ಮಡಿಕೇರಿ: ಹೋಂ ಸ್ಟೇಯಲ್ಲಿ ವಿದೇಶಿ ಮಹಿಳೆಯ ಮೇಲೆ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಡಗು ಜಿಲ್ಲೆಯ ಕುಟ್ಟ ಹೋಂ ಸ್ಟೇ ಪರವಾನಗಿಯನ್ನು ರದ್ದುಗೊಳಿಸಿ ಪ್ರವಾಸೋದ್ಯಮ ಇಲಾಖೆ ಆದೇಶ ಹೊರಡಿಸಿದೆ.
ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ಕುಟ್ಟ ಗ್ರಾಮದಲ್ಲಿರುವ ಹೊಂ ಸ್ಟೇಯಲ್ಲಿ ಅಮೆರಿಕ ಮೂಲದ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ನಡೆದಿತ್ತು. ಹೋಂ ಸ್ಟೇ ಮಾಲೀಕ ವಿಶಾಲ್ ಪ್ರಕರಣ ಮುಚ್ಚಿ ಹಾಕಲು ಯತ್ನಿಸಿದ್ದ. ಆದರೆ ತನಿಖೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿತ್ತು.
ಈ ಹಿನ್ನೆಲೆಯಲ್ಲಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪ್ರವಾಸೋದ್ಯಮ ಇಲಾಖೆ, ಹೋಂಸ್ಟೇಯ ಪರವಾನಗಿಯನ್ನು ರದ್ದುಗೊಳಿಸಿ ಆದೇಶ ಹೊರಡಿಸಿದೆ.
ಕೆಲ ದಿನಗಳ ಹಿಂದೆ ಅಮೆರಿಕದ ವಾಷಿಂಗ್ಟನ್ ಮೂಲದ ಮಹಿಳೆಯೊಬ್ಬರು ಪ್ರವಾಸಕ್ಕಾಗಿ ಕುಟ್ಟ ಗ್ರಾಮದ ದೇವಿ ವಿಲ್ಲಾ ಹೋಂಸ್ಟೇಗೆ ಬಂದಿದ್ದರು. ಈ ವೇಳೆ ಹೋಂಸ್ಟೇಯ ಕುಕ್ ಆಗಿದ್ದ ಜಾರ್ಖಂಡ್ ಮೂಲದ ವೃಜೇಶ್ ಕುಮಾರ್ ಎಂಬಾತ ಮಹಿಳೆ ಸೇವಿಸುವ ಪಾನೀಯಕ್ಕೆ ಮಾದಕ ದ್ರವ್ಯ ಬೆರೆಸಿ ದೌರ್ಜನ್ಯ ಎಸಗಿದ್ದ ಎಂಬ ಆರೋಪ ಕೇಳಿಬಂದಿದೆ. ಘಟನೆ ನಡೆದ ಬಳಿಕ ಮಹಿಳೆ ಸಹಾಯಕ್ಕಾಗಿ ಯತ್ನಿಸಿದಾಗ, ಹೋಂಸ್ಟೇ ಮಾಲೀಕ ವಿಶಾಲ್ ಸುಮಾರು ಮೂರು ದಿನಗಳ ಕಾಲ ವೈಫೈ ಸಂಪರ್ಕ ಕಡಿತಗೊಳಿಸಿ, ಮಹಿಳೆಗೆ ಹೊರಗಿನ ಜಗತ್ತಿನೊಂದಿಗೆ ಸಂಪರ್ಕ ಸಿಗದಂತೆ ಮಾಡಿ ಪ್ರಕರಣ ಮುಚ್ಚಿಹಾಕಲು ಯತ್ನಿಸಿದ್ದರು.
ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು ಈಗಾಗಲೇ ವೃಜೇಶ್ ಕುಮಾರ್ ಹಾಗೂ ಮಾಲೀಕ ವಿಶಾಲ್ನನ್ನು ಬಂಧಿಸಿದ್ದಾರೆ. ಘಟನೆಯ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಪ್ರವಾಸೋದ್ಯಮ ಇಲಾಖೆಯು, ಪ್ರವಾಸಿಗರ ಸುರಕ್ಷತೆಯಲ್ಲಿ ವಿಫಲವಾದ ಮತ್ತು ಅಕ್ರಮ ಎಸಗಿದ ಹಿನ್ನೆಲೆಯಲ್ಲಿ ಹೋಂ ಸ್ಟೇ ಪರವಾನಗಿ ರದ್ದುಗೊಳಿಸಿ ಆದೇಶ ಹೊರಡಿಸಿದೆ. ಅಲ್ಲದೇ ಜಿಲ್ಲೆಯ ಎಲ್ಲಾ ಹೋಂಸ್ಟೇಗಳು ಕಡ್ಡಾಯವಾಗಿ ಪ್ರವಾಸಿಗರ ಸುರಕ್ಷತಾ ನಿಯಮಗಳನ್ನು ಪಾಲಿಸಬೇಕು ಎಂದು ಜಿಲ್ಲಾಡಳಿತ ಕಟ್ಟುನಿಟ್ಟಿನ ಸೂಚನೆ ನೀಡಿದೆ.

