿ ಸಭೆ ನಡೆಸಿ ಮಾತನಾಡಿದ ಉಪ ಮುಖ್ಯಮಂತ್ರಿಗಳು, ಕುಡಿವ ನೀರು, ಮೇವಿನ ಲಭ್ಯತೆಯ ಬಗ್ಗೆ ಮೊದಲಿಗೆ ಎರಡೂ ಜಿಲ್ಲೆಗಳ ಅಧಿಕಾರಿಗಳಿಂದ ಮಾಹಿತಿ ಕೇಳಿದರು.

ಕೊಪ್ಪಳ ಜಿಲ್ಲೆಯಲ್ಲಿ 152 ಗ್ರಾಮ ಪಂಚಾಯತಗಳ ಪೈಕಿ 45 ಹಳ್ಳಿಗಳಿಗೆ 55 ಖಾಸಗಿ ಬೋರವೆಲ್ ಗಳ ಮೂಲಕ ನೀರು ಪೂರೈಸಲಾಗುತ್ತಿದೆ. ಪಿಡಿ ಖಾತೆಯಲ್ಲಿ ಲಭ್ಯವಿರುವ 4 ಕೋಟಿ ರೂ ಅನುದಾನದ ಪೈಕಿ ಈಗಾಗಲೇ 3.20 ಕೋಟಿ ರೂ ಬಳಸಿದ್ದೇವೆ. ಸರ್ಕಾರದ ನಿರ್ದೇಶನದಂತೆ ಮತ್ತೆ 1 ಕೋಟಿ ರೂ.ಗೆ ಕ್ರಿಯಾಯೋಜನೆ ಮಾಡಿದ್ದೇವೆ. ನಗರ ಪ್ರದೇಶಗಳಲ್ಲಿ ಕುಡಿವ ನೀರಿನ ಸಮಸ್ಯೆ ಕಂಡು ಬಂದಿಲ್ಲ. ಮುಂದಿನ ದಿನಗಳಲ್ಲಿ ಅಂದಾಜು 109 ಗ್ರಾಮಗಳಲ್ಲಿ ಕುಡಿವ ನೀರಿನ ಸಮಸ್ಯೆ ಎದುರಾಗಲಿದೆ ಎಂದು ಅಂದಾಜಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಸುರೇಶ ಇಟ್ನಾಳ ಅವರು ಸಭೆಗೆ ಮಾಹಿತಿ ನೀಡಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮಳೆಯಾಗದಿದ್ದರೆ ರಾಯಚೂರು ಜಿಲ್ಲೆಯಲ್ಲಿ ಡಿಸೆಂಬರ್ ನಂತರ ತೊಂದರೆಯಾಗಲಿದೆ. ಕುಡಿವ ನೀರಿಗೆ ನೀಡಿದ ಅನುದಾನವನ್ನು ಸಮರ್ಪಕವಾಗಿ ಬಳಸುತ್ತಿದ್ದೇವೆ ಎಂದು ರಾಯಚೂರು ಜಿಲ್ಲಾಧಿಕಾರಿ ಪೂವಿಕಾ ಅವರು ಸಭೆಗೆ ಮಾಹಿತಿ ನೀಡಿದರು.

ಈ ವೇಳೆ ಮಾತನಾಡಿದ ಉಪ ಮುಖ್ಯಮಂತ್ರಿಗಳು, ಮತ್ತೊಂದು ರೌಂಡ್ ನಲ್ಲಿ ತಲಾ ಒಂದು ಕೋಟಿ ರೂ.ಗಳನ್ನು ಎಲ್ಲಾ ಜಿಲ್ಲೆಗಳಿಗೆ ಕುಡಿವ ನೀರಿಗೆ ಕೊಡುವ ಯೋಚನೆ ಇದೆ. ಯಾವುದೇ ರೀತಿಯಲ್ಲಿ ಗ್ರಾಮೀಣ ಮತ್ತು ನಗರ ಪ್ರದೇಶದಲ್ಲಿ ಕುಡಿವ ನೀರಿಗೆ ತೊಂದರೆಯಾಗಬಾರದು ಎಂದು ಸೂಚನೆ ನೀಡಿದರು. ಸಮರ್ಪಕ ಕುಡಿವ ನೀರಿನ ಸರಬರಾಜಿಗೆ ಸಂಬಂಧಿಸಿದಂತೆ ಕ್ರಿಯಾಯೋಜನೆ ರೂಪಿಸಲು ನಿರ್ದೇಶನ ನೀಡಿದರು.

ಮೇವಿನ ಕಿಟ್ ವಿತರಣೆ: ಕೊಪ್ಪಳ ಜಿಲ್ಲೆಯಲ್ಲಿ 30 ವಾರಗಳಿಗೆ ಸಾಕಾಗುವಷ್ಟು ಮೇವಿನ ಲಭ್ಯತೆ ಇದೆ. ಡಿಸೆಂಬರ್ ನಂತರ ಮೇವಿಗೆ ತೊಂದರೆಯಾಗಲಿದೆ ಎಂದು ಪಶುಪಾಲನಾ ಇಲಾಖೆಯ ಉಪ ನಿರ್ದೇಶಕರು ಸಭೆಗೆ ಮಾಹಿತಿ ನೀಡಿದರು. ಜಾನುವಾರುಗಳಿಗೆ ಅನುಕೂಲವಾಗುವಂತೆ ಜಾನುವಾರುಗಳು ಹಾಗೂ ನೀರವಾರಿ ಸೌಲಭ್ಯ ಹೊಂದಿರುವ ಅರ್ಹ ರೈತರಿಗೆ ಸಮರ್ಪಕವಾಗಿ ಮೇವಿನ ಬೀಜಗಳ ಮಿನಿಕಿಟ್ ವಿತರಣೆಯನ್ನು ಸರಿಯಾಗಿ ನೀಡಬೇಕು ಎಂದು ಉಪ ಮುಖ್ಯಮಂತ್ರಿಗಳು ಸೂಚನೆ ನೀಡಿದರು.

ಗುಳೆಹೋಗಲು ಬಿಡಬೇಡಿ: ಜಿಲ್ಲಾಧಿಕಾರಿಗಳು ಹಾಗೂ ಜಿಪಂ ಸಿಇಓ ಅವರು ವಿಶೇಷ ಮುತುವರ್ಜಿ ವಹಿಸಿ ಕೂಲಿ ಕೆಲಸ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಹೆಚ್ಚಿನ ಒತ್ತು ನೀಡಿದಲ್ಲಿ ಜನರಿಗೆ ಉದ್ಯೋಗ ಲಭ್ಯವಾಗಿ ಜನರು ಗುಳೆ ಹೋಗುವುದು ತಪ್ಪಲಿದೆ ಎಂದು ಉಪ ಮುಖ್ಯಮಂತ್ರಿಗಳು ನಿರ್ದೇಶನ ನೀಡಿದರು. ವಿಳಂಬಕ್ಕೆ ಅವಕಾಶವಿಲ್ಲದಂತೆ ಕೂಲಿ ಹಣ ಪಾವತಿಗೆ ಒತ್ತು ಕೊಡಬೇಕು ಎಂದು ಅವರು ಸೂಚನೆ ನೀಡಿದರು.

ಬೆಳೆವಿಮೆ ಪಾವತಿಗೆ ಒತ್ತು ಕೊಡಿ: ಕೊಪ್ಪಳ ಜಿಲ್ಲೆಯಲ್ಲಿ ಈಗಾಗಲೇ 1.56 ಲಕ್ಷ ರೈತರು ಬೆಳೆವಿಮೆಗೆ ಹೆಸರು ನೋಂದಾಯಿಸಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ನೋಂದಣಿ ಪ್ರಮಾಣ ಹೆಚ್ಚಿದೆ. ರಾಯಚೂರು ಜಿಲ್ಲೆಯಲ್ಲಿ ಇದುವರೆಗೆ 1.32 ಲಕ್ಷ ರೈತರು ಬೆಳೆವಿಮೆಗೆ ಹೆಸರು ನೋಂದಾಯಿಸಿದ್ದಾರೆ ಎಂದು ಕೊಪ್ಪಳ ಹಾಗೂ ರಾಯಚೂರು ಜಂಟಿ ಕೃಷಿ ನಿರ್ದೇಶಕರು ಸಭೆಗೆ ಮಾಹಿತಿ ನೀಡಿದರು. ತಪ್ಪಿತಸ್ಥರ ಮೇಲೆ ಎಫ್‌ಐಆರ್ ದಾಖಲಿಸಿ ಮಧ್ಯೆವರ್ತಿಗಳ ಹಾವಳಿಗೆ ಕಡಿವಾಣ ಹಾಕಿ ರೈತರಿಗೆ ಸಮರ್ಪಕವಾಗಿ ಬೆಳೆವಿಮೆ ಹಣ ಪಾವತಿಯಾಗುವಂತೆ ನೋಡಿಕೊಳ್ಳಲು ಉಪ ಮುಖ್ಯಮಂತ್ರಿಗಳು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ವಿದ್ಯುತ್ ವ್ಯತ್ಯಯ ತಪ್ಪಿಸಿ: ಕೊಪ್ಪಳ ಹಾಗೂ ರಾಯಚೂರು ಜಿಲ್ಲೆಗಳಲ್ಲಿ ಕ್ಷೇತ್ರ ಭೇಟಿ ಸಂದರ್ಭದಲ್ಲಿ ಬಹುತೇಕ ರೈತರು ವಿದ್ಯುತ್ ಸಮಸ್ಯೆಯಾಗಿದೆ ಎಂದು ಅಹವಾಲು ಸಲ್ಲಿಸಿದ್ದಾರೆ ಎಂದು ಉಪ ಮುಖ್ಯಮಂತ್ರಿಗಳು ಜೆಸ್ಕಾಂ ಅಧಿಕಾರಿಗಳಿಂದ ವಿವರಣೆ ಕೇಳಿದರು. ವಿದ್ಯುತ್ ಪದೇಪದೆ ಕಡಿತವಾಗುತ್ತಿದೆ. ಇದರಿಂದ ತೊಂದರೆಯಾಗುತ್ತಿದೆ ಎಂದು ರೈತರಿಂದ ದೂರುಗಳು ಬಂದದ್ದು ಸತ್ಯ. ಈ ಬಗ್ಗೆ ಎಂಡಿ ಅವರಿಗೆ ಮಾತನಾಡಿದ್ದೇನೆ ಎಂದು ಸಚಿವರು ಸಭೆಗೆ ತಿಳಿಸಿದರು. ಯಾವುದೇ ನೆಪ ಹೇಳದೇ, ರೈತರಿಗೆ ತೊಂದರೆಯಾಗದAತೆ ಸಮರ್ಪಕ ವಿದ್ಯುತ್ ಪೂರೈಕೆಗೆ ಒತ್ತು ಕೊಡಬೇಕು ಎಂದು ಉಪ ಮುಖ್ಯಮಂತ್ರಿಗಳು ಜೆಸ್ಕಾಂ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಡಿಎಚ್‌ಓ ಅವರಿಗೆ ನಿರ್ದೇಶನ: ಮಳೆ ಕೊರತೆ ಮುಂದುವರೆದು, ಬಿಸಿಲು ಏರಿಕೆಯಾದಂತೆ ಜನರಿಗೆ ಅನಾರೋಗ್ಯ ಸಮಸ್ಯೆ ಕಾಣುತ್ತದೆ. ಟ್ಯಾಂಕರ್ ನೀರು ಪರೀಕ್ಷಿಸಿ ಪೂರೈಸಬೇಕು. ಜನರ ಆರೋಗ್ಯ ಮೇಲ್ವಿಚಾರಣೆಗಾಗಿ ನಿಯಮಿತ ಸಭೆ ನಡೆಸಿ ಎಂದು ಉಪ ಮುಖ್ಯಮಂತ್ರಿಗಳು ಡಿಎಚ್‌ಓ ಅವರಿಗೆ ಸೂಚನೆ ನೀಡಿದರು.

ದೌರ್ಜನ್ಯ ನಡೆಸಿದರೆ ಕ್ರಮ: ಕಿರು ಸಾಲ ಅಥವಾ ಸಣ್ಣ ಸಾಲ ನೀಡುವ ಸಂಸ್ಥೆಗಳಿAದ ಬಡ ಜನರ ಮೇಲೆ ನಡೆಯುವ ಬಲವಂತದ ವಸೂಲಿ ಹಾಗೂ ಮಾನಸಿಕ ಕಿರುಕಳ ನಡೆಯುದನ್ನು ನಾವು ಖಂಡಿಸುತ್ತೇವೆ. ಬರ ಎದುರಾದ ಈ ಪರಿಸ್ಥಿತಿಯಲ್ಲಿ ಸಾಲ ವಸೂಲಾತಿ ಕಿರುಕುಳ ಪ್ರಕರಣಗಳು ಮರುಕಳಿಸಿದಲ್ಲಿ ತಪ್ಪಿತಸ್ಥರ ಮೇಲೆ ಮುಲಾಜಿಲ್ಲದೇ ಕ್ರಮ ಜರುಗಿಸುವುದಾಗಿ ಉಪ ಮುಖ್ಯಮಂತ್ರಿಗಳು ಎಚ್ಚರಿಕೆ ನೀಡಿದರು.

ಸಭೆಯಲ್ಲಿ ಅಟಲ್ ಜನಸ್ನೇಹಿ ಕೇಂದ್ರದ ರಾಜ್ಯ ನಿರ್ದೇಶಕ ಎಂ.ಎಸ್. ದಿವಾಕರ, ಜಿಲ್ಲಾ ಪಂಚಾಯತ್ ಸಿಇಓ ಕೊಪ್ಪಳದ ವರ್ಣಿತ್ ನೇಗಿ, ರಾಯಚೂರಿನ ಈಶ್ವರ ಕುಮಾರ ಕಾಂದೂ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಾಹಿಲ್ ಬಾಗ್ಲಾ, ಅಪರ ಜಿಲ್ಲಾಧಿಕಾರಿಗಳಾದ ಸಿದ್ರಾಮೇಶ್ವರ, ರಾಯಚೂರು ಸಹಾಯಕ ಆಯುಕ್ತ ಡಾ.ಹಂಪಣ್ಣ ಸಜ್ಜನ್, ಕೊಪ್ಪಳ ಜಿಪಂ ಉಪ ಕಾರ್ಯದರ್ಶಿ ಕೃಷ್ಣಮೂರ್ತಿ, ರಾಯಚೂರು ಜಿಪಂ ಉಪ ಕಾರ್ಯದರ್ಶಿ ಹಾಲಸಿದ್ದಪ್ಪ ಪೂಜಾರಿ, ಕೊಪ್ಪಳ ಜಂಟಿ ಕೃಷಿ ನಿರ್ದೇಶಕ ಕೃಷ್ಣಮೂರ್ತಿ, ಜಂಟಿ ತೋಟಗಾರಿಕಾ ನಿರ್ದೇಶಕ ಕೃಷ್ಣ ಉಕ್ಕುಂದ, ರಾಯಚೂರು ಜಂಟಿ ಕೃಷಿ ನಿರ್ದೇಶಕ ಪ್ರಕಾಶ ಚವ್ಹಾಣ, ತೋಟಗಾರಿಕಾ ಜಂಟಿ ನಿರ್ದೇಶಕ ಮಹಮ್ಮದ್ ಅಲಿ, ಕೊಪ್ಪಳ ಹಾಗೂ ರಾಯಚೂರು ತಾಲೂಕಿನ ತಹಸೀಲ್ದಾರಗಳು, ತಾಲೂಕು ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿಗಳು, ಕಂದಾಯ, ಪಶುಪಾಲನೆ, ರೇಷ್ಮೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular